HOME » NEWS » State » BANGALORE KEMPEGOWDA INTERNATIONAL AIRPORT DEMU TRAIN SERVICE NOT IMPRESSED BENGALURIANS SCT

Bengaluru Airport | ಭಾರೀ ನಿರೀಕ್ಷೆ ಮೂಡಿಸಿದ್ದ ಬೆಂಗಳೂರು ಏರ್​ಪೋರ್ಟ್​ ರೈಲು ಸೇವೆ ಫ್ಲಾಪ್ ಆಯ್ತಾ?

DEMU Train: ಈ ವಿಶೇಷ ರೈಲುಗಳು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಏರ್​ಪೋರ್ಟ್​ ತಲುಪಲು ಒಂದೂವರೆ ತಾಸು ಹಾಗೂ ಏರ್​ಪೋರ್ಟ್​ನಿಂದ ಬೆಂಗಳೂರು ನಗರ ತಲುಪಲು 2 ತಾಸಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇಷ್ಟೊತ್ತು ಯಾರು ರೈಲಿನಲ್ಲಿ ಕೂರುತ್ತಾರೆ ಎಂಬುದು ಪ್ರಯಾಣಿಕರ ಬೇಸರ.

news18-kannada
Updated:January 26, 2021, 3:25 PM IST
Bengaluru Airport | ಭಾರೀ ನಿರೀಕ್ಷೆ ಮೂಡಿಸಿದ್ದ ಬೆಂಗಳೂರು ಏರ್​ಪೋರ್ಟ್​ ರೈಲು ಸೇವೆ ಫ್ಲಾಪ್ ಆಯ್ತಾ?
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಟ ರೈಲು
  • Share this:
ಬೆಂಗಳೂರು (ಜ. 26): ಬಹಳ ನಿರೀಕ್ಷೆಯಿಂದ ಆರಂಭಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಈಗ ಫ್ಲಾಪ್ ಆಗಿದ್ಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ ಜನರು ಈ ಸೇವೆಯನ್ನು ನಿರೀಕ್ಷಿತ ಮಟ್ಟದಲ್ಲಿ ಬಳಸಿಕೊಳ್ಳುತ್ತಲೇ ಇಲ್ಲ. ಜ. 4ರಂದು ಉದ್ಘಾಟನೆಗೊಂಡ ಏರ್​ಪೋರ್ಟ್ ರೈಲು ಸೇವೆಗೆ ಈಗ ತೀವ್ರ ಹಿನ್ನಡೆ ಆಗಿದೆ. ದುಬಾರಿಯಾಗಿ ಏರ್ಪೋರ್ಟ್ ತಲುಪುತ್ತಿದ್ದ ಮಂದಿಗೆ ಈ ಸೇವೆ ಸಂಜೀವಿನಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ರೈಲ್ವೆ ಅಧಿಕಾರಿಗಳ ಹಾಗೂ ಸರ್ಕಾರದ ಲೆಕ್ಕಾಚಾರವೆಲ್ಲ ಈಗ ಬುಡಮೇಲಾಗಿ ಹೋಗಿದೆ. ಐದು ಜನ ಓಡಾಡಿದರೆ ಹೆಚ್ಚು ಅನ್ನುವಂತಿದೆ ಏರ್ಪೋರ್ಟ್ ರೈಲುಗಳ ಸದ್ಯದ ಸ್ಥಿತಿ. ಕ್ಯಾಬ್ ಗಳಿಗೆ 1,000 ರೂ. ಹಾಗೂ ಬಸ್​ಗೆ 250 ರೂ. ವ್ಯಯ ಮಾಡಿ ದುಬಾರಿ ಪ್ರಯಾಣ ಮಾಡುತ್ತಿದ್ದ ಮಂದಿಗೆ 10 ರೂ.ನಲ್ಲಿ ರೈಲು ಸೇವೆ ಒದಗಿಸಿದರೂ ಬೇಡ ಅನ್ನುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಏರ್ಪೋರ್ಟ್ ತಲುಪಲು ರೈಲು ತೆಗೆದುಕೊಳ್ಳುತ್ತಿರುವ ಸಮಯ.

ಈ ರೈಲುಗಳು ನಗರದ ರೈಲ್ವೆ ನಿಲ್ದಾಣದಿಂದ ಏರ್​ಪೋರ್ಟ್​ ತಲುಪಲು ಒಂದೂವರೆ ತಾಸು ಹಾಗೂ ಏರ್​ಪೋರ್ಟ್​ನಿಂದ ಬೆಂಗಳೂರು ನಗರ ತಲುಪಲು ಸುಮಾರು 2 ತಾಸಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇಷ್ಟೊತ್ತು ಯಾರು ರೈಲಿನಲ್ಲಿ ಕೂರುತ್ತಾರೆ ಎಂಬುದು ಪ್ರಯಾಣಿಕರ ಬೇಸರ. ದರ ಕಡಿಮೆ ಇದೆ ನಿಜ. ಆದರೆ ಇಷ್ಟು ದೀರ್ಘವಾದ ಸಮಯ ತೆಗೆದುಕೊಳ್ಳುತ್ತದೆ ಎಂದರೆ ಪ್ರಯಾಣಿಸಲು ಕಷ್ಟ ಮತ್ತು ಆಯಾಸ ಆಗುತ್ತದೆ ಎಂಬುದು ಪ್ರಯಾಣಿಕರ ಆಕ್ರೋಶ. ಒಂದು ತಾಸಿನ ಒಳಗಾಗಿ ಎರಡು ಪಾಯಿಂಟ್ ಗಳು ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು ಅಂತ ಈ ಹಾದಿಯ ಪ್ರತಿದಿನದ ಪ್ರಯಾಣಿಕ ರಾಜ್ ಕುಮಾರ್ ದುಗಾರ್ ಅವರ ಮಾತು.

ಇನ್ನು ಸೇವೆ ಆರಂಭಿಸಿ ಇಷ್ಟು ದಿನಗಳಾದರೂ ಜನರು ಈ ಸೇವೆಯ ಸದುಪಯೋಗ ಪಡೆದುಕೊಳ್ಳದೆ ಇರುವುದು ಆಶ್ಚರ್ಯಕರ ಸಂಗತಿ. ಜನರು ಆದಷ್ಟು ಸಂಖ್ಯೆಯಲ್ಲಿ ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಡಾ. ಎ.ಎನ್. ಕೃಷ್ಣಾ ರೆಡ್ಡಿಯವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bangalore Airport: ಮೆಜೆಸ್ಟಿಕ್​ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್​ಪೋರ್ಟ್​ಗೆ ರೈಲು ಸಂಚಾರ ಆರಂಭ

ಇನ್ನು ಬೆಂಗಳೂರು ಏರ್​ಪೋರ್ಟ್​ಗೆ ನಗರದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ, ಯಶವಂತಪುರ ರೈಲ್ವೇ ನಿಲ್ದಾಣ, ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಒಟ್ಟು 5 ರೈಲುಗಳನ್ನು ಬಿಡಲಾಗಿದೆ. ಬೆಳಿಗ್ಗೆ 4:50ಕ್ಕೆ ಮೊದಲ ರೈಲು ಹೊರಟರೆ ಸಂಜೆ 6:15 ಸುಮಾರಿಗೆ ದಿನದ ಕೊನೆಯ ರೈಲು ಸೇವೆ ಇದೆ. ಆದರೆ ಈ ಎಲ್ಲಾ ಟ್ರೈನ್ ನಲ್ಲೂ ಕೂಡ ಕೈ ಬೆರಳೆಣಿಕೆಯಷ್ಟೇ ಜನರು ಓಡಾಡುತ್ತಿದ್ದಾರೆ. ಇದರ ಮಧ್ಯೆ ನಾಲ್ಕು ಸೇವೆಗಳು ಯಾವುದೇ ಪ್ರಯಾಣಿಕರಿಲ್ಲದೆ ರೈಲುಗಳು ಓಡಾಟ ನಡೆಸಿವೆ.

ಒಟ್ಟಾರೆಯಾಗಿ ಕಡಿಮೆ ದರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸೇವೆ ಕಲ್ಪಿಸಿದರೂ ಜನರು ಸಮಯದ ಕಾರಣದಿಂದಾಗಿ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದು ಈಗ ಏರ್​ಪೋರ್ಟ್​ ರೈಲು ಸೇವೆ ಫ್ಲಾಪ್ ಆಗ್ತಿದ್ಯಾ ಅನ್ನೋ ಅನುಮಾನ ಹುಟ್ಟಿಸಿದೆ.
ದೇವನಹಳ್ಳಿಯಿಂದ ಹಾಲ್ಟ್​ ಸ್ಟೇಷನ್​ಗೆ 3, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 2, ಬಂಗಾರಪೇಟೆಯಿಂದ 2, ಯಲಹಂಕದಿಂದ 1, ಯಶವಂತಪುರದಿಂದ 1, ಬೆಂಗಳೂರು ಕಂಟೋನ್ಮೆಂಟ್​ನಿಂದ 1 ರೈಲು ಹಾಲ್ಟ್​ ಸ್ಟೇಷನ್​ಗೆ ಸಂಚರಿಸಲಿವೆ. ಆರಂಭಿಕವಾಗಿ 10 ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

(ವರದಿ: ಆಶಿಕ್ ಮುಲ್ಕಿ)
Published by: Sushma Chakre
First published: January 26, 2021, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories