Disqualified MLAs Judgment: ಅನರ್ಹರ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಹೇಳಿದ್ದೇನು?; ಇಲ್ಲಿದೆ ಹೈಲೈಟ್ಸ್​​

ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ಮುಂಜಾನೆ ಸರಿಯಾಗಿ 10.30ಕ್ಕೆ ತೀರ್ಪನ್ನು ನೀಡಿದೆ. 

Rajesh Duggumane | news18-kannada
Updated:November 13, 2019, 3:18 PM IST
Disqualified MLAs Judgment: ಅನರ್ಹರ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಹೇಳಿದ್ದೇನು?; ಇಲ್ಲಿದೆ ಹೈಲೈಟ್ಸ್​​
ಸುಪ್ರೀಂ ಕೋರ್ಟ್​.
  • Share this:
ನವದೆಹಲಿ (ನ.13): ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿದೆ. ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ನೀಡಿದ್ದ ಅನರ್ಹತೆ ಆದೇಶವನ್ನು ಕೋರ್ಟ್​ ಎತ್ತಿ ಹಿಡಿದಿದೆ. ಅದರ ಜತೆಜತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್​​ ನೀಡಿದೆ. ಈ ಮೂಲಕ ಸ್ಪೀಕರ್​ ಆದೇಶಕ್ಕೂ ಕೋರ್ಟ್​ ಮನ್ನಣೆ ನೀಡುತ್ತಲೇ, ಅನರ್ಹ ಶಾಸಕರ ಮನವಿಗೂ ಸ್ಪಂದಿಸಿದೆ.  

ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ಮುಂಜಾನೆ ಸರಿಯಾಗಿ 10.30ಕ್ಕೆ ತೀರ್ಪನ್ನು ನೀಡಿದೆ.

ಸುಪ್ರೀಂಕೋರ್ಟ್​ ತೀರ್ಪಿನಲ್ಲಿ ಹೇಳಿದ್ದೇನು?:


  • 17 ಶಾಸಕರು ರಾಜೀನಾಮೆ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹೌದು ಎಂದು ಒಪ್ಪಿಕೊಂಡ ಸುಪ್ರೀಂಕೋರ್ಟ್​. ಈ ಹಿನ್ನೆಲೆಯಲ್ಲಿ ಅನರ್ಹತೆಯನ್ನು ಕೋರ್ಟ್​ ಎತ್ತಿ ಹಿಡಿದಿದೆ.

  • ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ. ಜನಪ್ರತಿನಿಧಿ ಕಾಯ್ದೆ ಪ್ರಕಾರ, 6 ವರ್ಷ ಚುನಾವಣೆ ನಿಲ್ಲಬಾರದು ಎಂಬ ಕಾನೂನು ಇಲ್ಲ.

  • ಅನರ್ಹರು, ಚುನಾವಣೆಗೆ ಸ್ಪರ್ಧಿಸಿದಂತೂ  ಲಾಭದಾಯಕ ಹುದ್ದೆ ಹೊಂದುವಂತಿಲ್ಲ.
  • ಶಾಸಕರ ಅನರ್ಹತೆಯ ಅವಧಿಯನ್ನ ಸ್ಪೀಕರ್​ ನಿರ್ಧರಿಸುವಂತಿಲ್ಲ

  • ಹೈಕೋರ್ಟ್​​ಗೂ ಹೋಗದೆ ಅನರ್ಹರು ಸುಪ್ರಿಂಕೋರ್ಟ್​ಗೆ ಬಂದಿದ್ದು ತಪ್ಪು

  • ಇತ್ತೀಚೆಗೆ ಸ್ಪೀಕರ್​ಗಳು ಜನಾಭಿಪ್ರಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ

  • ರಾಜೀನಾಮೆ ವೈಯಕ್ತಿಕವಾಗಿದ್ದಾಗ ಸ್ಪೀಕರ್​ ರಾಜೀನಾಮೆ ಅಂಗೀಕರಿಸಬೇಕು

  • ಕುದುರೆ ವ್ಯಾಪಾರ ನಡೆದಿದ್ರೆ ರಾಜೀನಾಮೆ ನಿರ್ಧಾರ ಸ್ಪೀಕರ್​ಗೆ ಬಿಟ್ಟಿದ್ದು, ಆದ್ರೆ ಚುನಾವಣೆಗೆ ನಿಂತಾಗ ಜನಾಭಿಪ್ರಾಯವೇ ಎಲ್ಲವನ್ನೂ ನಿರ್ಧರಿಸುತ್ತೆ


ಏನಿದು ಪ್ರಕರಣ:

ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಈ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇದಾದ ಬೆನ್ನಲ್ಲೇ ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಆಗಸ್ಟ್​ 1ರಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದಿದೆ, ಅನರ್ಹರಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.
ಅನರ್ಹ ಶಾಸಕರು ಯಾರ್ಯಾರು?:



ಮೊದಲ ಹಂತದಲ್ಲಿ ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಠಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದಾದ ಬೆನ್ನಲ್ಲೇ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್​.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಆರ್​.ಆರ್​. ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟ್​ನ ಕೆ. ಗೋಪಾಲಯ್ಯ, ಕೆ.ಆರ್​. ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರು.



First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ