ಬೆಂಗಳೂರಿನಲ್ಲಿ ಚಾಕು ತೋರಿಸಿ ಬೈಕ್ ನಲ್ಲೇ ಕಿಡ್ನ್ಯಾಪ್; ಪೊಲೀಸರಿಂದ ಇಬ್ಬರು ಅಪಹರಣಕಾರರ ಬಂಧನ

ಇದೇ ತಿಂಗಳು 14 ರಂದು ಹೊಸೂರು ರಸ್ತೆ ಮಾರ್ಗವಾಗಿ ಕದಿರೇನಹಳ್ಳಿ ಮುಖ್ಯರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಭರಣಿಯೇಂದ್ರನ್ ಎಂಬುವರು ಅಪಹರಣಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಆಗಸ್ಟ್​. 19) : ಇಷ್ಟು ದಿನಗಳ ಕಾಲ ಕಾರು, ಟೆಂಪೊ ಸೇರಿದಂತೆ ವಿವಿಧ ವಾಹನಗಳಲ್ಲಿ  ಹಣಕ್ಕಾಗಿ ಕಿಡ್ನ್ಯಾಪ್ ಮಾಡುತ್ತಿದ್ದ ಅಪಹರಣಕಾರರು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ರಾತ್ರಿ ವೇಳೆ ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೈಕ್ ನಲ್ಲಿ ಕಿಡ್ನ್ಯಾಪ್ ಮಾಡುವ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿದೆ‌. ಚಾಕು ಹಿಡಿದು ರಾತ್ರಿ ವೇಳೆ ಬೈಕ್ ಸವಾರರನ್ನು ಅಪಹರಿಸಿ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌.  ಕದಿರೇನಹಳ್ಳಿ ನಿವಾಸಿಗಳಾದ ಸಂತೋಷ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು‌‌. ಇದೇ ತಿಂಗಳು 14 ರಂದು ಹೊಸೂರು ರಸ್ತೆ ಮಾರ್ಗವಾಗಿ ಕದಿರೇನಹಳ್ಳಿ ಮುಖ್ಯರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಭರಣಿಯೇಂದ್ರನ್ ಎಂಬುವರು ಅಪಹರಣಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ದರೋಡೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದ ಸಂತೋಷ್ ಆಲಿಯಾಸ್ ಹುಚ್ಚುನಾಯಿ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿ ಇತ್ತೀಚೆಗೆ ಹೊರ ಬಂದಿದ್ದ.‌

ಕುಡಿತದ ಚಟಿದಿಂದ ಸಂತೋಷ್, ಸಹಚರ ರಾಜೇಶ್ ಜೊತೆ ಸೇರಿಕೊಂಡು ಹಣಕ್ಕಾಗಿ ಅಪಹರಣಕ್ಕೆ ಹೊಂಚು ಹಾಕಿದ್ದಾರೆ. ಇದರಂತೆ ಆಗಸ್ಟ್​ 14 ರಂದು‌ ರಾತ್ರಿ ಬೈಕ್ ನಲ್ಲಿ ಬರುತ್ತಿದ್ದ ಭರಣಿಯೇಂದ್ರನ್ ಅವರ ಬೈಕ್ ಅಡ್ಡಗಟ್ಟಿ ಯಾಕೆ ನಮ್ಮನ್ನು ಫಾಲೋ ಮಾಡುತ್ತಾ ಇದೀಯಾ ಎಂದು ಜಗಳ ತೆಗೆದಿದ್ದಾರೆ.‌ ‌ಬಳಿಕ ನಿರ್ಜನ ಪ್ರದೇಶಕ್ಕೆ‌ ಕರೆದೊಯ್ದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಡ ಹಾಕಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಅಳವಡಿಕೆಗೆ ಕ್ರಮ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಭಯಗೊಂಡಿದ್ದ ಭರಣೀಯೇಂದ್ರನ್ ನ ಜೇಬಿನಲ್ಲಿದ್ದ ಎಂಟು ಸಾವಿರ ರೂಪಾಯಿ ನಗದು, ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಕಸಿದಿದ್ದಾರೆ‌. ಬಳಿಕ ಅಪಹರಣಕಾರರ ಬೈಕಿನಲ್ಲಿ ಚಾಕು ತೋರಿಸಿಕೊಂಡು ಊರು ಸುತ್ತಿಸಿದ್ದಾರೆ‌. ಬಳಿಕ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಿರುವ ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಎಟಿಎಂ ಕಾರ್ಡ್ ನಿಂದ ತಲಾ  10 ಸಾವಿರ ಎರಡು ಬಾರಿ ಸ್ವೈಪ್ ಮಾಡಿಸಿಕೊಂಡು ಹಣ ಪಡೆದು ಆರೋಪಿಗಳು ಎಸ್ಕೇಪ್ ಆಗಿದ್ದರು‌.

ನಡೆದ ವಿಷಯ ಬಗ್ಗೆ ಭರಣೀಯೇಂದ್ರನ್​​  ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ ಪ್ರಕರಣ ದಾಖಲಾಗಿವೆ.
Published by:G Hareeshkumar
First published: