news18-kannada Updated:December 4, 2020, 9:16 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಡಿ. 4): ಈಗಾಗಲೇ ಚಳಿಯಿಂದ ತತ್ತರಿಸಿರುವ ಬೆಂಗಳೂರಿಗರು ನಿನ್ನೆ ಸುರಿದ ಮಳೆಯಿಂದ ಮತ್ತಷ್ಟು ಥರಗುಟ್ಟಿದ್ದಾರೆ. ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಅಪ್ಪಳಿಸಲಿರುವ ಬುರೇವಿ ಚಂಡಮಾರುತದ ಪರಿಣಾಮದಿಂದ ನಿನ್ನೆಯಿಂದ ಬೆಂಗಳೂರಿನಲ್ಲಿ ಮಳೆ ಶುರುವಾಗಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಮುಂಜಾನೆಯಿಂದಲೇ ಬೆಂಗಳೂರಿನ ಕತ್ರಿಗುಪ್ಪೆ, ಬಸವನಗುಡಿ, ಜಯನಗರ ಮುಂತಾದ ಕಡೆ ತುಂತುರು ಮಳೆಯಾಗಿದೆ. ಉಳಿದೆಡೆ ಮೋಡ ಕವಿದ ವಾತಾವರಣವಿದ್ದು, ಇಂದು ಇಡೀ ದಿನ ಆಗಾಗ ತುಂತುರು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದಲ್ಲಿ ಬುರೇವಿ ಚಂಡಮಾರುತದ ಅಬ್ಬರ ಶುರುವಾಗಿದೆ. ಇಂದು ಬೆಳಗ್ಗೆ ಬುರೇವಿ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಹಾದು ಹೋಗಲಿದೆ. ಬಳಿಕ ಕೇರಳದಲ್ಲೂ ಚಂಡಮಾರುತ ಅಪ್ಪಳಿಸಲಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು ಮತ್ತು ಕೇರಳದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಮೇಲೂ ಬುರೇವಿ ಚಂಡಮಾರುತದ ಪ್ರಭಾವ ಉಂಟಾಗಲಿದೆ. ನಿನ್ನೆ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆ ಶುರುವಾಗಿದೆ.
ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯಾಗಲಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಡಿ. 6 ಮತ್ತು 7ರಂದು ಕೂಡ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಭಾರೀ ಚಳಿ ಶುರುವಾಗಿದ್ದು, ಇದೀಗ ನಿನ್ನೆಯಿಂದ ಮಳೆಯೂ ಸುರಿಯುತ್ತಿರುವುದರಿಂದ ಚಳಿ ಇನ್ನಷ್ಟು ಹೆಚ್ಚಾಗಿದೆ.
ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ತುಮಕೂರು, ಮೈಸೂರು, ಶಿವಮೊಗ್ಗ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ. ಬುರೇವಿ ಚಂಡಮಾರುತದ ಪರಿಣಾಮ ಈ ಜಿಲ್ಲೆಗಳ ಮೇಲೂ ಉಂಟಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Karnataka Rain: ಬುರೇವಿ ಚಂಡಮಾರುತದ ಪರಿಣಾಮ; ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 10 ಗಂಟೆಯ ನಂತರ ತುಂತುರು ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಡೀ ದಿನ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಮಧ್ಯಾಹ್ನ 2 ಗಂಟೆಯ ಬಳಿಕ ಮತ್ತೆ ಮಳೆಯಾಗಲಿದೆ. ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಆಫೀಸಿನಿಂದ ಮನೆಗೆ ತೆರಳುವವರಿಗೆ ಮಳೆಯಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ರಾತ್ರಿ 9 ಗಂಟೆಯ ನಂತರ ಮಳೆ ಕಡಿಮೆಯಾಗಲಿದೆ.
ಕೇರಳದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆಯ ಆರ್ಭಟ ಭಾರೀ ಹೆಚ್ಚಾಗಲಿದೆ. ಹೀಗಾಗಿ, ರೆಡ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ರಾತ್ರಿಯೇ ಶ್ರೀಲಂಕಾವನ್ನು ಹಾದು ಹೋಗಿರುವ ಬುರೇವಿ ಚಂಡಮಾರುತ ನಿನ್ನೆ ಸಂಜೆಯೇ ತಮಿಳುನಾಡನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮೊದಲು ಮುನ್ಸೂಚನೆ ನೀಡಿತ್ತು. ಆದರೆ, ನಿನ್ನೆ ದಕ್ಷಿಣ ಭಾರತಕ್ಕೆ ಚಂಡಮಾರುತ ಅಪ್ಪಳಿಸದ ಕಾರಣ ಇಂದು ಬೆಳಗ್ಗೆ ತಮಿಳುನಾಡಿನ ಕರಾವಳಿ ತೀರಕ್ಕೆ ಬುರೇವಿ ಸೈಕ್ಲೋನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಪರಿಣಾಮ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಮೇಲೂ ಉಂಟಾಗಲಿದೆ.
Published by:
Sushma Chakre
First published:
December 4, 2020, 9:16 AM IST