ಬೆಂಗಳೂರು (ಜೂ. 18): ಬೆಂಗಳೂರಿನಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಬ್ಯಾಂಕ್ ಕೇಂದ್ರ ಕಚೇರಿ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಸುದೇವ್ ಮಯ್ಯಾ ಅವರ ಮನೆ, ಗುರು ರಾಘವೇಂದ್ರ ಬ್ಯಾಂಕ್ ಚಿಕ್ಕಲಸಂದ್ರ ಕಚೇರಿ, ಬ್ಯಾಂಕ್ನ ನಿವೃತ್ತ ಸಿಇಓ, ಡಾ.ಕೆ. ರಾಮಕೃಷ್ಣ, ಬ್ಯಾಂಕ್ ಅಧ್ಯಕ್ಷರ ಮನೆಯ ಮೇಲೂ ದಾಳಿ ನಡೆಸಲಾಗಿದೆ.
ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಈ ಹಿಂದೆಯೂ ಸಹ ಬ್ಯಾಂಕ್ ಆರ್ ಬಿ ಐನ ನಿಯಮಗಳನ್ನು ಗಾಳಿಗೆ ತೂರಿದ್ದು, ಆರ್ ಬಿ ಐ ನೊಟೀಸ್ ಸಹ ನೀಡಿತ್ತು. ಇದೇ ಬ್ಯಾಂಕ್ ನಲ್ಲಿ ಸುಮಾರು 43 ಸಾವಿರ ಜನರ 2400 ಕೋಟಿಯಷ್ಟು ಹಣವನ್ನು ಠೇವಣಿ ಇಟ್ಟಿದ್ದು ನಮ್ಮ ಹಣವನ್ನು ನಮಗೆ ವಾಪಸ್ ಕೊಡಿ ಅಂತ ಇಂದು ಎಸಿಪಿ ಅಧಿಕಾರಿಗಳ ದಾಳಿಯ ನಡುವೆಯೇ ಪ್ರತಿಭಟನೆ ಸಹ ಮಾಡಿದರು.
ಇದನ್ನೂ ಓದಿ: ಮಲೆನಾಡಿನಲ್ಲಿ ಧಾರಾಕಾರ ಮಳೆ; ತುಂಬಿದ ಗಾಜನೂರು ಡ್ಯಾಮ್, ತುಂಗಾ ನದಿಗೆ ನೀರು ಬಿಡುಗಡೆ
ಕೆಲವು ತಿಂಗಳ ಹಿಂದೆ ಆರ್ ಬಿ ಐ ಸಹ ನೊಟೀಸ್ ನೀಡಿದ್ದಾಗ ಹಣದ ವಹಿವಾಟಿನ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿತ್ತು. ಆದರೆ ಆಡಳಿತ ಮಂಡಳಿ ಯಾವುದೇ ದಾಖಲೆಗಳನ್ನು ಸಹ ನೀಡರಲಿಲ್ಲ. ಇದರಿಂದ ಠೇವಣಿದಾರ ಪರವಾಗಿ ಸಂಸದ ತೇಜಸ್ವಿ ಸೂರ್ಯ ಸಹ ಕೋರ್ಟ್ ಮೆಟ್ಟಿಲೇರಿದ್ದರು. ಇತ್ತ ಸಾಕಷ್ಟು ಜನರು ನಿವೃತ್ತಿ ಹೊಂದಿದ ಬಳಿಕ ಲಕ್ಷಾಂತರ ರಾಪಾಯಿ ಹಣವನ್ನು ಬ್ಯಾಂಕ್ನಲ್ಲಿ ಹಾಕಿದ್ದು, ಈಗ ಆ ಹಣ ಬರುತ್ತೋ ಇಲ್ವೋ ಅನ್ನೋ ಭಯದಲ್ಲಿದ್ದಾರೆ. ಇನ್ನು ಸಾಕಷ್ಟು ಬಾರಿ ಬ್ಯಾಂಕ್ ನಲ್ಲಿ ಅಕ್ರಮಗಳು ನಡೀತಾ ಇದೆ ಅಂತ ಸ್ಥಳೀಯ ಪೊಲೀಸರಿಗೆ ದೂರುಗಳನ್ನು ನೀಡಿದ್ದರೂ ಪೊಲೀಸರು ಯಾರ ಮೇಲೆಯೂ ಯಾವುದೇ ಕ್ರಮವನ್ನು ಜರುಗಿಸಿಲ್ಲ ಅನ್ನೋ ಆರೋಪ ಸಹ ಠೇವಣಿದಾರರು ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ನಾನು ಹೈಕಮಾಂಡ್ ಅಲ್ಲ, ಹೆಚ್. ವಿಶ್ವನಾಥ್ಗೆ ಬುದ್ಧಿಯಿಲ್ಲ; ಸಿದ್ದರಾಮಯ್ಯ ತಿರುಗೇಟು
ಇಷ್ಟೆಲ್ಲ ಗೊಂದಲಗಳು ನಡುವೆಯೂ ಇಂದು ಸುಮಾರು 20 ಕ್ಕೂ ಅಧಿಕ ಎಸಿಬಿಯ ಅಧಿಕಾರಿಗಳು ಧೀಡೀರನೆ ದಾಳಿ ಮಾಡಿದ್ದು ಬ್ಯಾಂಕ್ ನಲ್ಲಿನ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇದೇ ಸಾಮಾಜಿಕ ಅಂತರವನ್ನು ಮರೆತು ಠೇವಣುದಾರರು ಪ್ರತಿಭಟನೆ ಮಾಡಿದ್ದು ಪೊಲೀಸರು ಚದುರಿಸಿದ್ದಾರೆ. ಇಂದು ಒಟ್ಟು ನಾಲ್ಕು ಕಡೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಬಳಿಕ ಎಸಿಬಿ ಅಧಿಕಾರಿಗಳ ತಂಡದಿಂದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ 600 ಕೋಟಿ ರೂ.ಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ ನಿರ್ಬಂಧ ಹೇರಿದ್ದು, ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್ಡ್ರಾ ಮಾಡುವಂತಿಲ್ಲ ಎಂದು ಸೂಚಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ