ಬೆಂಗಳೂರಿಗರೇ ಹುಷಾರ್! ಕೆರೆ ಒಡೆದು ನಿಮ್ಮ ಮನೆಯೂ ಮುಳುಗೀತು

ಭಾನುವಾರ ಬಿಡಿಎ ಕೆರೆಯನ್ನು ಸ್ವಚ್ಛ ಮಾಡುವದರಲ್ಲಿ ಮಗ್ನವಾಗಿತ್ತು. ಈ ವೇಳೆ ಅಚಾನಕ್ಕಾಗಿ ಕೆರೆ ಕೋಡಿ ಒಡೆದಿದೆ. ನೀರು ದೊಡ್ಡ ಪ್ರಮಾಣದಲ್ಲಿ ಹೊರ ಬಂದ ಕಾರಣ ಮತ್ತೆ ಕೋಡಿಯನ್ನು ಮುಚ್ಚಲು ಸಾಧ್ಯವೇ ಆಗಿರಲಿಲ್ಲ.

Rajesh Duggumane | news18-kannada
Updated:November 25, 2019, 10:52 AM IST
ಬೆಂಗಳೂರಿಗರೇ ಹುಷಾರ್! ಕೆರೆ ಒಡೆದು ನಿಮ್ಮ ಮನೆಯೂ ಮುಳುಗೀತು
ಹುಳಿಮಾವಿನಲ್ಲಿ ಜಲಾವೃತವಾದ ಕಾರು
  • Share this:
ಬೆಂಗಳೂರು (ನ.25): ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ವೀಕೆಂಡ್​ ಎನ್ನುವ ಕಾರಣಕ್ಕೆ ಮಧ್ಯಾಹ್ನ ಊಟ ಮಾಡಿ ಅನೇಕರು ನಿದ್ರಿಗೆ ಜಾರಿದ್ದರು. ಇನ್ನೂ ಕೆಲವರು ಶಾಪಿಂಗ್​ ತೆರಳಲು ಅಣಿಯಾಗಿದ್ದರು. ಮಳೆಯ ಕಿರಿಕಿರಿ ಇಲ್ಲ ಎಂಬುದು ಹಲವರ ಖುಷಿಯನ್ನು ಹೆಚ್ಚಿಸಿತ್ತು. ಆದರೆ, ನೋಡ ನೋಡುತ್ತಿದ್ದಂತೆ ಮನೆಗಳಿಗೆ ನೀರು ನುಗ್ಗಿತ್ತು. ಜಲಪ್ರಳಯವಾಯಿತೇ ಎಂದು ಅನೇಕರು ದಂಗು ಬಡಿದಿದ್ದರು. ನೋಡಿದರೆ ಹುಳಿಮಾವು ಕೆರೆ ಕೋಡಿ ಒಡೆದಿತ್ತು. 250ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾದವು.

ಬಿಡಿಎ ಭಾನುವಾರ ಹುಳಿಮಾವು ಕೆರೆ ಸ್ವಚ್ಛತಾ ಕಾರ್ಯ ನಡೆಸಿತ್ತು. ಕೆರೆಯನ್ನು ಸ್ವಚ್ಛಗೊಳಿಸುವ ವೇಳೆ ಕೋಡಿ ಒಡೆದಿದೆ. ಪರಿಣಾಮ ಕೆರೆ ಪಕ್ಕದ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದೆ. ಸಾಕಷ್ಟು ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ. ನೀರು ನುಗ್ಗಿದ ಪರಿಣಮಾ 250 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಸಾಕಷ್ಟು ಕಾರು-ಬೈಕ್​ಗಳು ನೀರಿನಲ್ಲಿ ಮುಳುಗಿ ಹೋಗಿವೆ. ತೊಡಲು ಬಟ್ಟೆ ಇಲ್ಲದೆ, ಹೊಟ್ಟೆಗೆ ಊಟವಿಲ್ಲದೆ ಹುಳಿಮಾವು ಜನರು ಬೀದಿಗೆ ಬಿದ್ದಿದ್ದಾರೆ.

ನೀರು ನುಗ್ಗಿದ ಪ್ರದೇಶಗಳಿಂದ ಹಾನಿಗೊಳಗಾದವರಿಗೆ ಉಳಿದುಕೊಳ್ಳಲು ಹಾಸಿಗೆಯ ವ್ಯವಸ್ಥೆ ಮಾಡಲಾಗಿತ್ತು.


ಆಗಿದ್ದೇನು?:

ಭಾನುವಾರ ಬಿಡಿಎ ಕೆರೆಯನ್ನು ಸ್ವಚ್ಛ ಮಾಡುವದರಲ್ಲಿ ಮಗ್ನವಾಗಿತ್ತು. ಈ ವೇಳೆ ಅಚಾನಕ್ಕಾಗಿ ಕೆರೆ ಕೋಡಿ ಒಡೆದಿದೆ. ನೀರು ದೊಡ್ಡ ಪ್ರಮಾಣದಲ್ಲಿ ಹೊರ ಬಂದ ಕಾರಣ ಮತ್ತೆ ಕೋಡಿಯನ್ನು ಮುಚ್ಚಲು ಸಾಧ್ಯವೇ ಆಗಿರಲಿಲ್ಲ.

ಕೋಟಿ ಕೋಟಿ ನಷ್ಟ:

ನೀರು ನುಗ್ಗಿದ ಪರಿಣಾಮ ಸಾಕಷ್ಟು ಅಂಗಡಿಗಳು, ಆಸ್ಪತ್ರೆ, ಶಾಲೆಗಳಿಗೆ ನೀರು ನುಗ್ಗಿವೆ. ಕೆಲ ಪ್ರದೇಶಗಳಂತೂ ಅಕ್ಷರಶಃ ಮುಳುಗಿ ಹೋಗಿವೆ. ನಿನ್ನೆಯ ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ.
ಹುಳಿಮಾವು ಕೆರೆ ಕೋಡಿ ಒಡೆದಿರುವುದು


ಶಪಿಸುವುದು ಯಾರನ್ನು?:

ತಮ್ಮದಲ್ಲದ ತಪ್ಪಿಗೆ ಹುಳಿಮಾವು ಮಂದಿ ಬೀದಿ ಪಾಲಾಗಿದ್ದಾರೆ. ಕಾಂಟ್ರ್ಯಾಕ್ಟರ್ ಮಾಡಿದ ನಿರ್ಲಕ್ಷ್ಯಕ್ಕೆ ಸಾಮಾನ್ಯ ನಾಗರಿಕರು ಪರಿತಪಿಸುವಂತಾಗಿದೆ. ಕೆರೆ ದುರಸ್ತಿ ನೆವದಲ್ಲಿ ಗುತ್ತಿಗೆದಾರ ಕೋಟಿ ಕೋಟಿ ಲೂಟ್​ ಮಾಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಬಿಡಿಎ ಅಧಿಕಾರಿಗಳು ಗುತ್ತಿಗೆದಾರರ ಜತೆ ಪರ್ಸಂಟೇಜ್ ವ್ಯವಹಾರಕ್ಕಿಳಿದಿದ್ದರಂತೆ. ಕಿಕ್​ ಬ್ಯಾಕ್​ ಪಡೆದು ಕೆರೆ ದುರಸ್ಥಿಗೆ ಹಣ ಬಿಡುಗಡೆ ಮಾಡುತ್ತಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಹಣ ಬಿಡುಗಡೆ ಮಾಡುವುದು ಮತ್ತು ಕಾಮಗಾರಿ ಮಾಡುವುದು ಈ ಪ್ರಕ್ರಿಯೆ ನಡೆದೇ ಇತ್ತು.  ಈ ಬಗ್ಗೆ ಜನ ಪ್ರಶ್ನಿಸಿದರೆ ಸಬೂಬು ಹೇಳುತ್ತಲೇ ಗುತ್ತಿಗೆದಾರರು ಕಾಲ ಕಳೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ಕಾಮಗಾರಿಗೆ ಹತ್ತು ಕೋಟಿ ಮಂಜೂರಾಗಿದ್ದರೆ, ಅದಕ್ಕೂ ಮೊದಲ ಸರ್ಕಾರದ ಅವಧಿಯಲ್ಲೂ ಕೋಟಿ ಕೋಟಿ ಮಂಜೂರಾಗಿತ್ತು.

ಎಲ್ಲೆಡೆ ನುಗ್ಗಿದ ನೀರು


ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಅಧಿಕಾರಿಗಳು:

ಕೆರೆ ಕೋಡಿ ಒಡೆದ ವಿಚಾರದಲ್ಲಿ ಬಿಡಿಎ-ಬಿಬಿಎಂಪಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಕೆರೆಯನ್ನು ಸುಸ್ಥಿತಿಯಲ್ಲಿ ಕೊಟ್ಟಿದ್ದರೆ ಈ ರೀತಿ ಆಗ್ತಿರಲಿಲ್ಲ ಎಂದು ಬಿಬಿಎಂಪಿ ಮೇಯರ್ ಗೌತಮ್ ಹೇಳುತ್ತಾರೆ. ಹಸ್ತಾಂತರ ಮಾಡಿಯಾದ ಮೇಲೆ ನಾವು ಹೊಣೆಯಲ್ಲ ಎಂದು ಬಿಡಿಎ ಕಮಿಷನರ್ ಪ್ರಕಾಶ್ ಹೇಳುತ್ತಿದ್ದಾರೆ.

ನಿಮ್ಮ ಮನೆಯೂ ಮುಳುಗಬಹುದು:

ಎರಡು ವಾರಗಳ ಹಿಂದೆ ಹೊಸಕೆರೆಹಳ್ಳಿಯ ಕೆರೆ ಕೋಡಿ ಒಡೆದು ಹೋಗಿತ್ತು. ಪರಿಣಾಮ, ರಾಜರಾಜೇಶ್ವರಿನಗರದ ಶಾರದಾಂಬ ವಿದ್ಯಾನಿಕೇತನ ಶಾಲೆಗೆ ನುಗ್ಗಿದ ನೀರು ನುಗ್ಗಿತ್ತು. ಶಾಲೆಗೆ ನೀರು ನುಗ್ಗಿ ಕೆಲ ದಾಖಲೆಗಳು, ಆಡಳಿತ ಪುಸ್ತಕಗಳು ನಾಶವಾಗಿವೆ. ಈ ಬೆಳವಣಿಗೆ ನಂತರ ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಯಾವ ಸಮಯದಲ್ಲಿ ಯಾವ ಕೆರೆ ಒಡೆದು ಮನೆ ಮುಳುಗಿ ಹೋಗುತ್ತದೆಯೇನೋ ಎನ್ನುವ ಆತಂಕ ಜನರನ್ನು ಕಾಡಿದೆ.
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ