ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆ; ರಾಜ್ಯಾದ್ಯಂತ ಅ. 3ರವರೆಗೆ ಮತ್ತೆ ವರುಣನ ಆರ್ಭಟ
Bangalore Rain: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅ. 1ರವರೆಗೆ ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕದಲ್ಲೂ ಅ. 3ರವರೆಗೆ ಮಳೆಯ ಆರ್ಭಟ ಹೆಚ್ಚಾಗಲಿದೆ.
ಬೆಂಗಳೂರು (ಸೆ. 29): ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಕಡಿಮೆಯಾಗಿತ್ತು. ಸಂಜೆಯ ವೇಳೆ ಮೋಡ ಮುಸುಕಿದ ವಾತಾವರಣ ಉಂಟಾಗಿ, ಕೆಲವೆಡೆ ಮಾತ್ರ ತುಂತುರು ಮಳೆಯಾಗಿತ್ತು. ಆದರೆ, ಇಂದು ಮಧ್ಯಾಹ್ನದಿಂದ ಬೆಂಗಳೂರಿನ ಹಲವೆಡೆ ಮತ್ತೆ ಮಳೆಯ ಆಗಮನವಾಗಿದೆ. ನಗರದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ. ರೇಸ್ ಕೋರ್ಸ್ ರಸ್ತೆ, ಮಲ್ಲೇಶ್ವರಂ, ಬಸವನಗುಡಿ, ಜಯನಗರ, ಬನಶಂಕರಿ, ಶೇಷಾದ್ರಿಪುರಂ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಇದೇರೀತಿ ಇಂದಿನಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೂಡ ಮತ್ತೆ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಅಲ್ಲಲ್ಲಿ ಮಳೆಯಾಗಿತ್ತು. ಇಂದು ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿತ್ತು. ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿತ್ತು. ಆದರೆ, ಇಂದು ಮತ್ತು ನಾಳೆ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಹಾಗೇ, ಅಕ್ಟೋಬರ್ 1ರಿಂದ 3ರವರೆಗೆ ಸಾಧಾರಣ ಮಳೆಯಾಗಲಿದೆ. ಇಂದು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಬೆಂಗಳೂರು, ಕೋಲಾರ, ಬಳ್ಳಾರಿಯಲ್ಲಿ ಇಂದು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅಕ್ಟೋಬರ್ 1ರವರೆಗೆ ಸಾಧಾರಣ ಮಳೆಯಾಗಲಿದೆ. ಬಳ್ಳಾರಿಯಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಮಳೆಯಿಂದಾಗಿ ಹಂಪಿಯ ವಿಜಯ ವಿಠ್ಠಲ ದೇವಾಲಯದ ಐತಿಹಾಸಿಕ ಸಾಲು ಮಂಟಪ ಕುಸಿದುಬಿದ್ದಿದೆ. ಈ ಮಂಟಪವನ್ನು ಜೀರ್ಣೋದ್ದಾರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ, ಕೊಡಗಿನ ಮಳೆ ಈಗ ಉತ್ತರ ಕರ್ನಾಟಕದತ್ತ ಸಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ