ಮೈಸೂರು (ಜ.20): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕೆಲ ದಿನಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಎಂಬ ಯುವತಿ ವಿರುದ್ಧ ಕೇಸು ದಾಖಲಾಗಿತ್ತು. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರಿನ ವಕೀಲರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದಾರೆ.
ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿ, ವಿವಾದಕ್ಕೀಡಾಗಿದ್ದ ನಳಿನಿ ಪರ ವಕಾಲತ್ತು ವಹಿಸಿ, ಮೈಸೂರಿನ ವಕೀಲ ಕಿರಣ್ ಶೆಟ್ಟಿ ಜಾಮೀನು ಕೊಡಿಸಿದ್ದರು. ಆದರೆ, 'ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ ಯುವತಿ ಪರವಾಗಿ ಮೈಸೂರಿನ ಯಾವ ವಕೀಲರೂ ವಕಾಲತ್ತು ವಹಿಸಬಾರದು, ಈ ಹಿಂದೆ ಕೂಡ ಇಂತಹ ಪ್ರಕರಣಗಳಲ್ಲಿ ಆರೋಪಿ ಪರ ಯಾರೂ ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ' ಎಂದು ಯುವ ವಕೀಲರು ಮೈಸೂರಿನ ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವತಿ ನಳಿನಿ ಪರ ವಕೀಲರು ವಕಾಲತ್ತು ಹಿಂಪಡೆದಿದ್ದರು.
ಇದನ್ನೂ ಓದಿ: ಬೀದರ್ನಲ್ಲೊಂದು ವಿಚಿತ್ರ ಪ್ರಕರಣ; ಕಳ್ಳತನಕ್ಕೆ ಬಂದವರು ಅವಲಕ್ಕಿ, ಉಪ್ಪಿಟ್ಟು ತಿಂದು ಹೋದರು!
ಜನವರಿ 8 ಸಂಜೆ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಭಾಗಿಯಾಗಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿ ಮೈಸೂರು ವಿವಿಯಿಂದ ವರದಿ ಕೇಳಿದ್ದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪೃಥ್ವಿ ಕಿರಣ್ ಶೆಟ್ಟಿ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ತನ್ನದೇ ಮದುವೆಗೆ ಗೈರಾದ ಯೋಧ; ಮುಂದೇನಾಯ್ತು ಗೊತ್ತಾ?
ಇದೀಗ, ನಳಿನಿ, ಮರಿದೇವಯ್ಯ ಪರ ಬೆಂಗಳೂರಿನ ವಕೀಲ ಜಗದೀಶ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು. ಪ್ರಕರಣವನ್ನ ಪರಿಶೀಲನೆ ಮಾಡಿದ ನಂತರ ಸತ್ಯ ತಿಳಿಯಲಿದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೆ ಪ್ರಕರಣ ಇಲ್ಲಿಗೆ ನಿಲ್ಲುತ್ತದೆ. ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಲ್ಲದಿದ್ದರೆ ಅವರಿಗೆ ನ್ಯಾಯ ಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟಿದ್ದು. ಮೈಸೂರು ವಕೀಲರು ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ ಎಂದು ನಳಿನಿ ಪರ ವಕೀಲ ಜಗದೀಶ್ ಹೇಳಿಕೆ ನೀಡಿದ್ದಾರೆ.
ಜಗದೀಶ್ ಸಲ್ಲಿಸಿರುವ ವಕಾಲತ್ತು ಸ್ವೀಕರಿಸಿ ವಿಚಾರಣೆ ಮುಂದೂಡಲಾಗಿದೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಇಂದು ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಿದೆ. ಇದೇವೇಳೆ, ಮೈಸೂರು ವಕೀಲರ ಸಂಘದ ಸಭೆ ನಡೆದಿದ್ದು, ಸಂಘದ ನಿರ್ಣಯಕ್ಕೆ ಬದ್ಧರಾಗಿರಲು ನಿರ್ಧರಿಸಲಾಗಿದೆ. ಎಲ್ಲದಕ್ಕಿಂತ ದೇಶದ ಭದ್ರತೆ ಮುಖ್ಯವಾಗಿರುವುದರಿಂದ ಈ ಪ್ರಕರಣದ ಪರ ವಕಾಲತ್ತು ವಹಿಸದಂತೆ ಬೇರೆ ಜಿಲ್ಲೆಗಳ ವಕೀಲರಿಗೂ ಮನವಿ ಮಾಡಲು ನಿರ್ಧರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ