ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಚರ್ಮದ ಅಲರ್ಜಿಗೆ ವಾಯುಮಾಲಿನ್ಯವೂ ಕಾರಣ!

ಬೆಂಗಳೂರು ಮೂಲದ ಚರ್ಮರೋಗ ವೈದ್ಯ ಡಾ. ಕೆ. ಶ್ರೀನಿವಾಸ ಮೂರ್ತಿ ನೀಡುವ ಮಾಹಿತಿ ಪ್ರಕಾರ, ಅವರಲ್ಲಿಗೆ ಬರುವ ಹೆಚ್ಚಿನ ರೋಗಿಗಳಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವೇ ವಾಯುಮಾಲಿನ್ಯ.

news18-kannada
Updated:July 9, 2020, 4:10 PM IST
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಚರ್ಮದ ಅಲರ್ಜಿಗೆ ವಾಯುಮಾಲಿನ್ಯವೂ ಕಾರಣ!
ಮಾಲಿನ್ಯದಿಂದ ಕಲುಷಿತಗೊಂಡಿರುವ ಬೆಂಗಳೂರಿನ ನದಿ
  • Share this:
ಬೆಂಗಳೂರು (ಜು. 9): ಮುಂಬೈ ನಿವಾಸಿಯಾಗಿದ್ದ ಕರಿಷ್ಮಾ ಮಲ್ಲನ್ ಅವರು ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಾಗ ತುಂಬಾ ಸಂತೋಷ ಪಟ್ಟಿದ್ದರು. 2019ರ ಜುಲೈನಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ತಿಂಗಳೊಳಗಾಗಿ ಆಕೆಗೆ ಚರ್ಮದ ಅಲರ್ಜಿ ಉಲ್ಬಣಿಸಿತು. ವೈದ್ಯರನ್ನು ಕಂಡು ಸಲಹೆ ಪಡೆದಾಗ ಆಕೆಗೆ ಅಟೋಪಿಕ್ ಡರ್ಮಟೈಟಿಸ್ ಇದೆಯೆಂದು ಮತ್ತು ಇದು ಧೂಳು ಮತ್ತು ವಾಯು ಮಾಲಿನ್ಯದಿಂದಾಗಿ ಉಂಟಾಗುತ್ತದೆಯೆಂಬುದನ್ನೂ ತಿಳಿಸಲಾಯಿತು. ಕರಿಷ್ಮಾ ತನ್ನ ಕಚೇರಿಗೆ ಹೋಗಿಬರುವುದಕ್ಕಾಗಿ ದಿನದಲ್ಲಿ ಕೇವಲ ಅರ್ಧ ಗಂಟೆಯಷ್ಟೇ ಪ್ರಯಾಣದಲ್ಲಿರುತ್ತಾರೆ. ಆದರೂ ಆಕೆಯಲ್ಲಿ ಒಣಚರ್ಮ, ಸೀನು, ಉಸಿರಾಟದ ಸಮಸ್ಯೆಗಳು, ಶೀತ, ಕಣ್ಣಿನಲ್ಲಿ ತುರಿಕೆ, ಉಸಿರಾಟದ ಸಮಸ್ಯೆಗಳು ಕಾಡತೊಡಗಿದೆ.

ಬೆಂಗಳೂರು ನಗರದಲ್ಲಿ ಮಾಲಿನ್ಯ ಹೆಚ್ಚುತ್ತಿರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯ ನಗರ ನಿವಾಸಿಗಳು ಚರ್ಮದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಅನಾರೋಗ್ಯದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಮತ್ತು ಇದು ಅನೇಕ ರೀತಿಯ ಚರ್ಮದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದಾಗಿ ವೈದ್ಯರು ತಿಳಿಸುತ್ತಾರೆ.ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ‘ಭಾರತದಲ್ಲಿ 10 ಕೋಟಿಗೂ ಅಧಿಕ ಅಲರ್ಜಿಕ್ ರಿನಿಟಿಸ್ (ಇದರಿಂದ ಕಣ್ಣಿನಲ್ಲಿ ನೀರು ಬರುತ್ತಲೇ ಇರುವುದು, ಸೀನುವಿಕೆ ಮತ್ತು ಇತರ ರೋಗ ಲಕ್ಷಣಗಳನ್ನು ಹೊಂದಿರುತ್ತದೆ) ರೋಗಿಗಳಿದ್ದಾರೆ. ಬೆಂಗಳೂರಿನಲ್ಲಿ ಈ ರೋಗ ತಪಾಸಣೆ ನಡೆಸಿದವರಲ್ಲಿ ಶೇ.68ರಷ್ಟು ರೋಗಿಗಳಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಹೆಚ್ಚುತ್ತಿರುವ ಧೂಳು ಮಾಲಿನ್ಯವೇ ಇದಕ್ಕಿರುವ ಸಾಮಾನ್ಯ ಹಾಗೂ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ತುಂಬು ಗರ್ಭಿಣಿ ಪತ್ನಿಯನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಗಂಡ; ವಿಡಿಯೋ ವೈರಲ್

ಬೆಂಗಳೂರು ಮೂಲದ ಚರ್ಮರೋಗ ವೈದ್ಯ ಡಾ. ಕೆ. ಶ್ರೀನಿವಾಸ ಮೂರ್ತಿ ನೀಡುವ ಮಾಹಿತಿ ಪ್ರಕಾರ ಅವರಲ್ಲಿಗೆ ಬರುವ ಹೆಚ್ಚಿನ ರೋಗಿಗಳಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವೇ ವಾಯುಮಾಲಿನ್ಯ. 2010ರಲ್ಲಿ ಈಗಿರುವ ಅಂತಹ ರೋಗಿಗಳ ಸಂಖ್ಯೆಯ ಶೇ.20 ರಷ್ಟಿದ್ದರು ಎಂಬುದಾಗಿ ಅವರು ಹೇಳುತ್ತಾರೆ.

ವಾಯುಮಾಲಿನ್ಯದಿಂದಾಗಿ ದೇಹದ ಮೇಲೆ ಕೆಂಪು ದದ್ದುಗಳು ಬೀಳುವ ಮೂಲಕ ಅಲರ್ಜಿ ಉಂಟಾಗುತ್ತದೆ. ಅಟೊಪಿಕ್ ಎಸ್ಜಿಮಾದಲ್ಲಂತೂ ಕಣ್ಣಿನ ರೆಪ್ಪೆ ಹಾಗೂ ಕುತ್ತಿಗೆಯ ಭಾಗದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಗಾಳಿಯಲ್ಲಿ ಹರಡುವ ಪರಾಗಗಳಿಂದಾಗಿ ‘ಕಂಟಾಕ್ಟ್ ಡರ್ಮಟೈಟಿಸ್’ಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಚರ್ಮವು ಕಪ್ಪಾಗುವುದು, ತುರಿಕೆ, ದದ್ದುಂಟಾಗುವುದು ಹಾಗೂ ಕಣ್ಣಿನಲ್ಲಿ ನೀರು ಬರುವುದು ಉಂಟಾಗುತ್ತದೆ ಎನ್ನುತ್ತಾರವರು. ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಎಸ್ಜಿಮಾಗೆ ಕಾರಣವಾಗುತ್ತದೆ, ಇದರಿಂದ ಚರ್ಮ ಸುಕ್ಕುಗಟ್ಟುವುದಕ್ಕೂ ಆರಂಭವಾಗಬಹುದು ಎಂದು ಡಾ. ಮೂರ್ತಿ ವಿವರಿಸುತ್ತಾರೆ.ಹೆಚ್ಚುತ್ತಿರುವ ಪ್ರಕರಣಗಳು:

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ ದಿವಿಕಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್​ನ ಪ್ರಾಧ್ಯಾಪಕ ಡಾ. ಹೆಚ್. ಪರಮೇಶ್ ಅವರ ಅಧ್ಯಯನ ಪ್ರಕಾರ ಅಸ್ತಮಾ ರೋಗಿಗಳಲ್ಲಿ ಅಲರ್ಜಿಕ್ ರಿನಿಟಿಸ್ ಸಂಭಾವ್ಯತೆಯು ಬೆಂಗಳೂರಿನ ಮಟ್ಟಿಗೆ 1999ರಲ್ಲಿ ಶೇ. 75ರಷ್ಟಿದ್ದು, 2011ರಲ್ಲಿ ಅದು ಶೇ. 99.6 ತಲುಪಿದೆ. ಜೊತೆಗೆ ಒಟಿಟಿಸ್ ಮೀಡಿಯಾ ಅಲರ್ಜಿಕ್ ರಿನಿಟಿಸ್ (ಕಿವಿಯ ಸುತ್ತಲಿನ ಭಾಗದಲ್ಲಿ ಉಂಟಾಗುವ ಸೋಂಕು), ಸಿನುಸಿಟಿಸಿ ಅಲರ್ಜಿಕ್ ರಿನಿಟಿಸ್ (ಮೂಗಿನ ಸುತ್ತಲೂ ಹಬ್ಬುವ ಉಬ್ಬುವಿಕೆ), ಕಂಕ್ಟಿವೀಸ್ ಅಲರ್ಜಿಕ್ ರಿನಿಟಿಸ್ (ಕಣ್ಣುಗುಡ್ಡೆಯ ಹೊರಪೊರೆ ಮತ್ತು ಒಳಕಣ್ಣುರೆಪ್ಪೆ ಉರಿಯೂತ) ಇವುಗಳು ಕೂಡ ಶೇ. 22.5, ಶೇ. 34.8 ಮತ್ತು ಶೇ. 27.5 ಕ್ರಮವಾಗಿ ದಾಖಲಾಗಿವೆ ಎನ್ನುತ್ತದೆ 2011ರ ಅಧ್ಯಯನ ವರದಿ.

Air Pollution can leads to Skin Allergy says Bengaluru Health Experts

ಡಾ. ಪರಮೇಶ್ ಅವರು 101ರಿಪೋಟರ್ಸ್ ಜೊತೆಗೆ ಮಾತನಾಡುತ್ತಾ, ನಿರ್ಮಾಣ ಕಾಮಗಾರಿಗಳ ಧೂಳಿನ ಸೂಕ್ಷ್ಮ ಕಣಗಳು, ಶಿಲೀಂದ್ರಗಳು ಹಾಗೂ ಪರಾಗಗಳು ಇಂತಹ ಅಲರ್ಜಿಗಳಿಗೆ ಪ್ರಮುಖ ಮೂಲವಾಗಿದೆ. ಜನಪ್ರಿಯ ಹಾಗೂ ಸಾಮಾನ್ಯ ಅಭಿಪ್ರಾಯವಾಗಿರುವಂತೆ ಹೊರಾಂಗಣದಲ್ಲಿರುವ ಇಂತಹ ಧೂಳಿನ ಕಣಗಳಿಂದಲೇ ಸೋಂಕು ತಗುಲುತ್ತದೆ ಎಂಬುದು ಹೌದಾದರೂ ಒಳಾಂಗಣಗಳನ್ನು ಸೇರಿರುವ ಶೇ. 60ರಷ್ಟು ಧೂಳಿನ ಕಣಗಳೂ ಈ ಚರ್ಮದ ಖಾಯಿಲೆಗಳಿಗೆ ಕಾರಣವಾಗಿದೆ ಎಂಬುದನ್ನು ಅವರು ತಿಳಿಸುತ್ತಾರೆ. ಇಂತಹ ಅಲರ್ಜಿಗಳು ಕೇವಲ ಚರ್ಮವನ್ನಷ್ಟೇ ಬಾಧಿಸದೇ ಕಣ್ಣಿನಲ್ಲಿ ತುರಿಕೆ, ಕಫ, ಉಬ್ಬಸ ಮತ್ತು ಗೊರಕೆಗೂ ಕಾರಣವಾಗುತ್ತದೆ. ಮಕ್ಕಳು ಬಹುಬೇಗನೆ ಈ ಸೋಂಕುಗಳಿಗೆ ತುತ್ತಾಗುತ್ತಾರೆ ಎನ್ನುತ್ತಾರವರು.

ಇಂಡಿಯನ್ ಜರ್ನಲ್ ಆಫ್ ಡೆರ್ಮಟಾಲಜಿ, ವೆನೆರಿಯೋಲಜಿ ಆಂಡ್ ಲೆಪ್ರೋಲಜಿ (ಐಜೆಡಿವಿಎಲ್) ಅಧ್ಯಯನ ಪ್ರಕಾರ ನೇರಳಾತೀತ ವಿಕಿರಣ, ಕೆಲವು ಹೈಡ್ರೋಕಾರ್ಬನ್​ಗಳು, ಸಾವಯವ ಸಂಯುಕ್ತಗಳು, ಆಕ್ಸೈಡ್​ಗಳು, ಓಝೋನ್, ಸಂಯುಕ್ತ ಸೂಕ್ಷ್ಮ ಕಣಗಳು ಹಾಗೂ ಧೂಮಪಾನದ ಹೊಗೆಯು ಚರ್ಮದ ಹೊರಪದರವನ್ನು ಬಾಧಿಸುತ್ತದೆ.
ಹೆಚ್ಚಿನ ಮಟ್ಟದ ಮಾಲಿನ್ಯಕಾರಕಗಳಿಗೆ ಪುನಾರಾವರ್ತಿತವಾಗಿ ಮೈಯೊಡ್ಡಿಕೊಳ್ಳುವುದರಿಂದ ಚರ್ಮದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅಧ್ಯಯನವು ವಿವರಿಸಿದೆ. ನೇರಳಾತೀತ ವಿಕಿರಣಕ್ಕೆ ಮೈಯೊಡ್ಡಿಕೊಳ್ಳುವುದರಿಂದ ಹಾಗೂ ಸಿಗರೇಟ್ ಸೇವನೆ ಮಾಡುವುದರಿಂದ ಚರ್ಮವು ವಯಸ್ಸಾದವರಂತೆ ಸುಕ್ಕುಗಟ್ಟುವುದು ಹಾಗೂ ಚರ್ಮದ ಕ್ಯಾನ್ಸರ್​ಗೂ ಕಾರಣವಾಗಬಹುದು.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ: ಕಾರವಾರ, ಅಂಕೋಲಾ ಭಾಗದಲ್ಲಿ ಪ್ರವಾಹ; ಮುಳುಗಿದ ಬದುಕು

ಡಾ. ಪರಮೇಶ್ವರ್ ಅವರ ಪ್ರಕಾರ ‘ಚರ್ಮದ ಮೇಲೆ ವಾಯುಮಾಲಿನ್ಯದಿಂದ ಉಂಟಾಗುವ ಹಾನಿಯನ್ನು ನಿರ್ವಹಿಸುವುದು ಹಾಗೂ ಹಾನಿಯನ್ನು ತಡೆಗಟ್ಟುವುದಕ್ಕೆ ಜಾಗೃತಿ, ಕಾಳಜಿ, ಅರಿವು ಅವಶ್ಯ. ನಿಮ್ಮ ದಿಂಬುಗಳು, ಹಾಸಿಗೆ, ಕಂಬಳಿಗಳನ್ನು ಬಿಸಿಲಿಗೆ ಒಡ್ಡುವ ಸಾಂಪ್ರಾದಾಯಿಕ ವಿಧಾನವು ಧೂಳಿನ ಕಣಗಳನ್ನು ತೆಗೆದುಹಾಕುವಲ್ಲಿ ಸಮರ್ಥವಾಗಿದೆ.’
‘ಮುಚ್ಚಿದ ಕೋಣೆಯೊಳಗೆ ಧೂಮಪಾನ ಮಾಡುವುದು ಮತ್ತು ಗೋಡೆಗಳಿಗೆ ಕಾರ್ಪೆಟ್​ಗಳನ್ನು ಹೊದಿಸುವುದನ್ನು ಆದಷ್ಟು ತಪ್ಪಿಸಬೇಕು. ಒಳಾಂಗಣ ಗಿಡಗಳನ್ನು ಬೆಳೆಸುವುದು ಹಾಗೂ ಜಿರಳೆಗಳನ್ನು ಬರದಂತೆ ನಿರ್ವಹಿಸುವುದು ಇವು ಚರ್ಮದ ಸಮಸ್ಯೆಯನ್ನು ನಿರ್ವಹಿಸುವ ಕೆಲವು ಮಾರ್ಗಗಳು’ ಎನ್ನುತ್ತಾರೆ ಡಾ. ಪರಮೇಶ್ವರ್.
ಡಾ. ಶ್ರೀನಿವಾಸ ಅವರು ಪರಿಹಾರ ಮಾರ್ಗಗಳನ್ನು ಸೂಚಿಸುತ್ತಾ ‘ಕಾರಿನಲ್ಲಿ ಪ್ರಯಾಣಿಸುವಾಗ ಕಿಟಕಿಯ ಗಾಜುಗಳನ್ನು ಹಾಕಿಕೊಂಡು ಎಸಿ ಆನ್ ಮಾಡಿಕೊಂಡು ಹೋಗುವುದು ಹಾಗೂ ಬೈಕ್​ನಲ್ಲಾದರೆ ಹೆಲ್ಮೆಟ್, ಕನ್ನಡಕ, ಸ್ಕಾರ್ಫ್ ಮುಂತಾದವನ್ನು ಧರಿಸಿಕೊಂಡು ಸವಾರಿ ಮಾಡುವುದು ಚರ್ಮದ ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡುತ್ತದೆ’.ಐಜೆಡಿವಿಎಲ್ ವರದಿಯು ಕೆಲವು ಪ್ರಮುಖ ವೈಯಕ್ತಿಕ ರಕ್ಷಣೆಯನ್ನು ಸೂಚಿಸಿದ್ದು, ಸನ್​ಸ್ಕ್ರೀನ್​ಗಳ ಬಳಕೆ, ಸಾರ್ವಜನಿಕ ಧೂಮಪಾನ ನಡೆಸುವ ಸ್ಥಳಗಳನ್ನು ತಪ್ಪಿಸಿಕೊಳ್ಳುವುದು, ಕೈಗಾರಿಕೆಗಳ ಸುತ್ತಲಿನ ಪ್ರದೇಶ, ಒಳಾಂಗಣ, ವಾಯು ಶುದ್ಧೀಕರಣ ಘಟಕ ಹಾಗೂ ವೆಂಟಿಲೇಟರ್​ನ ಪ್ರದೇಶವನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳುವುದು ಚರ್ಮದ ರಕ್ಷಣೆಗೆ ಸೂಕ್ತ ಎಂದು ಅಭಿಪ್ರಾಯಿಸಿದೆ. ಟ್ರಾಫಿಕ್ ಪೊಲೀಸರು ಹಾಗೂ ಕಸ ಗುಡಿಸುವಂತಹ ಕೆಲಸ ನಿರ್ವಹಿಸುವವರು ಮಾಸ್ಕ್​ಗಳನ್ನು ಬಳಸಬೇಕು ಎಂದು ವರದಿ ಹೇಳಿದೆ.

(ವರದಿ: ಕಪಿಲ್ ಕಾಜಲ್)

(ಫೋಟೋ- ದರ್ಶಕ್ ಇತಿಕ್ಕತ್, ತೇಜಸ್ ದಯಾನಂದ್ ಸಾಗರ್)

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101reporters.com ನ ಸದಸ್ಯರು)
Published by: Sushma Chakre
First published: July 9, 2020, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading