HOME » NEWS » State » BANGALORE NEWS BBMP ESCAPING TO RESPOND TO PEOPLE PROBLEMS IN THE NAME OF LOCKDOWN DUTY SCT

ಬಿಬಿಎಂಪಿಯ ಮೈಗಳ್ಳತನಕ್ಕೆ ವರವಾಗಿದೆ ಲಾಕ್​ಡೌನ್ ಸ್ಪೆಷಲ್ ಡ್ಯೂಟಿಯ ನೆಪ!

ಜನರಿಗೆ ಕೊರೊನಾ ಭಯ ಒಂದೆಡೆಯಾದರೆ ಮಳೆಗಾಲದ ಅನಾಹುತದ ಆತಂಕ ಮತ್ತೊಂದೆಡೆ. ಏನಾದರೂ  ಬಿಬಿಎಂಪಿಯಿಂದ ಸಹಾಯ ಆಗುತ್ತಾ ಎನ್ನುವ ನಿರೀಕ್ಷೆಯೂ ಇಲ್ಲವಾಗಿದೆ.

news18-kannada
Updated:May 28, 2020, 5:54 PM IST
ಬಿಬಿಎಂಪಿಯ ಮೈಗಳ್ಳತನಕ್ಕೆ ವರವಾಗಿದೆ ಲಾಕ್​ಡೌನ್ ಸ್ಪೆಷಲ್ ಡ್ಯೂಟಿಯ ನೆಪ!
ಬೆಂಗಳೂರು ಮಹಾನಗರ ಪಾಲಿಕೆ.
  • Share this:
ಬೆಂಗಳೂರು (ಮೇ 28): 'ಸರ್.. ಎಲ್ಲರೂ ಕೊರೋನಾ ಡ್ಯೂಟಿಯಲ್ಲಿ ಬ್ಯುಸಿಯಿದ್ದಾರೆ... 'ಎಂಬುದು  ಬಿಬಿಎಂಪಿಯ 8 ವಲಯಗಳ ಯಾವುದೇ ಕಂಟ್ರೋಲ್ ರೂಂಗಳಿಗೆ ತುರ್ತಾಗಿ ಕಾಲ್ ಮಾಡಿದರೂ ಕೇಳಿ ಬರುವ ಮಾಮೂಲು ಉತ್ತರ. ಕೆಲಸ ಮಾಡಲಾಗದೆ ಸೋಮಾರಿಗಳಾಗಿ ಹೋಗಿರುವ ಬಿಬಿಎಂಪಿ ಆಡಳಿತ ವ್ಯವಸ್ಥೆಗೆ ಸಿಕ್ಕಿರುವ ಹೊಸ ನೆಪವೇ ಕೊರೋನಾ ಲಾಕ್​ಡೌನ್ ಸ್ಪೆಷಲ್ ಹಾಗೂ ಎಮರ್ಜೆನ್ಸಿ ಡ್ಯೂಟಿ.

ಕಳೆದೊಂದು ವಾರದಿಂದ ಬೆಂಗಳೂರು ಕುಂಭದ್ರೋಣ ಮಳೆಗೆ  ಅಕ್ಷರಶಃ ನಲುಗಿ ಹೋಗಿದೆ. ಮರಗಳು ಧರೆಗುರುಳಿವೆ. ವಾಹನಗಳು ಜಖಂ ಆಗಿವೆ. ಇದರ ನಡುವೆ ಭಾರೀ ದುರಂತ ಎಂದರೆ ಎರಡು ಅಮಾಯಕ ಜೀವಗಳು ಬಲಿಯಾಗಿ ಹೋಗಿವೆ. ಮಳೆ ನಿಂತಮೇಲೆ ಸಹಜ ಸ್ಥಿತಿಗೆ ಬರಬೇಕಿದ್ದ ಬೆಂಗಳೂರು ಅದೇ ದುರಂತದ ಚಿತ್ರಣವನ್ನು ಹೊದ್ದು ಕೂತಿದ್ದರೆ ಸಹಾಯ ಕೋರಿ ಕರೆ ಮಾಡಿದರೆ ಕಂಟ್ರೋಲ್ ರೂಂಗಳಿಂದ ಬರೋ ಉಡಾಫೆಯ ಉತ್ತರ ಕೊರೋನಾ ಸ್ಪೆಷಲ್ ಡ್ಯೂಟಿ.

ಇತ್ತೀಚಿನ ವರ್ಷಗಳಲ್ಲಿ ಅಂದರೆ ಬಿಬಿಎಂಪಿ ಆಡಳಿತ ಯಂತ್ರ ಹಾಗೂ ವ್ಯವಸ್ಥೆ ಸುಧಾರಿಸಲಾಗದಷ್ಟು ಜಡ್ಡು ಹಿಡಿದು ಹೋಗುವವರೆಗೂ ಮಳೆಯನ್ನು ಬೆಂಗಳೂರಿನ ಜನ ಎಂಜಾಯ್ ಮಾಡ್ತಿದ್ರು . ಆಗ ಮಳೆ ಒಂದು ಸಮಸ್ಯೆನೇ ಅನ್ನಿಸುತ್ತಿರಲಿಲ್ಲ. ಇವತ್ತಿನ ದಿನಗಳಿಗಿಂತ ಧೋ ಎನ್ನುವಷ್ಟು ಮಳೆ ದಿನವೆಲ್ಲಾ ಸುರಿಯುತಿತ್ತು. ಆದರೆ ಆಗ ಸಂಭವಿಸುತ್ತಿದ್ದ ಹಾನಿ ತೀರಾ ಕಡಿಮೆ. ಆದರೆ ಇಂದು ಹವಾಮಾನ ಇಲಾಖೆ ಮಳೆ ಬರುತ್ತೆ ಎಂದು ಮುನ್ಸೂಚನೆ ಕೊಡುತ್ತಿದ್ದಂತೆ ಬೆಂಗಳೂರಿಗರ ಮನಸಲ್ಲಿ ಆತಂಕ ಹೆಚ್ಚಾಗುತ್ತೆ, ಹೃದಯಬಡಿತ ಜೋರಾಗುತ್ತದೆ. ಇದೆಲ್ಲಕ್ಕೂ ಮುಖ್ಯ ಕಾರಣವೇ  ಬಿಬಿಎಂಪಿಯ ಹೊಣೆಗೇಡಿತನದ ಆಡಳಿತ ಯಂತ್ರ.

ಇದನ್ನೂ ಓದಿ: ‘ಕೇಂದ್ರ ಸರ್ಕಾರ ಕೊರೋನಾ ಲಾಕ್​ಡೌನ್​​ ಜಾರಿಗೊಳಿಸಿದ ರೀತಿ ಅವೈಜ್ಞಾನಿಕ‘ - ಸತೀಶ್​​ ಜಾರಕಿಹೊಳಿ

ಒಂದು ಸ್ಥಳೀಯ ಸರ್ಕಾರವಾಗಿ ಕೆಲಸ ಮಾಡಬೇಕಾದ ಬಿಬಿಎಂಪಿಯ ಆಡಳಿತವನ್ನು ಇವತ್ತು ಅದರ ಚುಕ್ಕಾಣಿ ಹಿಡಿದಿರುವ ಮಹನೀಯರು ಹಾಳು ಮಾಡಿಬಿಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ಹೊಸದಾಗಿ ಹುರುಪಿನಿಂದ ಬಂದವರಿಗೂ ಜಿಗುಪ್ಸೆ ಹುಟ್ಟಿಸುವಷ್ಟು. ಸುಧಾರಣೆಯ ಪ್ರಯತ್ನಕ್ಕೂ ಕೈ ಹಾಕದಷ್ಟು ದುರಾಡಳಿತ ಇಲ್ಲಿ ತುಂಬಿ ತುಳುಕುತ್ತಿದೆ. ಇಂತಹ ಸ್ಥಿತಿಯಲ್ಲಿ ಮಳೆಗಾಲವನ್ನು ಯಾವುದೇ ತೊಡಕು, ತೊಂದರೆ, ಆತಂಕಗಳಿಲ್ಲದೆ ಕಳೆಯುವ ನಿರೀಕ್ಷೆ ಮಾಡುವುದು ನಮ್ಮ ತಪ್ಪಷ್ಟೇ ಅಲ್ಲ ಮೂರ್ಖತನವೂ ಹೌದೇನೋ.

ಕೊರೊನಾ ಭಯ ಒಂದೆಡೆಯಾದರೆ ಮಳೆಗಾಲದ ಅನಾಹುತದ ಆತಂಕ ಮತ್ತೊಂದೆಡೆ. ಏನಾದರೂ  ಬಿಬಿಎಂಪಿಯಿಂದ ಸಹಾಯ ಆಗುತ್ತಾ ಎನ್ನುವ ನಿರೀಕ್ಷೆಯೂ ಇಲ್ಲವಾಗಿದೆ. ಬೆಂಗಳೂರು ಹಾಗೂ ರಾಜಧಾನಿಯ ಜನತೆ ಮಳೆಯಿಂದ ರೋಸಿ ಹೋಗಿದ್ದರೆ ಕೆಲಸ ಮಾಡಲಾಗದೆ ಸೋಮಾರಿಗಳಾಗಿರುವ ಬಿಬಿಎಂಪಿ ಸಿಬ್ಬಂದಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೊರೋನಾ ಲಾಕ್ ಡೌನ್ ಸ್ಪೆಷಲ್ ಡ್ಯೂಟಿ ಎನ್ನುವ ನೆಪವನ್ನೇ ಏಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಪರಿಹಾರದ ಹಣ ಜಮಾ; ಸಚಿವ ನಾರಾಯಣಗೌಡ ಸ್ಪಷ್ಟನೆಬಿಬಿಎಂಪಿಯಲ್ಲಿ ಕೆಲಸ ಮಾಡ್ತಿರುವ ಬಹುತೇಕ ನೌಕರ ಸಿಬ್ಬಂದಿ ಅಷ್ಟೇ ಅಲ್ಲ  ಅಧಿಕಾರಿಗಳು ಕೂಡ ಲಾಕ್ ಡೌನ್ ಸಂದರ್ಭದಲ್ಲಿ ಮೈಗಳ್ಳರಾಗಿ ಹೋಗಿದ್ದಾರೆ. ಈ ಸತ್ಯ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹಾಗೂ ಮೇಯರ್ ಗೌತಮ್ ಕುಮಾರ್ ಗೂ ಗೊತ್ತಿದೆ. ಆದರೆ, ಅವರೆಲ್ಲಾ ಏಕೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿಲ್ಲವೋ ಗೊತ್ತಿಲ್ಲ. ಲಾಕ್ ಡೌನ್ ಡ್ಯೂಟಿಯನ್ನೇ ನೆಪವಾಗಿಟ್ಟುಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ತಿರುವ ಅವರಿಗೆ ಕಿವಿ ಹಿಂಡುವಂಥ ಕೆಲಸ ಮಾಡಬೇಕಿದೆ. ಮಳೆಗಾಲ ಇನ್ನೂ ಆರಂಭವಾಗಿಲ್ಲ, ಅದಾಗ್ಲೇ ಕಳೆದೊಂದು ವಾರದಿಂದ ಭೋರ್ಗರೆಯುತ್ತಿರುವ ಮಳೆ ತಾನು ಮುಂದಿನ ದಿನಗಳಲ್ಲಿ ಏನೆಲ್ಲ ಅವಾಂತರ ಸೃಷ್ಟಿಸಬಹುದು ಎನ್ನುವ  ಮುನ್ಸೂಚನೆಯನ್ನು ನೀಡಿದೆ.

ಇಷ್ಟಕ್ಕೂ ಬಿಬಿಎಂಪಿ ಎಚ್ಚೆತ್ತುಕೊಳ್ಳದೆ ಕೊರೋನಾ ಕಡಿಮೆಯಾಗಿ, ಲಾಕ್ ಡೌನ್ ಕಂಪ್ಲೀಟ್ ರಿಲ್ಯಾಕ್ಸ್ ಆಗಲಿ, ಆಮೇಲೆ ನೋಡೋಣ ಎಂದು ಸುಮ್ಮನಾದರೆ ಬೆಂಗಳೂರು ಮಳೆಗಾಲದಲ್ಲಿ ಯಾವ ಪರಿಸ್ಥಿತಿ ಎದುರಿಸಬೇಕಾಗುತ್ತದೋ ಗೊತ್ತಿಲ್ಲ. ಇನ್ನಾದರೂ ಮೇಯರ್ ಹಾಗೂ ಕಮಿಷನರ್ ಎಚ್ಚೆತ್ತುಕೊಂಡು ಇಡೀ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾಗಿದೆ.
First published: May 28, 2020, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories