ಬೆಂಗಳೂರು (ಜೂ. 11): ಕಳೆದ 3-4 ದಿನಗಳಿಂದ ನಾಪತ್ತೆಯಾಗಿದ್ದ ಮಳೆರಾಯ ಮತ್ತೆ ಬೆಂಗಳೂರನ್ನು ಆವರಿಸಿದ್ದಾನೆ. ಇಂದು ಸಂಜೆಯಿಂದ ಸಿಲಿಕಾನ್ ಸಿಟಿಯ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ರಾಜ್ಯದಲ್ಲಿ ಈಗಾಗಲೇ ಮಾನ್ಸೂನ್ ಶುರುವಾಗಿದೆ. ಉತ್ತರ ಕನ್ನಡ, ಹಾಸನ, ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆಗಾಲದ ಆಗಮನವಾಗಿದೆ. ಜೂನ್ 12ರ ವೇಳೆಗೆ ರಾಜ್ಯದೆಲ್ಲೆಡೆ ಮಳೆಗಾಲ ಶುರುವಾಗಲಿದೆ ಎನ್ನಲಾಗಿತ್ತು. ಅದರಂತೆ ಇಂದು ಸಂಜೆಯಿಂದಲೇ ಬೆಂಗಳೂರಿಗೆ ಮಳೆ ತಂಪೆರೆಯುತ್ತಿದೆ. 1 ಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಸುರಿದ ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ.
ಸಂಜಯನಗರದ ಮುಖ್ಯರಸ್ತೆಯಲ್ಲಿ ಮರ ಬಿದ್ದ ಕಾರಣ ರಾಧಾಕೃಷ್ಣ ಟೆಂಪಲ್ ಮುಂದೆ ವಾಹನ ಸವಾರರು ಸಂಚರಿಸಲು ಪರದಾಡಬೇಕಾಯಿತು. ಬಿದ್ದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್-19: 24 ಗಂಟೆಯಲ್ಲಿ 204 ಕೇಸ್, 3 ಬಲಿ; ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆ
ಬೆಂಗಳೂರಿನ ದಕ್ಷಿಣ ಭಾಗಗಳಾದ ಬಸವನಗುಡಿ, ತ್ಯಾಗರಾಜನಗರ, ಜಯನಗರ, ಬನಶಂಕರಿ, ಬಿ.ಟಿ. ಎಂ ಲೇಔಟ್ನಲ್ಲಿ ತುಂತುರು ಮಳೆಯಾಗಿದೆ. ಚಂದ್ರಾ ಲೇಔಟ್, ಕಾರ್ಪೋರೇಷನ್, ಕೆ.ಆರ್. ಸರ್ಕಲ್, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರ, ಮಲ್ಲೇಶ್ವರಂ, ಬಸವೇಶ್ವರ ನಗರ, ವಿಜಯನಗರ, ರಾಜಾಜಿನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಅನಿರೀಕ್ಷಿತವಾಗಿ ಶುರುವಾದ ಮಳೆಯಿಂದ ಆಫೀಸ್ ಮುಗಿಸಿ, ಮನೆಗೆ ಹೊರಟಿದ್ದವರು ಪರದಾಡುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ