ಬೆಂಗಳೂರು (ಏ. 12): ಕಳೆದ 6 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಕೇವಲ ಮುಷ್ಕರವಾಗಿಯೇ ಇತ್ತು. ಆದರೆ, ಇಂದಿನಿಂದ ನಡೆಯುವ ಹೋರಾಟ ಸರ್ಕಾರಕ್ಕೆ ಮತ್ತಷ್ಟು ತಲೆನೋವು ತರಿಸಲು ಸಾರಿಗೆ ನೌಕರರ ಕೂಟ ಸಿದ್ದತೆ ನಡೆಸಿಕೊಂಡಿದೆ. ಸರ್ಕಾರ ವರ್ಸಸ್ ಸಾರಿಗೆ ನೌಕರರ ಕೂಟದ ಹೋರಾಟ ಭಾನುವಾರಕ್ಕೆ ಐದನೇ ದಿನ ಪೂರೈಸಿದೆ. ಇಷ್ಟೆಲ್ಲಾ ರೂಪುರೇಷೆ ಆಗುತ್ತಿದ್ದರೂ ಸರ್ಕಾರ ಮಾತ್ರ ನೌಕರರ ಹೋರಾಟಕ್ಕೆ ಕಿಮ್ಮತ್ತಿನ ಬೆಲೆ ಕೊಡದೆ ತನ್ನ ಹಠಮಾರಿ ಧೋರಣೆ ಅನುಸರಿಸೋ ಕೆಲಸ ಮುಂದುವರೆಸಿದೆ. ನಾ ಕೊಡೆ... ನೀ ಬಿಡೆ.. ಅಂತಾಗಿರುವ ಹೋರಾಟ ಇಂದಿನಿಂದ ವಿಶಿಷ್ಠವಾದ ಚಳುವಳಿ ಮೂಲಕ ಸರ್ಕಾರಕ್ಕೆ ಕಂಟಕವಾಗಲಿದ್ದಾರೆ.
ಹೌದು, ಸಾರಿಗೆ ನೌಕರರ ಅನಿರ್ದಿಷ್ಟಾವದಿ ಮುಷ್ಕರ ಮುಂದುವರೆದ ಭಾಗವಾಗಿ ಇಂದು ಆರನೇ ದಿನಕ್ಕೆ ಮುಷ್ಕರ ಮುನ್ನುಗ್ಗಲಿದೆ. ಆದರೆ, ಇಷ್ಟು ದಿನ ಮುಷ್ಕರ ಅಲ್ಲ.. ಬದಲಾಗಿ ಹೊಸ ರೂಪವೆಂಬಂತೆ ಸರ್ಕಾರದ ನಡೆ ವಿರುದ್ಧ ನೌಕರರ ಕುಟುಂಬ ಬೀದಿಗಿಳಿಯಲಿದೆ. ಮಾರ್ಚ್ ದಿನಗಳಲ್ಲಿ ದುಡಿದ ನೌಕರರಿಗೆ ಸಂಬಳ ನೀಡದ ಕಾರಣಕ್ಕೆ ಇಂದು ರಾಜ್ಯಾದ್ಯಂತ ಬೆಳಗ್ಗೆ 11 ಗಂಟೆಗೆ ತಟ್ಟೆ ಲೋಟ ಬಡಿಯುವುದರ ಮೂಲಕ ವಿಭಿನ್ನ ಚಳವಳಿಗೆ ನೌಕರರ ಕೂಟ ಪ್ಲಾನ್ ರೂಪಿಸಿಕೊಂಡಿದೆ. ಬೆಂಗಳೂರು ಸೇರಿದಂತೆ ಪ್ರತೀ ಜಿಲ್ಲಾಧಿಕಾರಿ ಸೇರಿ ತಹಶಿಲ್ದಾರ್ ಕಚೇರಿ ಮುಂಭಾಗ ನೌಕರರ ಕುಟುಂಬ ವರ್ಗದವರು ಪ್ರತಿಭಟನೆ ಮಾಡಲಿದ್ದಾರೆ ಎಂದು ಕೋಡಿಹಳ್ಳಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸರ್ಕಾರ ಮೊಂಡು ತನದ ಪ್ರಯೋಗದ ವಿರುದ್ಧ ಮುಷ್ಕರವನ್ನು ಹಿಗ್ಗಿಸೋ ಕೆಲಸ ಹಿನ್ನೆಲೆ ಇವತ್ತು ಸಾರಿಗೆ ನಿಗಮಗಳ ಎಲ್ಲಾ ಒಕ್ಕೂಟಗಳನ್ನ ಒಟ್ಟುಗೂಡಿಸಿ ಮುಷ್ಕರದ ಮುಂದಿನ ಹೆಜ್ಜೆ ಹಾಗೂ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: Rahul Dravid: ನಾನು ಇಂದಿರಾನಗರದ ಗೂಂಡಾ ಎಂದ ರಾಹುಲ್ ದ್ರಾವಿಡ್ ಹಿಂದೆ ಬಿದ್ದ ಮುಂಬೈ ಪೊಲೀಸರು!
ದಿನಕ್ಕೊಂದು ಸ್ವರೂಪದ ಹಾದಿ ತುಳಿಯುತ್ತಿರುವ ಈ ಹೋರಾಟ ಒಂದು ಹೆಜ್ಜೆ ಮುಂದೆ ಹೋಗಿ ಕಾನೂನು ಹೋರಾಟಕ್ಕೆ ಧುಮುಕಿದೆ. ನಮಗಿರುವ ಬೇಡಿಕೆ ಒಂದೇ. ಅದು ಆರನೇ ವೇತನ ಆಯೋಗ ಮಾಡಬೇಕೆಂಬುದು. ಹೀಗಾಗಿ, ಸರ್ಕಾರಕ್ಕೆ ನಿರಂತರವಾಗಿ ಬೇಡಿಕೆ ಇಟ್ಟರೂ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ. ಅಲ್ಲದೆ, ಹೋರಾಟಕ್ಕೆ ಮುಂದಾದ ನೌಕರರಿಗೆ ಎಸ್ಮಾ ಜಾರಿ ಮಾಡೋ ಮೂಲಕ ಹಿಟ್ಲರ್ ಧೋರಣೆ ಅನುಸರಿಸುತ್ತಿದೆ. ಇದೆಲ್ಲದಕ್ಕೂ ಬಳಲಿ ಬೆಂಡಾಗಿರೋ ನೌಕರರು ಇನ್ನುಳಿದಿರೋದು ಒಂದೇ ದಾರಿ, ಅದು ಕಾನೂನು ಹೋರಾಟ ಎಂದು ನಿರ್ಧಾರ ಮಾಡಿದ್ದು, ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ.
ಸಾರಿಗೆ ನೌಕರರು ವಿನೂತನ ಚಳವಳಿಗೆ ಮುಂದಾದರೆ ಇತ್ತ ಸಾರಿಗೆ ನಿಗಮಗಳ ವರಸೆ ಬೇರೆಯೇ ಇದೆ. ಮುಷ್ಕರದ ಬಗ್ಗೆ ನಿನ್ನೆ ಮಾತನಾಡಿದ ಕೆಎಸ್ಆರ್‌ಟಿಸಿ ಚೀಫ್ ಟ್ರಾಫಿಕಿಂಗ್ ಆಫೀಸರ್ ಪ್ರಭಾಕರ್ ರೆಡ್ಡಿ ಇಂದು ಸಾರಿಗೆ ಸೇವೆ ಯಥಾಸ್ಥಿತಿಗೆ ಬರುವ ಭರವಸೆ ವ್ಯಕ್ತ ಪಡಿಸಿದರು. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸಾರಿಗೆ ಬಸ್‌ಗಳು ಆಪರೇಟ್ ಆಗುತ್ತಿದ್ದು ನೌಕರರು ಮುಷ್ಕರ ಕೈ ಬಿಟ್ಟು ಡ್ಯೂಟಿಗೆ ಹಾಜರಾಗುತ್ತಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗದಿಂದ ಬೆಂಗಳೂರಿಗೆ ಬಸ್ ಗಳು ಓಡಾಟ ಶುರು ಮಾಡಿದೆ ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ