ಬಿಜೆಪಿಯಿಂದ ಅನರ್ಹರ ಸ್ಪರ್ಧೆ ಬಹುತೇಕ ಖಚಿತ; ಇದು ಯಡಿಯೂರಪ್ಪಗೆ ಮಾಡು ಇಲ್ಲವೇ ಮಡಿ ಸಮಯ?

ಕಾರ್ಯಕರ್ತರ ಸಭೆಯೊಂದರಲ್ಲಿ ಅನರ್ಹರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಬಿಎಸ್​ವೈ ಹೇಳಿದ್ದ ವಿಡಿಯೋ ವೈರಲ್​ ಆಗಿತ್ತು. ಈಗ ಸುಪ್ರೀಂ ಕೋರ್ಟ್​ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ನೀಡಿದೆ. ಹಿನ್ನೆಲೆಯಲ್ಲಿ ಬಿಎಸ್​ವೈ ಅನರ್ಹರ ಬೆನ್ನಿಗೆ ನಿಲ್ಲಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ.

Rajesh Duggumane | news18
Updated:November 13, 2019, 3:13 PM IST
ಬಿಜೆಪಿಯಿಂದ ಅನರ್ಹರ ಸ್ಪರ್ಧೆ ಬಹುತೇಕ ಖಚಿತ; ಇದು ಯಡಿಯೂರಪ್ಪಗೆ ಮಾಡು ಇಲ್ಲವೇ ಮಡಿ ಸಮಯ?
ಯಡಿಯೂರಪ್ಪ
  • News18
  • Last Updated: November 13, 2019, 3:13 PM IST
  • Share this:
ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿದೆ. ಶಾಸಕರ ಅನರ್ಹತೆಯ ವಿಚಾರವನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದ್ದು, ಜೊತೆಗೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂ ನೀಡಿದೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮೇಲ್ನೋಟಕ್ಕೆ ಸಂತಸಗೊಂಡಿದ್ದರೂ, ವಸ್ತುಸ್ಥಿತಿಯ ಅವಲೋಕನ ಮಾಡಿದಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎಂಬುದು ಅರ್ಥವಾಗುತ್ತದೆ. ಒಂದೆಡೆ ಅನರ್ಹರಿಗೆ ಟಿಕೆಟ್​ ನೀಡಲೇಬೇಕಾದ ಪರಿಸ್ಥಿತಿಯಾದರೆ ಇನ್ನೊಂದೆಡೆ, ಬಿಜೆಪಿಯಲ್ಲಿ ಅಸಮಧಾನದ ಹೊಗೆ ಭುಗಿಲೇಳುವ ಲಕ್ಷಣ. ಈ ಎರಡನ್ನೂ ಬಿಎಸ್​ವೈ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದ ಸಂಗತಿ.

ಅನರ್ಹರಿಗೆ ಟಿಕೆಟ್​ ನೀಡಬೇಕೋ ಅಥವಾ ಬೇಡವೋ ಎನ್ನುವುದನ್ನು ಇಂದು ನಡೆಯುವ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಬಿಎಸ್​ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದ್ದಾರೆ. ಈ ಸಭೆಯಲ್ಲಿ ಅನರ್ಹರಿಗೆ ಟಿಕೆಟ್​ ಪಕ್ಕಾ ಎನ್ನುತ್ತಿವೆ ಬಿಜೆಪಿ ಮೂಲಗಳು.

ಕಾರ್ಯಕರ್ತರ ಸಭೆಯೊಂದರಲ್ಲಿ ಅನರ್ಹರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಬಿಎಸ್​ವೈ ಹೇಳಿದ್ದ ವಿಡಿಯೋ ವೈರಲ್​ ಆಗಿತ್ತು. ಈಗ ಸುಪ್ರೀಂ ಕೋರ್ಟ್​ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ನೀಡಿದೆ. ಹಿನ್ನೆಲೆಯಲ್ಲಿ ಬಿಎಸ್​ವೈ ಅನರ್ಹರ ಬೆನ್ನಿಗೆ ನಿಲ್ಲಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಹದಿನೈದಕ್ಕೆ ಹದಿನೈದೂ ಕ್ಷೇತ್ರವನ್ನು ಗೆಲ್ಲುತ್ತೇವೆ; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ

ಎರಡು ದೋಣಿ ಮೇಲೆ ಬಿಎಸ್​ವೈ:
ಬಿಎಸ್​ವೈ ಸ್ಥಿತಿ ಎರಡು ದೋಣಿ ಮೇಲೆ ಕಾಲಿಟ್ಟಂತಾಗಿದೆ. 15 ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದು ದೊಡ್ಡ ಸವಾಲೇ ಸರಿ ಎಂದು ಬಿಜೆಪಿ ಪಕ್ಷದ ಮೂಲಗಳೇ ಹೇಳುತ್ತಿವೆ. ಒಂದು ವೇಳೆ ಎಲ್ಲಾ 15 ಅನರ್ಹರಿಗೆ ಬಿಜೆಪಿ ಟಿಕೆಟ್​ ನೀಡಿದರೆ, ಸ್ವಪಕ್ಷೀಯರ ವಿರೋಧ ಎದುರಿಸಬೇಕು. ಜತೆಗೆ ಸ್ವಪಕ್ಷೀಯರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆಯೂ ಇರುತ್ತದೆ. ಇದು ಬಿಎಸ್​​ವೈಗೆ ತಲೆನೋವಾಗಿ ಪರಿಣಮಿಸಿದೆ. ಅನರ್ಹರು ಹಾಗೂ ಅಸಮಾಧಾನಿತರನ್ನು ಸಮಾಧಾನ ಮಾಡುತ್ತಾ ಸಾಗಬೇಕಿದೆ.

15 ಜನರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ:15 ಕ್ಷೇತ್ರದಲ್ಲಿ ಅನರ್ಹರು ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಮಹತ್ವದ ಜವಾಬ್ದಾರಿ ಯಡಿಯೂರಪ್ಪ ಅವರಿಗಿದೆ. ಕಾರಣ, ಅವರೇ ಮುಂದೆ ನಿಂತು ಅನರ್ಹರಿಗೆ ಟಿಕೆಟ್​ ನೀಡಲು ಉತ್ಸುಕತೆ ತೋರಿಸಿದ್ದಾರೆ. ಬಿಎಸ್​ವೈ ಮಾತು ಪಕ್ಷದಲ್ಲಿ ನಡೆಯುತ್ತಿಲ್ಲ ಎನ್ನುವ ಮಾತಿದೆ. ಒಂದೊಮ್ಮೆ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ, ಬಿಎಸ್​ವೈ ಸಂಪೂರ್ಣ ಮೂಲೆಗುಂಪಾಗುವ ಸಾಧ್ಯತೆ ಇದೆ.

ಬಿಎಸ್​ವೈ ಮುಖ್ಯಮಂತ್ರಿ ಸ್ಥಾನಕ್ಕೇ ಕುತ್ತು?:
ಸರ್ಕಾರ ಉಳಿಯಲು ಕನಿಷ್ಠ 7 ಜನರನ್ನ ಗೆಲ್ಲಿಸಬೇಕು. ಅನರ್ಹರಿಗೆ ಟಿಕೆಟ್ ನೀಡಿದ ನಂತರ ಸ್ವಪಕ್ಷೀಯರು ರೆಬೆಲ್​ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದು ಬಿಜೆಪಿಗೆ ಹಿನ್ನಡೆ ಆಗಬಹುದು. ಒಂದೊಮ್ಮೆ 7ಕ್ಕಿಂತ ಕಡಿಮೆ ಸ್ಥಾನವನ್ನು ಬಿಜೆಪಿ ಗೆದ್ದರೆ, ಸರ್ಕಾರ ಉರುಳಲಿದೆ.

ಸಚಿವ ಸಂಪುಟ ವಿಸ್ತರಣೆಯೂ ಅಷ್ಟು ಸುಲಭವಲ್ಲ:
ಬಿಜೆಪಿ 15 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರವನ್ನು ಗೆದ್ದರೆ ಸರ್ಕಾರ ಭದ್ರ. ಆದರೆ, ಅಸಲಿ ಆಟ ಶುರುವಾಗವುದೇ ಅಲ್ಲಿಂದ. ಸರ್ಕಾರ ರಚನೆಯಾದ ನಂತರ ಅನರ್ಹಗೊಂಡು ಬಿಜೆಪಿ ಸೇರಿದವರಿಗೆ ಖಾತೆ ಹಂಚಿಕೆ ಮಾಡಬೇಕು. ಈ ವೇಳೆ ಅಸಮಾಧಾನ ಕಟ್ಟಿಟ್ಟ ಬುತ್ತಿ. ಕೇಳಿದ ಖಾತೆ ನೀಡಿದರೂ ಕಷ್ಟ, ನೀಡದಿದ್ದರೂ ಕಷ್ಟ ಎನ್ನುವ ಸ್ಥಿತಿ ಬಿಎಸ್​ವೈಗೆ ಬರಲಿದೆ.

ಬಿಜೆಪಿ ಇಬ್ಭಾಗ?:
ಅನರ್ಹರಿಗೆ ಟಿಕೆಟ್​ ನೀಡುವ ವಿಚಾರದಲ್ಲಿ ಕಮಲ ಪಾಳಯದಲ್ಲೇ ದ್ವಂಧ್ವ ನಿಲುವಿದೆ. ಇದಕ್ಕೆ ತಾಜಾ ಉದಾಹರಣೆ ಶರತ್​ ಬಚ್ಚೇಗೌಡ. ಹೊಸಕೋಟೆ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಟಿಕೆಟ್​ ನೀಡಲಿದೆ ಎನ್ನಲಾಗಿದೆ. ಈಗಾಗಲೇ ಶರತ್​ ಬಚ್ಚೇಗೌಡ ತಿರುಗಿ ಬಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ಕಾಂಗ್ರೆಸ್​ ಸೇರಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇನ್ನು, ಕಾಗವಾಡ ಕ್ಷೇತ್ರದಿಂದ ತಮಗೇ ಟಿಕೆಟ್​ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್​ ಸೇರುತ್ತಿದ್ದಾರೆ. ರಾಜರಾಜೇಶ್ವರಿ​ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಬಿಜೆಪಿ ಸೇರಲು ಆರ್​ಎಸ್​ಎಸ್​ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರಕ್ಕೆ ಬಿಜೆಪಿ ಹೋಳಾದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ