ಫುಡ್​ ಡೆಲಿವರಿ ಸಂಸ್ಥೆಗಳಿಗೆ ಟ್ವಿಟರ್​ನಲ್ಲಿ ಎಚ್ಚರಿಕೆ ನೀಡಿ ನಗೆ ಪಾಟಲಿಗೀಡಾದ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್..!

ನಗರ ಪೊಲೀಸ್​ ಆಯುಕ್ತರಾದವರು ನೇರವಾಗಿ ಕಾನೂನು ಕ್ರಮ ಜರುಗಿಸುವುದನ್ನು ಬಿಟ್ಟು, ಟ್ವಿಟರ್​ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಡೆಲಿವರಿ ಉದ್ಯೋಗಿಗಳ ಸಮಯವನ್ನು 30 ರಿಂದ 40 ನಿಮಿಷಕ್ಕೆ ಏರಿಸಿ ಎಂದು ಆನ್​ಲೈನ್​ ಫುಡ್ ಡೆಲಿವರಿ ಕಂಪೆನಿಗಳ ಎದುರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ?

MAshok Kumar | news18-kannada
Updated:January 21, 2020, 7:19 PM IST
ಫುಡ್​ ಡೆಲಿವರಿ ಸಂಸ್ಥೆಗಳಿಗೆ ಟ್ವಿಟರ್​ನಲ್ಲಿ ಎಚ್ಚರಿಕೆ ನೀಡಿ ನಗೆ ಪಾಟಲಿಗೀಡಾದ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್..!
ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​.
  • Share this:
ಬೆಂಗಳೂರು: ಭಾಸ್ಕರ್ ರಾವ್ ನಗರ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ 5 ತಿಂಗಳಾಗಿದೆ. ಆದರೆ, ಈವರೆಗೆ ಅವರು ಟ್ವಿಟರ್ ನಲ್ಲಿ ಅಥವಾ ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಿರುವ ನಿದರ್ಶನಗಳು ತೀರಾ ವಿರಳ. ಆದರೆ, ಇಂದು ಅವರು ಮಾಡಿರುವ ಆ ಒಂದು ಟ್ವೀಟ್​​ ಸಾಮಾಜಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ, ಮೆಚ್ಚುಗೆಯ ಜೊತೆಗೆ ನಗೆಪಾಟಲಿಗೂ ಗುರಿಯಾಗಿದೆ.

ಇಂದು ಟ್ವೀಟ್​ ಮೂಲಕ ಆನ್​​ಲೈನ್ ಫುಡ್​ ಡೆಲಿವರಿ ಕಂಪೆನಿಗಳಿಗೆ ಎಚ್ಚರಿಕೆ ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್, "​ಆನ್​ಲೈನ್​ ಫುಡ್​ ಡೆಲಿವರಿ ಕಂಪೆನಿಗಳು ಗ್ರಾಹಕರಿಗಾಗಿ 30 ನಿಮಿಷದೊಳಗೆ ಆಹಾರವನ್ನು ತಲುಪಿಸುತ್ತಿವೆ. ಆದರೆ, ಆಹಾರ ಸರಿಯಾದ ಸಮಯದೊಳಕ್ಕೆ ತಲುಪಿಸಲು ಡೆಲಿವರಿ ಬಾಯ್​ಗಳು ಹರ ಸಾಹಸ ಪಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರವನ್ನು ತಲುಪಿಸುವ ಸಲುವಾಗಿ  ಟ್ರಾಫಿಕ್​ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಹಾಗಾಗಿ ಫುಡ್​ ಡೆಲಿವರಿ ಕಂಪೆನಿಗಳು ಡೆಲಿವರಿ ಉದ್ಯೋಗಿಗಳ ಸಮಯವನ್ನು 30 ರಿಂದ 40 ನಿಮಿಷಕ್ಕೆ ಹೆಚ್ಚಿಸಬೇಕು" ಎಂದು ಟ್ವೀಟ್​ ಮಾಡಿದ್ದರು.ಆದರೆ, ಇದಕ್ಕೆ ಟ್ವೀಟ್​ ಮೂಲಕವೇ ಉತ್ತರಿಸಿರುವ ಸ್ವಿಗ್ಗಿ ಕಂಪೆನಿ, "ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಯಾರಾದರು ಡೆಲಿವರಿ ಉದ್ಯೋಗಿಗಳು ನಿಯಮ ಉಲ್ಲಂಘನೆ ಮಾಡಿದ್ದು, ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು 080-46866699 ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ" ಎಂದು ತಿಳಿಸಿತ್ತು.


ಸ್ವಿಗ್ಗಿ ಪ್ರತಿಕ್ರಿಯೆಗೆ ಸಿಟ್ಟಿಗೆದ್ದ ಭಾಸ್ಕರ್ ರಾವ್, "ನಿಮ್ಮ ಕಿರಿಕ್‍ನಿಂದಾಗಿ ಡೆಲಿವರಿ ಉದ್ಯೋಗಿಗಳು ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರೊಂದಿಗೆ  ಬಿಟ್ಟು ಬಿಡಿ ಸರ್, ಇಲ್ಲದಿದ್ದರೆ ನಮಗೆ ತೊಂದರೆಯಾಗುತ್ತೆ, ಸರಿಯಾದ ಸಮಯಕ್ಕೆ ಡೆಲಿವರಿ ಮಾಡಬೇಕು ಎಂದು ಬೇಡಿಕೊಳ್ಳುತ್ತಾರೆ. ಅಧಿಕ ಸಂಖ್ಯೆಯಲ್ಲಿ ರಸ್ತೆ ನಿಯಮ ಉಲ್ಲಂಘನೆಯಾಗುತ್ತಿರುವುದು ನಿಮ್ಮ ಡೆಲಿವರಿ ಉದ್ಯೋಗಗಳಿಂದಲೇ. ಯಾರಾದರೂ ಡೆಲಿವರಿ ಉದ್ಯೋಗಿಗಳಿಗೆ ಆಕ್ಸಿಡೆಂಟ್ ಆಗಿ ಸಮಸ್ಯೆಯಾಗಬೇಕು, ಆಗ ನಿಮ್ಮ ಸ್ವಿಗ್ಗಿ ಮ್ಯಾನೇಜ್ ಮೆಂಟ್ ನವರು ಕಂಬಿ ಹಿಂದೆ ಇರಬೇಕಾಗುತ್ತೆ" ಎಂದು ಟ್ವೀಟ್​ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.ಅಸಲಿಗೆ ನಗರದಲ್ಲಿ ಸ್ವಿಗ್ಗಿ, ಜೋಮಾಟೋ ಸೇರಿದಂತೆ ಅನೇಕ ಖಾಸಗಿ ಫುಡ್​ ಡೆಲಿವರಿ ಸಂಸ್ಥೆಗಳು, ಮೆಕ್​ ಡೊನಾಲ್ಡ್​, ಫಿಜಾ ಹಟ್​, ಡೋಮಿನೋಸ್​ ನಂತರ ಫಿಜಾ ಸಂಸ್ಥೆಗಳು ಸೇರಿದಂತೆ ಹಲವಾರು ಆನ್​ಲೈನ್​ ಕಂಪೆನಿಗಳು ಜನರಿಗೆ ಕುಂತಲ್ಲೇ ಆಹಾರವನ್ನು ತಲುಪಿಸುತ್ತಿವೆ. ಗ್ರಾಹಕರಿಗೆ ಆಹಾರವನ್ನು 30 ನಿಮಿಷದ ಒಳಗಾಗಿ ತಲುಪಿಸಲು ಸಾಧ್ಯವಾಗದಿದ್ದರೆ ಹಣ ವಾಪಸ್​ ಎಂಬ ಭರವಸೆಯನ್ನೂ ನೀಡಿವೆ.

ಆದರೆ, ಖಾಸಗಿ ಫುಡ್​ ಡೆಲಿವರಿ ಸಂಸ್ಥೆಗಳು ಹೀಗೆ ನೀಡುವ ಭರವಸೆ ಆಹಾರವನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡುವ ಉದ್ಯೋಗಿಗಳ ಜೀವಕ್ಕೆ ಮಾರಕವಾಗಿರುವುದು ಸುಳ್ಳಲ್ಲ. ಸಮಯಕ್ಕೆ ಸರಿಯಾಗಿ ಆಹಾರವನ್ನು ತಲುಪಿಸುವ ಸಲುವಾಗಿ ಈ ಉದ್ಯೋಗಿಗಳು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಸಿಗ್ನಲ್​ ಜಂಪ್​ ಸೇರಿದಂತೆ ಸಾಕಷ್ಟು ಸಂಚಾರಿ ನಿಮಯವನ್ನು ಉಲ್ಲಂಘಿಸುತ್ತಿದ್ದಾರೆ. ಈ ಮೂಲಕ ಅವರ ಜೀವ ಮಾತ್ರವಲ್ಲ ಇತರರ ಜೀವಕ್ಕೂ ಸಂಚಕಾರ ತರುವವರಿದ್ದಾರೆ ಎಂಬ ಆರೋಪ ಹಲವು ದಿನಗಳಿಂದಲೂ ಇದೆ.

ಅಸಲಿಗೆ ಇಂತಹ ಆರೋಪಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಆ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ಆದರೆ, ಅದಕ್ಕೊಂದು ನಿಯಮ ಎಂಬುದು ಇದೆ. ನಗರದ ಪೊಲೀಸ್​ ಆಯುಕ್ತರಾದವರು ಕೇವಲ ಒಂದು ಕರೆ ಮಾಡಿದರೆ ಸಾಕು ಈ ಎಲ್ಲಾ ​ಕಂಪೆನಿಗಳ ಆಡಳಿತ ವರ್ಗ ಮರು ದಿನವೇ ಆಯುಕ್ತರ ಕಚೇರಿ ಎದುರು ಸಾಲುಗಟ್ಟಿ ನಿಂತು ಆರೋಪದ ಕುರಿತು ಸ್ಪಷ್ಟನೆ ನೀಡಬೇಕಾಗುತ್ತದೆ. ಈ ಕಂಪೆನಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಎಲ್ಲಾ ಅಧಿಕಾರ ಪೊಲೀಸ್​ ಆಯುಕ್ತರಿಗಿದೆ. ಹಾಗೂ ಇದಕ್ಕೆ ಅವರು ಸರ್ವ ಸ್ವತಂತ್ರ್ಯರೂ ಕೂಡ ಹೌದು..!

ಆದರೆ, ನಗರ ಪೊಲೀಸ್​ ಆಯುಕ್ತರಾದವರು ನೇರವಾಗಿ ಕಾನೂನು ಕ್ರಮ ಜರುಗಿಸುವುದನ್ನು ಬಿಟ್ಟು, ಟ್ವಿಟರ್​ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಡೆಲಿವರಿ ಉದ್ಯೋಗಿಗಳ ಸಮಯವನ್ನು 30 ರಿಂದ 40 ನಿಮಿಷಕ್ಕೆ ಏರಿಸಿ ಎಂದು ಆನ್​ಲೈನ್​ ಫುಡ್ ಡೆಲಿವರಿ ಕಂಪೆನಿಗಳ ಎದುರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ?.

ಒಟ್ಟಲ್ಲಿ ಭಾಸ್ಕರ್​ ರಾವ್​ ಅವರ ಉದ್ದೇಶ ಸರಿ ಇದೆ. ಅವರ ಟ್ವೀಟ್​ ಎಚ್ಚರಿಕೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ಮೆಚ್ಚುಗೆಯನ್ನೇನೋ ಗಳಿಸಿದೆ. ಆದರೆ, ಮತ್ತೊಂದು ವರ್ಗ ಸೂಕ್ತ ಕಾನೂನು ಕ್ರಮ ಜರುಗಿಸುವುದನ್ನು ಬಿಟ್ಟು ಆಯುಕ್ತರು ಹೀಗೆ ಟ್ವಿಟ್​ ​ನಲ್ಲಿ ಎಚ್ಚರಿಕೆ ನೀಡುವ ಮೂಲಕ ಏನು ಸಾಧಿಸಿದಂತಾಯ್ತು? ಇದರಿಂದ ಏನು ಉಪಯೋಗ? ಎಂದು ಹಾಸ್ಯಕ್ಕೆ ಗುರಿ ಮಾಡಿದ್ದಾರೆ.

ಹೀಗಾಗಿ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಈ ಟ್ವಿಟ್​ಗಳನ್ನು​ ಪಕ್ಕಕ್ಕಿಟ್ಟು ಕಾನೂನು ಸುವ್ಯವಸ್ಥೆಯನ್ನು ಕಾನೂನಾತ್ಮಕವಾಗಿಯೇ ಪಾಲಿಸಬೇಕು ಎಂಬುದು ಎಲ್ಲರ ಆಶಯ.

ಇದನ್ನೂ ಓದಿ : ಫುಡ್​ ಡೆಲಿವರಿ ಸಮಯವನ್ನು 40 ನಿಮಿಷಕ್ಕೆ ಹೆಚ್ಚಿಸಿ, ಇಲ್ಲ ಕಂಬಿ ಎಣಿಸಲು ಸಿದ್ಧರಾಗಿ: ಸ್ವಿಗ್ಗಿ ಸಂಸ್ಥೆಯನ್ನು ಬೆಂಡೆತ್ತಿದ ಬೆಂಗಳೂರು ಕಮೀಷನರ್
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ