ಬೆಂಗಳೂರಿನ ಕೆಂಪಾಪುರದಲ್ಲಿ ವಾಲಿದ್ದ ಕಟ್ಟಡ ತೆರವು ಕಾರ್ಯಾಚರಣೆ ಆರಂಭ; ಅಕ್ಕಪಕ್ಕದ ಜನರ ಸ್ಥಳಾಂತರ

ಫೆ. 5ರಂದು ಬೆಂಗಳೂರಿನ ಕೆಂಪಾಪುರದಲ್ಲಿ 4 ಅಂತಸ್ತಿನ ಕಟ್ಟಡದ ಪಕ್ಕದಲ್ಲಿ ಪಾಯ ಅಗೆಯುತ್ತಿದ್ದುದರಿಂದ ಈ ಕಟ್ಟಡ ವಾಲಿತ್ತು. ಇಂದಿನಿಂದ 4ರಿಂದ 5 ದಿನಗಳ ಕಾಲ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರೆಯಲಿದೆ.

ಹೆಬ್ಬಾಳದ ಕೆಂಪಾಪುರದಲ್ಲಿ ವಾಲಿರುವ ಕಟ್ಟಡ

ಹೆಬ್ಬಾಳದ ಕೆಂಪಾಪುರದಲ್ಲಿ ವಾಲಿರುವ ಕಟ್ಟಡ

  • Share this:
ಬೆಂಗಳೂರು (ಫೆ. 7): 2 ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿರುವ 4 ಅಂತಸ್ತಿನ ಪಿಜಿ ಕಟ್ಟಡ ವಾಲಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯುವ ಸಾಧ್ಯತೆ ಇದ್ದುದರಿಂದ ಕಟ್ಟಡದಲ್ಲಿದ್ದ 30 ಮಂದಿ ಸೇರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ಇಂದು ಬೆಳಗ್ಗೆ ಬಿಬಿಎಂಪಿ ಕಟ್ಟಡ ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ.

ಫೆ. 5ರಂದು ಈ 4 ಅಂತಸ್ತಿನ ಕಟ್ಟಡದ ಪಕ್ಕದಲ್ಲಿ ಪಾಯ ಅಗೆಯುತ್ತಿದ್ದುದರಿಂದ ಈ ಕಟ್ಟಡ ವಾಲಿತ್ತು. ರಾಹುಲ್ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಘಟನೆಗೆ ಕಾರಣವಾದ ಪಕ್ಕದ ನಿವೇಶನದ ಮಾಲೀಕ, ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಏಕಾಏಕಿ ವಾಲಿದ 4 ಅಂತಸ್ತಿನ ಪಿಜಿ ಕಟ್ಟಡ; ಕುಸಿದು ಬೀಳುವ ಸಾಧ್ಯತೆ

ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗದಂತೆ ವಾಲಿದ ಕಟ್ಟಡವನ್ನು ನೆಲಸಮ ಮಾಡಲು ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ನಿನ್ನೆ ಟೆರೇಸ್ ಒಡೆಯಲು ಮುಂದಾಗಿದ್ದ ಅಧಿಕಾರಿಗಳು ಡ್ರಿಲ್ಲಿಂಗ್ ಮಷಿನ್ ಮೂಲಕ ತೆರವಿಗೆ ಪ್ರಯತ್ನಿಸಿದ್ದರು. ಈ ವೇಳೆ ಕಟ್ಟಡ ಮತ್ತೊಂದು ಕಡೆ ವಾಲಿತ್ತು. ಕೂಡಲೇ ಅಧಿಕಾರಿಗಳು ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ಇಂದು ಕಟ್ಟಡ ತೆರವು ಕಾರ್ಯಾಚರಣೆಯನ್ನು ಆರಂಭಿಸಿರುವ ಬಿಬಿಎಂಪಿ ಅಕ್ಕಪಕ್ಕದ ಕಟ್ಟಡಗಳ 100ಕ್ಕೂ ಹೆಚ್ಚು ಜನರಿಗೆ ಉಳಿದುಕೊಳ್ಳಲು ಬೇರೆ ಕಡೆ ವ್ಯವಸ್ಥೆ ಕಲ್ಪಿಸಿದೆ. ಇನ್ನೂ 4ರಿಂದ 5 ದಿನಗಳ ಕಾಲ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರೆಯಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಗಳಿಂದಲೇ ಅಮ್ಮನ ಕೊಲೆ ಪ್ರಕರಣ; ಪೊಲೀಸರನ್ನೇ ಗೊಂದಲಕ್ಕೀಡು ಮಾಡಿದ ಆರೋಪಿಗಳು

5 ವರ್ಷದ ಹಿಂದೆ ಕಟ್ಟಿದ್ದ ಈ ಕಟ್ಟಡದ ಸಮೀಪದಲ್ಲಿ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು. ಅದಕ್ಕೆ ಪಾಯ ತೆಗೆದ ಪರಿಣಾಮ ಈ ಕಟ್ಟಡ ವಾಲಿದೆ. ನಿವೇಶನಕ್ಕೆ ಹೊಂದಿಕೊಂಡಿದ್ದ ಕಟ್ಟಡದ ಅಡಿಪಾಯಕ್ಕಿಂತ ಆಳವಾದ ಪಾಯ ತೋಡಿದ್ದರಿಂದ ನಿರ್ಮಾಣಗೊಂಡಿದ್ದ ಕಟ್ಟಡದ ಅಡಿಪಾಯ ಸಡಿಲವಾಗಿ‌ದೆ. ಪಕ್ಕದ ನಿವೇಶನ ಬಾಬು ಎಂಬುವವರಿಗೆ ಸೇರಿದ್ದಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
First published: