news18-kannada Updated:February 18, 2020, 7:21 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು (ಫೆ. 18): ರಾಜ್ಯದಲ್ಲಿ ಅದೆಷ್ಟೇ ಕ್ಯಾಬ್ಗಳು, ಆಟೋ, ಮೆಟ್ರೋ, ಬಾಡಿಗೆ ಬೈಕ್ಗಳು ರಸ್ತೆಗಿಳಿದಿದ್ದರೂ ಬಸ್ಗಳ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪ್ರತಿನಿತ್ಯ ಬೆಳಗಾಗುತ್ತಿದ್ದಂತೆ ಬಸ್ಸನ್ನೇರಿ ತಮ್ಮ ಕೆಲಸಗಳಿಗೆ ಹೊರಡುವ ಲಕ್ಷಾಂತರ ಜನರಿದ್ದಾರೆ. ಆದರೆ, ಹೀಗೆ ಬಸ್ಸನ್ನೇರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಡ್ರೈವರ್ ಮತ್ತು ಕಂಡಕ್ಟರ್ಗಳ ಜೀವವೇ ಆತಂಕದಲ್ಲಿದೆ! ಎಂಬ ಆಘಾತಕಾರಿ ವಿಚಾರ ಇದೀಗ ಅಧ್ಯಯನವೊಂದರಲ್ಲಿ ಬಯಲಾಗಿದೆ.
ಸರ್ಕಾರಿ ಬಸ್ಗಳ ಚಾಲಕರು ವಾಹನ ಚಲಾಯಿಸುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆಗಳನ್ನು ನಾವು ಕೇಳಿದ್ದೇವೆ. ಬ್ರೇಕ್ ಹಾಕಿ ಬಸ್ ನಿಲ್ಲಿಸಿ, ಡ್ರೈವರ್ಗಳು ಸ್ಟೇರಿಂಗ್ ಮೇಲೇ ಪ್ರಾಣಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆಲ್ಲ ಕಾರಣವೇನು? ಎಂಬುದಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆಯ ಅಧ್ಯಯನ ಉತ್ತರ ನೀಡಿದೆ.
ಕೆಎಸ್ಆರ್ಟಿಸಿ ಡ್ರೈವರ್ಗಳ ಜತೆಗೆ ಕಂಡಕ್ಟರ್ಗಳು ಕೂಡ ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವುದರಿಂದಲೇ ಇವರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬುದನ್ನು ರಾಜ್ಯದ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಯನ ಸ್ಪಷ್ಟಪಡಿಸಿದೆ. ಅತಿಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವ ಯಾವುದಾದರೊಂದು ನೌಕರ ವರ್ಗ ಇದೆ ಎಂದರೆ ಅದು ರಸ್ತೆ ಸಾರಿಗೆ ನೌಕರರು. ತೀವ್ರ ಒತ್ತಡದಲ್ಲಿ ಕೆಲಸ ಮಾಡುವುದರಿಂದಲೇ ಅವರ ದೇಹ ಹಾಗೂ ಮನಸು ತೀವ್ರ ಬಳಲುತ್ತಿದೆ. ಇದು ಕೇವಲ ಅವರ ವೃತ್ತಿಯ ಮೇಲಷ್ಟೇ ಅಲ್ಲ, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟುಮಾಡುತ್ತಿರುವುದನ್ನು ಕೂಡ ಸಮೀಕ್ಷೆ ಬಹಿರಂಗಪಡಿಸಿದೆ.
ಇದನ್ನೂ ಓದಿ: ಕ್ಯಾಬ್ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ; ಬೆಂಗಳೂರಲ್ಲಿ ಉಬರ್ ಚಾಲಕನ ಬಂಧನ
ಜಯದೇವ ಹೃದ್ರೋಗ ಸಂಸ್ಥೆ ಇತ್ತೀಚೆಗೆ 500 ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರ್ಗಳು ಹಾಗೂ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಿ, ಕೌನ್ಸಿಲಿಂಗ್ ನಡೆಸಿತ್ತು. ಈ ವೇಳೆ ನಿಜಕ್ಕೂ ಕಳವಳಕಾರಿ ಸಂಗತಿಗಳು ಕಂಡುಬಂದಿವೆ. ಕಚೇರಿಯ ಒಳಗೆ ಕುಳಿತು ಕೆಲಸ ಮಾಡುವ ಸಿಬ್ಬಂದಿ ಒತ್ತಡರಹಿತವಾದ ವಾತಾವರಣದಲ್ಲಿದ್ದರೆ, ಡ್ರೈವರ್ಗಳು ಮತ್ತು ಕಂಡಕ್ಟರ್ಗಳು ಮಾತ್ರ ಅತಿಯಾದ ಒತ್ತಡಕ್ಕೊಳಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಬಹಿರಂಗವಾದ ವಿಚಾರ. ಜಯದೇವ ಆಸ್ಪತ್ರೆಯ ವೈದ್ಯರು ಮಾಡಿದ ಪರೀಕ್ಷೆಯಲ್ಲಿ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ಗಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ನಾವು ಪೌರತ್ವ ಕಾಯ್ದೆ ಬೆಂಬಲಿಸುತ್ತೇವೆ; ಮದುವೆ ಆಹ್ವಾನ ಪತ್ರಿಕೆ ಮೇಲೆ ಬರೆದು ಸಿಎಎ ಬಗ್ಗೆ ವಿಶೇಷ ಅಭಿಯಾನ
ಅವರು ಅತಿಯಾದ ಮಾನಸಿಕ ಒತ್ತಡದಿಂದ ಬಳಲುತ್ತಿರೋದು ಸ್ಪಷ್ಟವಾಗಿದೆ. ಆದರೆ, ಈ ಸಮಸ್ಯೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋರಿಗೆ ಇಲ್ಲವಾಗಿರುವುದು ಆಶ್ಚರ್ಯಕರ. ಒತ್ತಡ ಕಡಿಮೆಯಾಗದಿದ್ದರೆ ಚಾಲಕ ಮತ್ತು ಕಂಡಕ್ಟರ್ಗಳ ಆರೋಗ್ಯಕ್ಕೆ ಆಪತ್ತು ಖಚಿತ ಎನ್ನುವ ಎಚ್ಚರಿಕೆಯನ್ನು ಸರ್ವೆ ಬಹಿರಂಗಗೊಳಿಸಿದೆ. ಪ್ರತಿಷ್ಟಿತ ಜಯದೇವ ಆಸ್ಪತ್ರೆ 500 ಕೆಎಸ್ಆರ್ಟಿಸಿ ಡ್ರೈವರ್-ಕಂಡಕ್ಟರ್ಗಳ ಆರೋಗ್ಯ ತಪಾಸಣೆ ಮಾಡಿತ್ತು. ಮಾನಸಿಕ-ದೈಹಿಕ ದೃಢತೆ ಹಾಗೂ ಸ್ಥಿರತೆ ಬಗ್ಗೆ ಅಧ್ಯಯನ ನಡೆಸಿತ್ತು. ಆಗ ಈ ಕಳವಳಕಾರಿ ಸಂಗತಿ ಹೊರಬಿದ್ದಿದೆ.
ಇದನ್ನೂ ಓದಿ: ಲುಧಿಯಾನಾದಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ; ಗನ್ ತೋರಿಸಿ, 30 ಕೆಜಿ ಚಿನ್ನ ಕದ್ದು ಪರಾರಿ
ದೈಹಿಕ ಹಾಗೂ ಮಾನಸಿಕ ಒತ್ತಡದಿಂದಾಗಿ ಎಲ್ಲರಲ್ಲೂ ಬಿಪಿ, ಶುಗರ್, ಕೊಲೆಸ್ಟ್ರಾಲ್, ಹೃದಯಸಂಬಂಧಿ ಸಮಸ್ಯೆ ಪತ್ತೆಯಾಗಿದೆ. ಜತೆಗೆ ಮಾನಸಿಕ ಕ್ಷೋಭೆ ಅತಿಯಾಗುತ್ತಿದೆ. ಅಪಘಾತ ಹೆಚ್ಚುತ್ತಿರುವುದಕ್ಕೆ ಇದೇ ಕಾರಣಕ್ಕೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಈ ಅಧ್ಯಯನದ ಮೂಲಕ ಡ್ರೈವರ್- ಕಂಡಕ್ಟರ್ಗಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಯದೇವ ಮುಖ್ಯಸ್ಥ ಡಾ. ಮಂಜುನಾಥ್ ಆಡಳಿತ ಮಂಡಳಿಗೆ ಇವರ ಆರೋಗ್ಯ ಕಾಳಜಿ ಮಾಡುವಂತೆ ಸಲಹೆ ನೀಡಿದ್ದಾರೆ.
ಆರೋಗ್ಯದ ವಿಷಯದಲ್ಲಿ ಆತಂಕ ಕಾಡುತ್ತಿರುವುದು ಕೇವಲ ಕೆಎಸ್ಆರ್ಟಿಸಿ- ಬಿಎಂಟಿಸಿ ಡ್ರೈವರ್ಗಳದ್ದಲ್ಲ. ಬಿಎಂಟಿಸಿ ಡ್ರೈವರ್-ಕಂಡಕ್ಟರ್ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರಲ್ಲೂ ಇದೇ ಒತ್ತಡ, ಕ್ಷೋಭೆ ಕಂಡುಬಂದಿದೆ. ದೈಹಿಕ-ಮಾನಸಿಕ ಒತ್ತಡದಲ್ಲೇ ಅವರು ಕೆಲಸ ಮಾಡುತ್ತಿದ್ದಾರೆ ಎಂಬುದು ಕೂಡ ನಿಮ್ಹಾನ್ಸ್ ನಡೆಸಿರುವ ಅಧ್ಯಯನ ವೇಳೆ ಸಾಬೀತಾಗಿದೆ. ಇಂತಹ ಆತಂಕಕಾರಿ ಸಮೀಕ್ಷೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
First published:
February 18, 2020, 7:21 AM IST