ಸಬ್ಸಿಡಿ ದರದಲ್ಲಿ ಮದ್ಯ, ರಾತ್ರಿ 2 ಗಂಟೆವರೆಗೆ ಬಾರ್​​​: 21 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್​; ಸಚಿವ ನಾಗೇಶ್​

Bengaluru Nightlife: ಇದೀಗ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿರುವ ಅಬಕಾರಿ ಸಚಿವ ನಾಗೇಶ್​, ಪ್ರತಿನಿತ್ಯ ಮಧ್ಯರಾತ್ರಿ 2 ಗಂಟೆಯವರೆಗೆ ಮದ್ಯ ಮಾರಾಟ ಮಾಡಲಾಗುವುದು ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಗೃಹ ಇಲಾಖೆ ಕೂಡ ಈ ನಿರ್ಧಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ

news18-kannada
Updated:December 31, 2019, 1:54 PM IST
ಸಬ್ಸಿಡಿ ದರದಲ್ಲಿ ಮದ್ಯ, ರಾತ್ರಿ 2 ಗಂಟೆವರೆಗೆ ಬಾರ್​​​: 21 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್​; ಸಚಿವ ನಾಗೇಶ್​
ಅಬಕಾರಿ ಸಚಿವ ಎಚ್​ ನಾಗೇಶ್​
  • Share this:
ಬೆಂಗಳೂರು: ಹೊಸವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮದ್ಯದಂಗಡಿಗಳು ರಾತ್ರಿ 2 ಗಂಟೆಯವರೆಗೂ ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅಬಕಾರಿ ಸಚಿವ ಎಚ್​ ನಾಗೇಶ್​ ತಿಳಿಸಿದ್ದಾರೆ. ಈ ಹಿಂದೆ ಮನೆಮನೆಗೂ ಅಬಕಾರಿ ಇಲಾಖೆಯೇ ಮದ್ಯ ಡೆಲಿವರಿ ಮಾಡುವ ಬಗ್ಗೆ ಹೇಳಿಕೆ ಕೊಟ್ಟು ವಿವಾದಕ್ಕೀಡಾಗಿದ್ದ ನಾಗೇಶ್​, ಈಗ ಅಬಕಾರಿ ಇಲಾಖೆಯ ಮಹತ್ತರ ಯೋಜನೆಯನ್ನು ಮುಂದಿಟ್ಟಿದ್ದಾರೆ. 

ರಾತ್ರಿ 2 ಗಂಟೆಯ ವರೆಗೆ ಬಾರ್​ಗಳು ಓಪನ್​ ಇದ್ದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹಣ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ನಾಗೇಶ್​, ರಾಜಸ್ವ ಸಂಗ್ರಹಕ್ಕೆ ಟಾರ್ಗೆಟ್ ನಿಗದಿಯಾಗಿರುವುದನ್ನು ತಿಳಿಸಿದರು. 20,950 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನವೆಂಬರ್​ ಅಂತ್ಯದ ವರೆಗೆ ಒಟ್ಟೂ 14,400 ಕೋಟಿ ರೂ. ಸಂಗ್ರಹವಾಗಿದೆ ಎಂದ ಅವರು, ಡಿಸೆಂಬರ್ ತಿಂಗಳಾಂತ್ಯಕ್ಕೆ 1700 ಕೋಟಿ ರೂಗಳಷ್ಟು ಹೆಚ್ಚು ಸಂಗ್ರಹವಾಗಲಿದೆ ಎಂದಿದ್ದಾರೆ.

ಅಂದರೆ 2019ರಲ್ಲಿ ಒಟ್ಟು 16,100 ಕೋಟಿ ರಾಜಸ್ವ ಸಂಗ್ರಹವಾದಂತಾಗುತ್ತದೆ. ಇನ್ನು 3 ತಿಂಗಳೊಳಗೆ ಟಾರ್ಗೆಟ್ ಮುಟ್ಟುತ್ತೇವೆ ಎಂದು ನಾಗೇಶ್​ ಮಾಹಿತಿ ನೀಡಿದರು.

ಸಬ್ಸಿಡಿಯಲ್ಲಿ ಮದ್ಯ?:

ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಪೂರೈಕೆ ಮಾಡುವ ಬಗ್ಗೆಯೂ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ನಾಗೇಶ್​ ಹೇಳಿದರು. ಬಡ ಜನರು ಹೆಚ್ಚು ಬಳಸುವ ಮದ್ಯವನ್ನು ಕಡಿಮೆ ದರ, ಅಂದರೆ  ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲು ಚಿಂತಿಸಲಾಗಿದೆ ಎಂದು ನಾಗೇಶ್​ ಹೇಳಿದರು. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ನೀಡುವುದು ಸರ್ಕಾರದ ಚಿಂತನೆಯಾಗಿದೆ. ಈ ಮೂಲಕ ಬಡ ಜನರ ಆರೋಗ್ಯ ಕೂಡ ಹದಗೆಡದಂತೆ ಕಾಪಾಡಬಹುದು ಎಂದು ಅವರು ತಿಳಿಸಿದರು. ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಅಗ್ಗದ ಮದ್ಯವನ್ನು ಕುಡಿಯುತ್ತಾರೆ. ಅದರಿಂದ ಕರುಳು ಸಂಬಂಧಿ ಖಾಯಿಲೆಗೆ ತುತ್ತಾಗಿ ಸಾಯುವವರ ಸಂಖ್ಯೆ ಹೆಚ್ಚಿದೆ.

ಪ್ರತಿದಿನವೂ ವೀಕೆಂಡ್​:

ಈವರೆಗೆ ರಾತ್ರಿ 11 ಗಂಟೆಯವರೆಗೆ ಬಾರ್​ಗಳು ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಶುಕ್ರವಾರ ಮತ್ತು ಶನಿವಾರ ರಾತ್ರಿ 1 ಗಂಟೆಯವರೆಗೂ ಬಾರ್​ ಮತ್ತು ರೆಸ್ಟೋರೆಂಟ್​ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಅದರಂತೆ ಈಗಲೂ ವೀಕೆಂಡ್​ನಲ್ಲಿ ಬಾರ್​ ಮತ್ತು ರೆಸ್ಟೋರೆಂಟ್​ಗಳು ಹೆಚ್ಚಿನ ಸಮಯ ತೆರೆದಿರುತ್ತವೆ.ಇದೀಗ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿರುವ ಅಬಕಾರಿ ಸಚಿವ ನಾಗೇಶ್​, ಪ್ರತಿನಿತ್ಯ ಮಧ್ಯರಾತ್ರಿ 2 ಗಂಟೆಯವರೆಗೆ ಮದ್ಯ ಮಾರಾಟ ಮಾಡಲಾಗುವುದು ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಗೃಹ ಇಲಾಖೆ ಕೂಡ ಈ ನಿರ್ಧಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಈ ಹೊಸ ಯೋಜನೆಗಳು ಅನುಷ್ಠಾನಕ್ಕೆ ಬಂದರೆ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ನೈಟ್​ಲೈಫ್​ ಇನ್ನಷ್ಟು ರಂಗು ಪಡೆಯಲಿದೆ. ಅದರ ಜತೆಗೆ ರಾಜ್ಯದ ಬೊಕ್ಕಸಕ್ಕೂ ಹೆಚ್ಚಿನ ಆದಾಯ ಬರಲಿದೆ. ಸರ್ಕಾರದ ಈ ನಿರ್ಧಾರದಿಂದ ಸಂಪ್ರದಾಯವಾದಿಗಳು ಸಿಟ್ಟಿಗೇಳುವ ಸಾಧ್ಯತೆಯಿದ್ದರೂ, ಯುವ ಜನತೆ ಮತ್ತು ಮದ್ಯ ಪ್ರಿಯರಿಗಿದು ಸಂತಸದ ಸುದ್ದಿ.

ಇದನ್ನೂ ಓದಿ: ಹಂಚೋದು ನಿಮ್ಮ ದುಡ್ಡಾ? ಬಿಜೆಪಿಯದ್ದಾ?; ರಮೇಶ್ ಜಾರಕಿಹೊಳಿಯ 5 ಕೋಟಿ ರೂ. ಆಫರ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಬಹುತೇಕ ನಗರಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತವೆ. ಆ ಮೂಲಕ ವ್ಯಾಪಾರ ವಹಿವಾಟು ಇಮ್ಮಡಿಯಾಗುತ್ತವೆ. ಈ ನಿಟ್ಟಿನಲ್ಲಿ ಜಾಗತಿಕ ಐಟಿ ಕ್ಯಾಪಿಟಲ್​ ಬೆಂಗಳೂರು ಕೂಡ ಮುಂಬೈ ನಗರಿಯಂತೆ 24 ಗಂಟೆಗಳೂ ವ್ಯಾಪಾರ ವಹಿವಾಟಿಗೆ ಮುಕ್ತವಾದಲ್ಲಿ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು ನಿಶ್ಚಿತ.

ಇದನ್ನೂ ಓದಿ: ಅಸ್ಸಾಂನಲ್ಲಿ ಮದುವೆಯಾಗುವ ವಧುಗಳಿಗೆ ಸರ್ಕಾರದಿಂದ 10 ಗ್ರಾಂ ಚಿನ್ನ; ನಾಳೆಯಿಂದಲೇ ನೂತನ ಯೋಜನೆ ಜಾರಿ

ಗೃಹ ಇಲಾಖೆಯೂ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾತ್ರಿಪಾಳಿಯಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಗಸ್ತು ತಿರುಗಿದರೆ, ಅಪರಾಧ ಕೃತ್ಯಗಳು ಹಿಂದಿಗಿಂತಲೂ ಕಡಿಮೆಯಾಗಲಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು, ಮುಂಚೆಯಾದರೆ ರಾತ್ರಿ 11 ಗಂಟೆಯ ನಂತರ ಆಚೆ ಬರುವ ಜನರ ಸಂಖ್ಯೆ ಕಡಿಮೆಯಿತ್ತು. ಈ ಕಾರಣಕ್ಕಾಗಿ ನಿರ್ಜನ ಪ್ರದೇಶಗಳಲ್ಲಿ ಹೆಚ್ಚೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿತ್ತು. ಒಂದು ವೇಳೆ ಸರ್ಕಾರದ ನೈಟ್​ಲೈಫ್​ ಚಿಂತನೆ ಸರಿಯಾಗಿ ಜಾರಿಯಾದರೆ, ಹಿಂದೆಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚರಿಸುತ್ತಾರೆ. ಜನನಿಬಿಡ ಪ್ರದೇಶಗಳಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ. ಮತ್ತು ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿದ್ದರೆ, ಕಳ್ಳರು, ಕಿಡಿಗೇಡಿಗಳು ಕ್ರೈಂ ಮಾಡುವ ಧೈರ್ಯ ಮಾಡುವುದಿಲ್ಲ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ