ಬೆಂಗಳೂರು (ಮೇ 21): ಕೊರೋನಾ ವೈರಸ್ ಹಾವಳಿ ದೇಶದ ಜನರನ್ನು ಅಕ್ಷರಶಃ ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ. ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿ ಸಾರ್ವಜನಿಕರು ಮನೆಗಳಿಂದ ಹೊರಬಾರದಂತೆ ಆದೇಶ ಹೊರಡಿಸಿತ್ತು. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಮಧ್ಯಮ ವರ್ಗದ ಜನ, ವಲಸೆ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು, ನಿರ್ಗತಿಕರು, ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ವೇಳೆ ಎಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದು, ಎಷ್ಟೋ ರಾತ್ರಿ ಹಗಲು ಉಪವಾಸ ಮಲಗಿದ್ದರು. ಇದೆಲ್ಲಾ ಕಷ್ಟ-ನಷ್ಟಗಳು ಆಗಿದ್ದು ಮಹಾಮಾರಿ ಕೊರೋನಾ ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಿದ ವೇಳೆ. ಜನ ತುತ್ತು ಅನ್ನಕ್ಕಾಗಿ ರಸ್ತೆಗಳಲ್ಲಿ ನಿಂತು ಪೊಲೀಸರು, ಸ್ವಯಂಸೇವಕರು, ಸರ್ಕಾರ ಕೊಡುತ್ತಿದ್ದ ಊಟ, ರೇಷನ್ ಕಿಟ್ ಗಳಿಗಾಗಿ ಕೈಚಾಚಿ ನಿಂತಿದ್ದ ಸಮಯದಲ್ಲೇ ಅಧಿಕಾರಶಾಹಿಗಳ ಮತ್ತೊಂದು ಮುಖ ಅನಾವರಣಗೊಂಡಿದೆ. ಅದೇ ಬೆಂಗಳೂರು ನಗರ ಸಿಸಿಬಿ ಪೊಲೀಸರ ಲಂಚಾವತಾರ.
ಹೌದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಉಂಟು ಮಾಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಸಿಸಿಬಿಯ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ ಗಳಾದ ಆರ್.ಎಂ. ಅಜಯ್ ಮತ್ತು ನಿರಂಜನ್ ಕುಮಾರ್ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದಿದ್ದು, ಈ ಮೂವರು ಪೊಲೀಸ್ ಆಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಸಿಪಿ ಪ್ರಭುಶಂಕರ್ ನಗರದಲ್ಲಿ ಸಿಗರೇಟ್ ವಿತರಕರೊಬ್ಬರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡು ನಗರದಲ್ಲಿ ಸಿಗರೇಟ್ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರಂತೆ. ಬಳಿಕ ಮಧ್ಯವರ್ತಿ ಮೂಲಕ ಲಕ್ಷಗಟ್ಟಲೆ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.
ಇದನ್ನೂ ಓದಿ: 77 ಲಕ್ಷದ ಬೆಂಜ್, 15 ಲಕ್ಷಕ್ಕೆ ಹರಾಜು; ಆರ್ಟಿಓ ಆಕ್ಷನ್ ಬಿಡ್ನಲ್ಲಿ ಬಿಲ್ಡರ್ ಪಾಲಾದ ಐಶಾರಾಮಿ ಕಾರು
ಇನ್ನು, ಇದೇ ತಂಡದ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಕಳೆದ ಏಪ್ರಿಲ್ನಲ್ಲಿ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ N-95 ಮಾಸ್ಕ್ ಗಳನ್ನು ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗುಂಪೊಂದನ್ನು ಬಲೆಗೆ ಬೀಳಿಸಿಕೊಂಡಿದ್ದರು. ಬಳಿಕ ಲ್ಯಾಬ್ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ ನಕಲಿ ಮಾಸ್ಕ್ ಗಳನ್ನು ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ಆರೋಪ ಕೇಳಿ ಬಂದಿದ್ದು, ಎಸಿಪಿ ಪ್ರಭುಶಂಕರ್ ಮತ್ತು ಇಬ್ಬರು ಇನ್ಸ್ಪೆಕ್ಟರ್ ಗಳ ಮೇಲೆ ಎಸಿಬಿ ಅಧಿಕಾರಿಗಳು ಎರಡು ಎಫ್ಐಆರ್ ಗಳನ್ನು ದಾಖಲು ಮಾಡಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನಲೆ :
ಈ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಲಾಕ್ ಡೌನ್ ಮತ್ತು ನಿಷೇಧಾಜ್ಞೆ ಜಾರಿಯಾಗಿದ್ದರೂ ನಗರದಲ್ಲಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕಲ್ಪಿಸೋ ಸಲುವಾಗಿ ಕೆಲವು ವಿತರಕರಿಂದ ಲಕ್ಷಗಟ್ಟಲೆ ಲಂಚ ಪಡೆದಿರೋ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ ಡಿಸಿಪಿ ರವಿಕುಮಾರ್ ಮೂವರ ಲಂಚಾವತಾರದ ಬಗ್ಗೆ ನಗರ ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಡಿಸಿಪಿ ರವಿಕುಮಾರ್ ವರದಿಯ ಆಧಾರದ ಮೇಲೆ ಡಿಜಿಪಿ ಪ್ರವೀಣ್ ಸೂದ್ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಸಿಬಿ ತನಿಖೆಗೆ ಆದೇಶಿಸಿದ್ದರು. ಅಧಿಕಾರಿಗಳ ವಿರುದ್ಧದ ತನಿಖೆಗೆ ಸಕ್ಷಮ ಪ್ರಾಧಿಕಾರ ಅಸ್ತು ಎಂದಿದ್ದು, ಇಂದು ಎಸಿಪಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ ಗಳ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ಹಿನ್ನೆಲೆ; ಯಡಿಯೂರಪ್ಪರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು
ಅಲ್ಲದೆ, ಮೂವರು ಪೊಲೀಸರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ತನಿಖೆ ನಡೆಸಿದ್ದಾರೆ. ಇದೇ ವೇಳೆ ಕಾಟನ್ ಪೇಟೆ ಎಫ್ಐಆರ್ ಸಂಬಂಧ ಎಸಿಪಿ ಪ್ರಭುಶಂಕರ್ ಜಾಮೀನು ಸಹ ಪಡೆದುಕೊಂಡಿದ್ದಾರೆ. ಅದೇನೇ ಇರಲಿ, ಲಾಕ್ ಡೌನ್ ವೇಳೆ ಇಡೀ ದೇಶವೇ ಸ್ತಬ್ಧಗೊಂಡು ಮಹಾಮಾರಿ ಕೊರೋನಾ ವೈರಸ್ ಹಿಮ್ಮೆಟ್ಟಿಸಲು ಸಂಕಲ್ಪ ಮಾಡಿದ್ದರು. ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದರೆ ಕೆಲ ಪೊಲೀಸರು ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು ದುರಾದೃಷ್ಟಕರ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ