ಬೆಂಗಳೂರು (ನ. 24): ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಲಂಚ ಪಡೆದಿದ್ದರು ಎಂಬ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆ ಮೇಲೆ ನ. 7ರಂದು ಎಸಿಬಿ ದಾಳಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಅವರಿಗೆ ಎಸಿಬಿ ಶಾಕ್ ನೀಡಿದ್ದು, ಇಂದು ಬೆಳ್ಳಂಬೆಳಗ್ಗೆ ಡಾ. ಸುಧಾ ಅವರ ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಲಾಗಿದ್ದು, ಮತ್ತಷ್ಟು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಸ್ನೇಹಿತರು, ಸಂಬಂಧಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಶೋಧ ನಡೆಸಿದೆ. ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೆಲ ದಿನಗಳ ಹಿಂದೆ ಸುಧಾ ಅವರ ಮನೆ, ಅವರ ಆಪ್ತೆ ರೇಣುಕಾ ಮನೆ ಸೇರಿದಂತೆ 6 ಕಡೆಗಳಲ್ಲಿ ದಾಳಿ ನಡೆಸಿದ್ದ ವೇಳೆ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನೂರಾರು ಕೋಟಿ ಆಸ್ತಿ ಪತ್ರಗಳು ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ಎಸಿಬಿಯಿಂದ ಇಂದು ಮತ್ತೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ನವೆಂಬರ್ 7ರಂದು ಸುಧಾ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಬೆಂಗಳೂರಿನ ಆರು ಕಡೆ, ಉಡುಪಿ, ಮೈಸೂರಿನಲ್ಲಿ ದಾಳಿ ನಡೆಸಿದ ಎಸಿಬಿ ಸುಧಾ ಆಪ್ತೆ ರೇಣುಕಾ ಮನೆ ಮೇಲೂ ದಾಳಿ ನಡೆಸಿತ್ತು. ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಚಿನ್ನಾಭರಣ, 35 ಕೆಜಿಯಷ್ಟು ಬೆಳ್ಳಿ ವಸ್ತುಗಳನ್ನು ಪತ್ತೆ ಮಾಡಿತ್ತು. ದಾಳಿ ಬಳಿಕ ಆಸ್ತಿ ಪತ್ರಗಳು, ಚಿನ್ನ, ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿ ತನಿಖೆ ನಡೆಸಿತ್ತು. ತನಿಖೆಯಿಂದ ಬೆಳಕಿಗೆ ಬಂದ ಮಾಹಿತಿ ಮೇರೆಗೆ ಇಂದು ಮತ್ತೆ ಹಲವಡೆ ಎಸಿಬಿ ದಾಳಿ ನಡೆಸಿದೆ.
ಇದನ್ನೂ ಓದಿ: KAS ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ; ಡಾ. ಸುಧಾ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, 10 ಲಕ್ಷ ರೂ. ಪತ್ತೆ
ಬೆಂಗಳೂರು ನಗರ ಮತ್ತು ನಗರದ ಹೊರವಲಯಲ್ಲಿ ದಾಳಿ ನಡೆಸಲಾಗಿದ್ದು, ಕೆಂಗೇರಿಯ ದೊಡ್ಡಾಲದ ಮರ ಮತ್ತು ನಗರದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಭೀಮನ ಕುಪ್ಪೆಯ ಪ್ರಭು ಅವರ ಮನೆಯಲ್ಲಿನ ಕಾಗದ ಪತ್ರಗಳನ್ನು ಮುಂದಿಟ್ಟು ಪರಿಶೀಲನೆ ನಡೆಸಲಾಗಿದೆ. ದಾಖಲೆ ಪತ್ರಗಳನ್ನು ಮುಂದಿಟ್ಟುಕೊಂಡು ಪ್ರಭು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿ , ಐಟಿಐ ಲೇಔಟ್, ರಾಮೋಹಳ್ಳಿ, ಭೀಮನಕುಪ್ಪೆಯಲ್ಲಿ ದಾಳಿ ನಡೆಸಲಾಗಿದೆ.
ನಗರದಲ್ಲಿ ಒಟ್ಟು ಆರು ಕಡೆ ದಾಳಿ ನಡೆಸಲಾಗಿದ್ದು, ಭೀಮನಕುಪ್ಪೆಯಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ 6.30ಕ್ಕೆ ರಿಯಲ್ ಎಸ್ಟೇಟ್ ಏಜೆಂಟ್ ಮಹೇಶ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಭೀಮನಕುಪ್ಪೆಯ ನಿವಾಸದಲ್ಲಿ ಇರುವ ಮಹೇಶ್ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದೇ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಮನೆ ಮೇಲೂ ದಾಳಿ ನಡೆಸಲಾಗಿದೆ. ಭೀಮನಕುಪ್ಪೆಯಲ್ಲಿ ಮೂರು ಕಡೆ, ಎನ್ ಜಿಎಫ್ ಲೇಔಟ್, ರಾಮಸಂದ್ರ, ಕೆಕೆ ಲೇಔಟ್ ನಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ; ಬೆಂಗಳೂರು, ಉಡುಪಿಯಲ್ಲಿ ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ
ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು. ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ನ. 7ರಂದು ಎಸಿಬಿ ದಾಳಿ ನಡೆಸಲಾಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿತ್ತು. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು.
ಈ ಹಿಂದೆ ಸೊರಬದಲ್ಲಿ ತಹಸೀಲ್ದಾರ್ ಆಗಿದ್ದ ಡಾ. ಸುಧಾ ಶಿವಮೊಗ್ಗದಲ್ಲೇ ಬೇರೆ ಬೇರೆ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎಯಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂ ಸ್ವಾಧೀನಾಧಿಕಾರಿಯಾಗಿದ್ದರು. ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ.
ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ