news18-kannada Updated:October 25, 2020, 9:11 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಅ. 25): ಕೊರೋನಾ ಭೀತಿಯ ನಡುವೆಯೂ ನಾಡಿನಾದ್ಯಂತ ನವರಾತ್ರಿ ಹಬ್ಬವನ್ನು ತಮ್ಮ ಮನೆಗಳಲ್ಲಿ ವೈಭವದಿಂದಲೇ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದಲೇ ಆಚರಿಸಲಾಗುತ್ತಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು, ತರಕಾರಿಗಳ ಖರೀದಿ ಜೋರಾಗಿದೆ. ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಹೂವು-ಹಣ್ಣಿನ ಬೆಲೆ ಗಗನಕ್ಕೇರಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಖರೀದಿಗೆ ಮುಂಜಾನೆಯಿಂದಲೇ ಸಾವಿರಾರು ಜನರು ಸೇರಿದ್ದಾರೆ. ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಮಾಸ್ಕ್ ಧರಿಸದೆ ಕೆಆರ್ ಮಾರುಕಟ್ಟೆಯಲ್ಲಿ ಸಾವಿರಾರು ಜನರು ಹೂವು-ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ನಿನ್ನೆ 100 ರೂ. ಇದ್ದಿದ್ದ ಸೇವಂತಿಗೆ ಹೂವು ಇಂದು ಒಂದು ಮಾರಿಗೆ 200 ರೂ. ಆಗಿದೆ. ಸುಗಂಧ ಹೂವಿನ ಬೆಲೆಯೂ ದುಪ್ಪಟ್ಟಾಗಿದೆ. ದೊಡ್ಡ ಸೇವಂತಿಗೆ ಹೂವಿನ ಹಾರಕ್ಕೆ 1,500 ರೂ. ಆಗಿದೆ. ಆಯುಧ ಪೂಜೆ, ವಾಹನ ಪೂಜೆಯ ಹಿನ್ನೆಲೆಯಲ್ಲಿ ದುಬಾರಿ ಬೆಲೆಯ ನಡುವೆಯೂ ಗ್ರಾಹಕರು ಹೂವುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಕೆ.ಆರ್ ಮಾರುಕಟ್ಟೆಯಲ್ಲಿ ಹೂವು- ಹಣ್ಣುಗಳ ಇಂದಿನ ಬೆಲೆ ಹೀಗಿದೆ.
- ಬೂದು ಕುಂಬಳಕಾಯಿ- 1 ಕೆಜಿಗೆ 40 ರೂ.
- ಬಾಳೆ ಕಂದು- ಸಣ್ಣ ಜೋಡಿಗೆ 30 ರೂ, ನಾರ್ಮಲ್- 40 ರೂ. ದೊಡ್ಡದು- 75 ರೂ.
- ದಾಳಿಂಬೆ ಹಣ್ಣು- 1 ಕೆಜಿಗೆ 140 ರೂ.
- ಮೂಸಂಬಿ- 1 ಕೆಜಿಗೆ 30 ರೂ.
- ತೆಂಗಿನಕಾಯಿ- 30 ರೂ.
- ಸೇವಂತಿಗೆ ಹೂವು- ಒಂದು ಮಾರಿಗೆ ನಿನ್ನೆ 100ರಿಂದ 120 ರೂ. ಇದ್ದಿದ್ದು ಇಂದು 200 ರೂ.
- ಸುಗಂಧ ರಾಜ- ಒಂದು ಹೂವಿನ ಹಾರಕ್ಕೆ ನಿನ್ನೆ 150 ರೂ. ಇದ್ದಿದ್ದು ಇಂದು 300 ರೂ.
- ದೊಡ್ಡ ಸೇವಂತಿಗೆ ಹಾರ- 1500 ರೂ.
- ತುಳಸಿ- ಒಂದು ಮಾರಿಗೆ 50 ರೂ., ಒಂದು ಕುಚ್ಚಿಗೆ 50 ರೂ.
- ಪೂಜೆ ಬಾಳೆಹಣ್ಣು- 1 ಕೆಜಿಗೆ 100 ರೂ.
- ದೊಡ್ಡ ಬಾಳೆ ಹಣ್ಣು- 1 ಕೆಜಿಗೆ 35 ರೂ.
- ಸೇಬು ಹಣ್ಣು- 1 ಕೆಜಿಗೆ 140 ರಿಂದ 150 ರೂ.
ಇದು ಕೆ.ಆರ್. ಮಾರುಕಟ್ಟೆಯ ಹೂವು, ಹಣ್ಣು, ತರಕಾರಿಗಳ ಬೆಲೆ. ಕೆಆರ್ ಮಾರುಕಟ್ಟೆಯಿಂದ ಖರೀದಿಸಿ ಬೇರೆ ಬೇರೆ ಏರಿಯಾಗಳಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ. ಬೇರೆ ಅಂಗಡಿಗಳಿಗಿಂತ ಕೆಆರ್ ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ ಬೆಲೆಗೆ ಹೂವು, ಹಣ್ಣುಗಳು ಸಿಗುತ್ತವೆ ಎಂಬ ಕಾರಣಕ್ಕೆ ಜನರು ಮಾರುಕಟ್ಟೆಯಲ್ಲೇ ಖರೀದಿ ಮಾಡುತ್ತಿದ್ದಾರೆ. ಆಯುಧ ಪೂಜೆ ಹಿನ್ನಲೆ ಸಾವಿರಾರು ಜನರು ಹೂವು, ಹಣ್ಣುಗಳ ಖರೀದಿಗೆ ಸೇರಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ.
ಕೆಆರ್ ಮಾರುಕಟ್ಟೆ ಮತ್ತೊಂದು ಕೊಯಂಬೇಡು ಮಾರ್ಕೆಟ್ ಆಗುತ್ತಾ ಎಂಬ ಆತಂಕ ಎದುರಾಗಿದೆ. ತಮಿಳುನಾಡಿನ ಕೊಯಂಬೇಡು ಮಾರ್ಕೆಟ್ ನಲ್ಲಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಅವಾಂತರ ಉಂಟಾಗಿತ್ತು. ಅಲ್ಲಿನ ಮಅರುಕಟ್ಟೆಯ ನೂರಾರು ಜನರಿಗೆ ಸೋಂಕು ಪತ್ತೆಯಾಗಿತ್ತು. ಕೆಆರ್ ಮಾರುಕಟ್ಟೆಯಲ್ಲಿ ಸೇರಿರೋ ಗುಂಪಿನಲ್ಲಿ ಯಾರಿಗೆ ಕೊರೊನಾ ಇದೆಯೋ ಗೊತ್ತಾಗದು. ಯಾರಿಗಾದರೂ ಒಬ್ಬರಿಗೆ ಕೊರೋನಾ ಇದ್ದರೂ ಅಪಾಯ ಗ್ಯಾರಂಟಿ.
ಕೆಆರ್ ಮಾರುಕಟ್ಟೆಯ ಬಳಿ ಪಾರ್ಕಿಂಗ್ಗೆ ಕೂಡ ಅವಕಾಶ ಇಲ್ಲದಂತೆ ರಸ್ತೆ ಪಕ್ಕದಲ್ಲೇ ಹೂವು-ಹಣ್ಣುಗಳ ವ್ಯಾಪಾರ ನಡೆಯುತ್ತಿರುವುದರಿಂದ ಗ್ರಾಹಕರು ಮೈಸೂರು ರಸ್ತೆಯ ಫ್ಲೈಓವರ್ನ ಎರಡೂ ಬದಿಗಳಲ್ಲಿ ಸಾಲಾಗಿ ಪಾರ್ಕಿಂಗ್ ಮಾಡಿದ್ದಾರೆ. ಮಾರ್ಕೆಟ್ನಲ್ಲಿ ಸಾವಿರಾರು ಜನರ ಜಾತ್ರೆಯೇ ಸೇರಿದೆ. ಪ್ರತಿ ನಿತ್ಯ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಇರದಿದ್ದರೆ ಬಿಬಿಎಂಪಿ ಮಾರ್ಷಲ್ಸ್ ದಂಡ ವಿಧಿಸುತ್ತಿದ್ದರು. ಆದರೆ, ಇಂದು ಬೆಳಗ್ಗೆ ಕೆಆರ್ ಮಾರುಕಟ್ಟೆಯಲ್ಲಿ ಮಾರ್ಷಲ್ಸ್ ಯಾರೂ ಪತ್ತೆ ಇರಲಿಲ್ಲ. ಮಾರುಕಟ್ಟೆಯಲ್ಲಿ ಓಡಾಡಲು ಸ್ಥಳವಿಲ್ಲದ ರೀತಿಯಲ್ಲಿ ಕಿಕ್ಕಿರಿದ ಗ್ರಾಹಕರನ್ನು ನೋಡಿ ಪೊಲೀಸರು ಕೂಡ ಸುಮ್ಮನಾಗಿದ್ದಾರೆ.
Published by:
Sushma Chakre
First published:
October 25, 2020, 9:11 AM IST