news18-kannada Updated:December 16, 2020, 1:56 PM IST
ಸಾಂದರ್ಭಿಕ ಚಿತ್ರ
Bangalore Drug Mafia | ಬೆಂಗಳೂರು(ಡಿ.16): ಹೊಸ ವರ್ಷಾಚರಣೆ ವೇಳೆ ಬೆಂಗಳೂರನ್ನು ಡ್ರಗ್ ಸಿಟಿ ಮಾಡಲು ಹೊರಟಿದ್ದ ಗ್ಯಾಂಗ್ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರಿನ ಎಂ ತಿರುಪಾಲ್, ಏಜಾಜ್ ಪಾಷಾ, ತಮಿಳುನಾಡಿನ ಕಮಲೇಶನ್, ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಂತರರಾಜ್ಯ ಡ್ರಗ್ ಪೆಡ್ಲರ್ಗಳು ಎಂದು ತಿಳಿದು ಬಂದಿದೆ. ಈ ಆರೋಪಿಗಳು ಅಮೃತಹಳ್ಳಿಯ ಮನೆಯೊಂದರಲ್ಲಿ ಮಾದಕವಸ್ತು ದಂಧೆ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಬಂಧಿತರಿಂದ ಬರೋಬ್ಬರಿ 1.15 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಈ ಆರೋಪಿಗಳು ಹೊಸ ವರ್ಷಾಚರಣೆಗಾಗಿ ಕೋಟ್ಯಂತರ ಮೌಲ್ಯದ ಡ್ರಗ್ ಸ್ಟಾಕ್ ಮಾಡಿಟ್ಟುಕೊಂಡಿದ್ದರು ಎನ್ನಲಾಗಿದೆ. ಹೊಸ ವರ್ಷಾಚರಣೆ ವೇಳೆ ಯುವಕ-ಯುವತಿಯರನ್ನು ಮಾದಕದ ಅಲೆಯಲ್ಲಿ ತೇಲಿಸಲು ಸಜ್ಜಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿದ್ಯಾರ್ಥಿಗಳು, ಟೆಕ್ಕಿಗಳು, ಯುವಕ ಯುವತಿಯರು ಪಾಲ್ಗೊಳ್ಳುವ ಪಾರ್ಟಿಗಳು, ಸೆಲೆಬ್ರೇಷನ್ ಗಳಿಗೆ ಡ್ರಗ್ ಪೂರೈಸಲು ಸಂಚು ನಡೆಸಿದ್ದರು ಎಂದು ತಿಳಿದು ಬಂದಿದೆ.
ಬಂಧಿತರಿಂದ 5 ಕೆಜಿ 600 ಗ್ರಾಂ ಹ್ಯಾಶಿಶ್ ಆಯಿಲ್, 3 ಕೆಜಿ 300 ಗ್ರಾಂ ಗಾಂಜಾ, ಕಾರು, ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.
ಮೇಲ್ಮನೆ ದೇವರ ಮಂದಿರ ಇದ್ದಂತೆ; ಕಾಂಗ್ರೆಸ್ ಸಂವಿಧಾನದ ಹತ್ಯೆ ಮಾಡಿದೆ- ಸಚಿವ ಪ್ರಭು ಚವ್ಹಾಣ ಆಕ್ರೋಶ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲ್ ಪಂತ್, ಹೊಸ ವರ್ಷದ ಪಾರ್ಟಿಗಳಿಗಾಗಿ ತರಿಸಲಾಗುತ್ತಿದ್ದ ಹ್ಯಾಶಿಶ್ ಆಯಿಲ್ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 1 ಕೋಟಿ ಮೌಲ್ಯದ ಮಾದಕವಸ್ತು ಹಾಗೂ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ತಂಡಕ್ಕೆ 50 ಸಾವಿರ ರೂ ಬಹುಮಾನ ಘೋಷಿಸುತ್ತಿದ್ದೇವೆ ಎಂದರು.
ಮುಂದುವರೆದ ಅವರು, ನ್ಯೂ ಇಯರ್ ಗೆ ಯಾವ ರಸ್ತೆಯಲ್ಲೂ ಸೆಲೆಬ್ರೇಷನ್ ಇಲ್ಲ. ಎಂಜಿ ರೋಡ್, ಇಂದಿರಾನಗರ, ಕೋರಮಂಗಲ ಅಲ್ಲದೇ ಯಾವ ಸಾರ್ವಜನಿಕ ರಸ್ತೆಯಲ್ಲೂ ಸೆಲೆಬ್ರೇಷನ್ ಇರಲ್ಲ ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
ಕೊವೀಡ್ ಮಾರ್ಗಸೂಚಿಯಂತೆ ಬಿಬಿಎಂಪಿ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಬಾರ್, ಪಬ್, ರೆಸ್ಟೋರೆಂಟ್ ಗಳು ಕಾರ್ಯ ನಿರ್ವಹಿಸಬೇಕು. ಬಾರ್ ಪಬ್ ಗಳಿಗೆ ಪೊಲೀಸ್ ಇಲಾಖೆಯಿಂದ ಕೂಡ ಸೂಚನೆ ಕೊಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
Published by:
Latha CG
First published:
December 16, 2020, 1:42 PM IST