ಬೀದಿಗೆ ಬಂತು ಐಪಿಎಸ್​ ಅಧಿಕಾರಿಗಳ ಕೌಟುಂಬಿಕ ಕಲಹ; ಹೆಂಡತಿ ಮನೆ ಮುಂದೆ ಧರಣಿ ಕುಳಿತ ಗಂಡನ ಮನವೊಲಿಕೆ ಯಶಸ್ವಿ

ಇಲಕಿಯಾ ಕರುಣಾಕರನ್ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದಾರೆ. ಅರುಣ್ ರಂಗರಾಜನ್ ಕಲಬುರ್ಗಿಯ ಐಎಸ್​ಡಿಯಲ್ಲಿ ಎಸ್​ಪಿಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಇವರ ನಡುವೆ ಮಗುವಾದ ನಂತರ ಭಿನ್ನಾಭಿಪ್ರಾಯಗಳು ಉಂಟಾಗಿತ್ತು.

ಅರುಣ್ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್

ಅರುಣ್ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್

  • Share this:
ಬೆಂಗಳೂರು (ಫೆ. 10): ಇದುವರೆಗಿನ ವೃತ್ತಿಜೀವನದಲ್ಲಿ ಅದೆಷ್ಟೋ ಕೌಟುಂಬಿಕ ಕಲಹಗಳನ್ನು ನೋಡಿರುವ, ಬಗೆಹರಿಸಿರುವ ಐಪಿಎಸ್​ ಅಧಿಕಾರಿಗಳ ಮನೆ ಜಗಳ ಈಗ ಬೀದಿಗೆ ಬಂದಿದೆ. ಕುಟುಂಬದಲ್ಲಿ ನೆಮ್ಮದಿ ಇಲ್ಲ, ಹೆಂಡತಿ ನನ್ನ ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಮೂಲದ ಐಪಿಎಸ್​ ಅಧಿಕಾರಿ ಅರುಣ್ ರಂಗರಾಜನ್ ಬೆಂಗಳೂರಿನಲ್ಲಿರುವ ಹೆಂಡತಿ ಇಲಕಿಯಾ ಕರುಣಾಕರನ್ಅ ವರ ಸರ್ಕಾರಿ ನಿವಾಸದ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ದರು. ಭಾನುವಾರ ಮಧ್ಯರಾತ್ರಿ ಐಪಿಎಸ್​ ಅಧಿಕಾರಿ ಭೀಮಾಶಂಕರ್ ಗುಳೇದ್ ಮನವೊಲಿಸಿದ ನಂತರ ಅರುಣ್ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ತಮಿಳುನಾಡು ಮೂಲದ ಅರುಣ್ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್ ಇಬ್ಬರೂ ಐಪಿಎಸ್​ ಅಧಿಕಾರಿಗಳು. ಇಲಕಿಯಾ ಕರುಣಾಕರನ್ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದಾರೆ. ಅರುಣ್ ರಂಗರಾಜನ್ ಕಲಬುರ್ಗಿಯ ಐಎಸ್​ಡಿಯಲ್ಲಿ ಎಸ್​ಪಿಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಮಗುವಾದ ನಂತರ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಇದೇ ಕಾರಣಕ್ಕೆ ವಿಚ್ಛೇದನ ಪಡೆದಿದ್ದ ಅವರು ನಂತರ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದರು. ಅದಾದ ನಂತರ ಮತ್ತೊಂದು ಮಗುವಾಗಿತ್ತು. ಆದರೆ, ಕೆಲವು ದಿನಗಳಿಂದ ಹೆಂಡತಿ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಳೆ, ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಆರೋಪಿಸಿದ್ದರು.

ಇದನ್ನೂ ಓದಿ: ಬಿಎಸ್​ವೈ ಅಧಿಕಾರಕ್ಕೆ ಬಂದಾಗ ನಾಡು ಸುಭಿಕ್ಷ, ಉಳಿದವರ ಕಾಲದಲ್ಲಿ ಬರಗಾಲ; ಬಿ.ಸಿ.ಪಾಟೀಲ್​

ಬೆಂಗಳೂರಿನ ವಸಂತನಗರದಲ್ಲಿರುವ ಹೆಂಡತಿ ಇಲಕಿಯಾ ಕರುಣಾಕರನ್ ಮನೆಯ ಮುಂದೆ ಅರುಣ್ ರಂಗರಾಜನ್ ಧರಣಿ ನಡೆಸುತ್ತಿದ್ದಾರೆ. ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಕುಟುಂಬದಲ್ಲಿ ನೆಮ್ಮದಿ ಇಲ್ಲ, ಮಕ್ಕಳನ್ನೂ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಧರಣಿ ನಡೆಸಿದ್ದರು. ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಅರುಣ್ ರಂಗರಾಜನ್ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೂ ಒಪ್ಪದ ಅರುಣ್ ಪ್ರತಿಭಟನೆಯನ್ನು ಮುಂದುವರೆಸಿದ್ದರು. ನನ್ನನ್ನು ಬಂಧಿಸಿದರೂ ಪರವಾಗಿಲ್ಲ, ಇಂದು ಹೆಂಡತಿ ಮತ್ತು ಮಕ್ಕಳ ಮುಖ ನೋಡಿಕೊಂಡೇ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಕೊನೆಗೆ ಮಧ್ಯರಾತ್ರಿ ಹಿರಿಯ ಐಪಿಎಸ್ ಅಧಿಕಾರಿಗಳು ಬಂದು ಮನವೊಲಿಸಿದ ನಂತರ ಧರಣಿಯನ್ನು ಕೈಬಿಟ್ಟಿದ್ದಾರೆ. ಇಂದು ಎರಡೂ ಕುಟುಂಬಸ್ಥರ ನಡುವೆ ಸಂಧಾನ ನಡೆಸಲಾಗುತ್ತದೆ.

ಇದನ್ನೂ ಓದಿ: ಪಥ ಸಂಚಲನ ಮಾಡುವ ಆರ್​ಎಸ್​ಎಸ್​ನವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೀನಿ; ಡಿಕೆಶಿ ವ್ಯಂಗ್ಯ

ಭಾನುವಾರ ರಾತ್ರಿ 12 ಗಂಟೆಯವರೆಗೂ ಅರುಣ್ ರಂಗರಾಜನ್ ಅವರ ಮನವೊಲಿಸಲು ಪ್ರಯತ್ನಿಸಿದ ಬೆಂಗಳೂರು ನಾರ್ತ್ ಡಿಸಿಪಿ ಭೀಮಾಶಂಕರ್ ಗುಳೇದ್ ಮತ್ತಿತರ ಅಧಿಕಾರಿಗಳ ಪ್ರಯತ್ನ ಯಶಸ್ವಿಯಾಗಲಿಲ್ಲ. ಕೊನೆಗೆ ರಾತ್ರಿ 2 ಗಂಟೆಗೆ ಸ್ಥಳಕ್ಕೆ ತಮ್ಮ ಹೆಂಡತಿಯನ್ನೂ ಕರೆದುಕೊಂಡು ಬಂದ ಭೀಮಾಶಂಕರ್ ಬೆಳಗ್ಗೆ ಸಂಧಾನ ಮಾಡಿಸಿ, ಮಕ್ಕಳನ್ನು ಭೇಟಿ ಮಾಡಿಸುವ ಭರವಸೆ ನೀಡಿದ ನಂತರ ಅರುಣ್ ಒಪ್ಪಿಕೊಂಡರು. ನಿನ್ನೆ ಸಂಜೆಯಿಂದ ಮಧ್ಯರಾತ್ರಿಯವರೆಗೂ ಕೊರೆವ ಚಳಿಯಲ್ಲಿ ಹೆಂಡತಿಯ ಮನೆ ಮುಂದೆ ಕುಳಿತು ಅರುಣ್ ಧರಣಿ ನಡೆಸಿದ್ದರು. ಊಟ, ನೀರಿಲ್ಲದೆ ಹಸಿದು ಕುಳಿತಿದ್ದ ಅರುಣ್ ಅವರನ್ನು ಡಿಸಿಪಿ ಭೀಮಾಶಂಕರ್ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಈ ಕೌಟುಂಬಿಕ ಕಲಹದ ಬಗ್ಗೆ ಎರಡೂ ಕುಟುಂಬಗಳ ನಡುವೆ ಸಂಧಾನ ನಡೆಯಲಿದೆ.
First published: