ಬೆಂಗಳೂರು (ಡಿ. 8): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕೇರಳ, ತಮಿಳುನಾಡಿನಲ್ಲಿ ಚಂಡಮಾರುತ ಎದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಹಲವು ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಇಂದಿನ ಭಾರತ್ ಬಂದ್ನ ನಡುವೆ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆ ಶುರುವಾಗಿದೆ. ಬೆಳಗ್ಗೆಯಿಂದ ಸತತ 4 ಗಂಟೆಯಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿರುವ ಭಾರತ್ ಬಂದ್ಗೆ ಮಳೆಯಿಂದ ಅಡ್ಡಿಯಾಗುವ ಸಾಧ್ಯತೆ ಎದುರಾಗಿದೆ.
ಬೆಂಗಳೂರಿನ ದಾಸರಹಳ್ಳಿ, ಪೀಣ್ಯ, ಗೊರಗುಂಟೆಪಾಳ್ಯ, ಬಸವನಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆ, ನೆಲಮಂಗಲ ಸೇರಿದಂತೆ ವಿವಿಧೆಡೆ ಮುಂಜಾನೆಯಿಂದಲೇ ವರುಣನ ಸಿಂಚನವಾಗಿದೆ. ಮಳೆಯಿಂದ ಬೈಕ್ ಸವಾರರು ಪರದಾಡುತ್ತಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಇನ್ನೂ 5 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ತೀರ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ. 12ರವರೆಗೂ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇನ್ನು 5 ದಿನಗಳ ಕಾಲ ಅಂದರೆ ಡಿ. 12ರವರೆಗೂ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಇನ್ನು 2 ದಿನ ಗರಿಷ್ಠ 24 ಹಾಗೂ ಕನಿಷ್ಟ 19 ಡಿಗ್ರಿ ಸೆಲ್ಷಿಯಸ್ ತಾಪಮಾನ ಇರಲಿದ್ದು, ಚಳಿ ಹೆಚ್ಚಾಗಲಿದೆ. ಜೊತೆಗೆ ತುಂತುರು ಮಳೆಯೂ ಸುರಿಯು ಸಾಧ್ಯತೆ ಇರುವುದರಿಂದ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎಂದು ಕೂಡ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅದರಂತೆ ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ.
ಇದನ್ನೂ ಓದಿ: Bharat Bandh - ರಾಜ್ಯದಲ್ಲಿ ಬೆಳಗ್ಗೆ 6ರಿಂದಲೇ ಭಾರತ್ ಬಂದ್; ಜಿಟಿ ಮಳೆಯ ನಡುವೆಯೂ ರೈತರ ಪ್ರತಿಭಟನೆ
ಇದರ ಜೊತೆಗೆ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ ಭಾಗದಲ್ಲಿ ಕೂಡ ಡಿ. 10ರಿಂದ 12ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಕೆಲವೆಡೆ ಇಂದು ಮಳೆಯಾಗುತ್ತಿದ್ದು, ಉಳಿದೆಡೆ ಮೋಡ ಮುಸುಕಿದ ವಾತಾವರಣವಿದೆ. ಆದರೆ, ಇಂದು ಸಂಜೆ 5 ಗಂಟೆಯ ಬಳಿಕ ಮಳೆಯಾಗುವ ಸಾಧ್ಯತೆಯಿದೆ.
ನಿನ್ನೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜೋರಾಗಿಯೇ ಮಳೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡದಲ್ಲಿ ಸೋಮವಾರ ಮಳೆಯಾಗಿದೆ. ಹಾಸನದಲ್ಲಿ ಜೋರಾಗಿಯೇ ಮಳೆ ಸುರಿದಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಮಳೆ ಅಬ್ಬರಿಸಿದೆ. ಇಂದು ಕೂಡ ಮಳೆ ಮುಂದುರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ