news18-kannada Updated:January 11, 2021, 8:33 AM IST
ಆರೋಪಿ ಯುವರಾಜ್
ಬೆಂಗಳೂರು (ಜ. 11): ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಕಳ್ಳ ಸ್ವಾಮಿ ಯುವರಾಜ್ ಅಲಿಯಾಸ್ ಸೇವಾಲಾಲ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಬಿಲ್ಡರ್ ಇನಿತ್ ಕುಮಾರ್ ಎಂಬುವವರಿಗೆ ಬಿ.ಎಲ್. ಸಂತೋಷ್ ಅವರ ಹೆಸರು ಬಳಸಿಕೊಂಡು ವಂಚಿಸಿರುವ ಯುವರಾಜ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಮಾಡುವುದಾಗಿ ನಂಬಿಸಿದ್ದ. ಇದಕ್ಕಾಗಿ ಸುಮಾರು 30 ಲಕ್ಷ ರೂ. ಹಣ ಪಡೆದು ಯುವರಾಜ್ ಪಂಗನಾಮ ಹಾಕಿದ್ದ. ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಪೋಸ್ಟ್ಗೆ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಯುವರಾಜ್ಗೆ ಇನಿತ್ ಕುಮಾರ್ ಅಷ್ಟೊಂದು ಹಣವಿಲ್ಲ ಎಂದಿದ್ದರು. ಹೀಗಾಗಿ, 2.50 ಕೋಟಿ ರೂ. ನೀಡುವಂತೆ ಕೇಳಿದ್ದ. ಕೊನೆಗೆ 30 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ.
ಕಳೆದ ನವೆಂಬರ್ನಲ್ಲಿ ಹಣ ಪಡೆದು ವಂಚನೆ ಮಾಡಿದ್ದ ಯುವರಾಜ್ ತಾನು ಬಿ.ಎಲ್. ಸಂತೋಷ್ ಅವರ ಅಣ್ಣನ ಮಗ ಎಂದು ಪರಿಚಯಿಸಿಕೊಂಡಿದ್ದ. ನೀವು ಯುವಕರಿದ್ದೀರಿ, ರಾಜಕೀಯಕ್ಕೆ ಬರಬೇಕು. ನಿಮ್ಮನ್ನು ರಾಷ್ಟ್ರ ಮಟ್ಟದಲ್ಲಿ ಯೂತ್ ಐಕಾನ್ ಮಾಡುತ್ತೇನೆ ಎಂದು ನಂಬಿಸಿದ್ದ. ರೇಸ್ ಕೋರ್ಸ್ ರಸ್ತೆಯ ಐಷಾರಾಮಿ ಹೊಟೇಲ್ನಲ್ಲಿ 3 ಸೀಟಿಂಗ್ ಹಾಕಿ ಹಣ ಡೀಲ್ ಮಾಡಿದ್ದ. ಹೀಗಾಗಿ, ಯುವರಾಜ್ ವಂಚನೆ ಬಗ್ಗೆ ಬಿಲ್ಡರ್ ಇನಿತ್ ಕುಮಾರ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದ ಕಾಡಿನ ತುಂಬ ಸಾವಿರಾರು ಕೋಳಿ ಮರಿಗಳು; ಬ್ಯಾಗಿನಲ್ಲಿ ತುಂಬಿಕೊಂಡು ಹೋದ ಗ್ರಾಮಸ್ಥರು!
ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಯುವರಾಜ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು ಮಾಡಲಾಗಿದೆ. ಈ ಕೇಸನ್ನು ಹೈಗ್ರೌಂಡ್ಸ್ ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದಾರೆ.
ಆರ್ಎಸ್ಎಸ್ ನಾಯಕರು, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಹಲವು ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಯುವರಾಜ್ ಎಂಬಾತನನ್ನು ಕಳೆದ ತಿಂಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ನಿವೃತ್ತ ನ್ಯಾಯಾಧೀಶೆಯೊಬ್ಬರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇನೆಂದು ನಂಬಿಸಿ ಕೋಟ್ಯಂತರ ರೂ. ಹಣ ಪಡೆದಿದ್ದು ಕೂಡ ಬೆಳಕಿಗೆ ಬಂದಿತ್ತು.
ಮೂಲತಃ ಶಿವಮೊಗ್ಗದವನಾದ ಯುವರಾಜ್ ಅಲಿಯಾಸ್ ಸ್ವಾಮಿ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಈತನ ವಿರುದ್ಧ ಕೋಟ್ಯಾಂತರ ರೂ. ವಂಚನೆ ಪ್ರಕರಣವಿದ್ದು, ಉದ್ಯಮಿ ಸುಧೀಂದ್ರ ರೆಡ್ಡಿ ಎಂಬುವವರು ಈತನ ವಿರುದ್ಧ ಸಿಸಿಬಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಯುವರಾಜನ ಮನೆಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು.
Published by:
Sushma Chakre
First published:
January 11, 2021, 8:33 AM IST