ಬೆಂಗಳೂರು (ಡಿ. 6): ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರಿನ ಹೋಟೆಲ್, ಕಲ್ಯಾಣ ಮಂಟಪ, ಚಿತ್ರ ಮಂದಿರ, ಮಾಲ್, ಸಮಾರಂಭ, ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳದಿದ್ದರೆ ಅದರ ಮಾಲೀಕರು ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್ ಮಾರ್ಷಲ್ ದಂಡ ವಿಧಿಸಬಹುದು. 10 ಸಾವಿರ ರೂ.ನಿಂದ 1 ಲಕ್ಷದವರೆಗೆ ದಂಡ ವಿಧಿಸಲು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಚಳಿಗಾಲಕ್ಕೆ ಕೊರೊನಾ ಹೆಚ್ಚಾಗೋ ಸಾಧ್ಯತೆ ಇದೆ. ಕೊರೋನಾ ಎರಡನೇ ಅಲೆ ಸಹ ಶುರುವಾಗುತ್ತಿದೆ. ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಿನಲ್ಲಿ ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತವೆ. ಸಭೆ, ಸಮಾರಂಭಗಳು ಕೊರೊನಾ ಹರಡುವಿಕೆಯ ಸೂಪರ್ ಸ್ಪ್ರೆಡರ್ ಸ್ಪಾಟ್ಗಳಾಗಿವೆ. ಹಾಗಾಗಿ, ಕಠಿಣ ಕ್ರಮದ ಅವಶ್ಯಕತೆ ಇದ್ದು, ದಂಡವನ್ನು ನಿಗದಿ ಪಡಿಸಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡರೆ ದಂಡ ಕಟ್ಟೋ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಹೋಟೆಲ್, ಮಾಲ್, ಚಿತ್ರಮಂದಿರದಲ್ಲಿ ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂ.ವರೆಗೆ ದಂಡ!
ಎಸ್ಓಪಿ ಪ್ರಕಾರವಾಗಿ ಸಭೆ- ಸಮಾರಂಭಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಆದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಮದುವೆ, ಸಭೆ -ಸಮಾರಂಭಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಭಾಗಿಯಾಗುತ್ತಿದ್ದಾರೆ. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆಯನ್ನು ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಮದುವೆ, ಸಭೆ ಸಮಾರಂಭಗಳಿಗೂ ಮಾರ್ಷಲ್ಗಳನ್ನು ನೇಮಿಸಲು ಸಾಧ್ಯವಿಲ್ಲ. ಹಾಗಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ನೂತನ ದಂಡ ನಿಯಮವನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ