ಬೆಂಗಳೂರಿನ ವಿವಿಧೆಡೆ ಕಂಪನದ ಅನುಭವ; ಬೆಚ್ಚಿಬಿದ್ದು ಮನೆಯಿಂದ ಓಡಿದ ನಿವಾಸಿಗಳು


Updated:August 16, 2018, 5:08 PM IST
ಬೆಂಗಳೂರಿನ ವಿವಿಧೆಡೆ ಕಂಪನದ ಅನುಭವ; ಬೆಚ್ಚಿಬಿದ್ದು ಮನೆಯಿಂದ ಓಡಿದ ನಿವಾಸಿಗಳು

Updated: August 16, 2018, 5:08 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 16): ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳು ಹಾಗೂ ನೆರೆಯ ಕೇರಳ ಭಾಗದಲ್ಲಿ ಭೀಕರ ಮಳೆಯ ಸುದ್ದಿ ಕೇಳುತ್ತಿದ್ದ ಬೆಂಗಳೂರಿನ ಜನರಿಗೆ ಮಧ್ಯಾಹ್ನ ಶಾಕ್ ಕಾದಿತ್ತು. ನಗರದ ದಕ್ಷಿಣ ಭಾಗದಲ್ಲಿ ಹಲವೆಡೆ ಭೂಮಿ ಕಂಪಿಸಿದ ಅನುಭವಗಳಾಗಿರುವುದು ವರದಿಯಾಗಿದೆ. ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ 3ನೇ ಹಂತ, ಉತ್ತರಹಳ್ಳಿ, ಕದಿರೇನಹಳ್ಳಿ, ಪದ್ಮನಾಭನಗರ, ಚಂದ್ರಲೇಔಟ್, ಬಿಸಿಸಿ ಲೇಔಟ್ ಮೊದಲಾದ ಬಡವಾಣೆಗಳ ನಿವಾಸಿಗಳು ತಮಗೆ ಕಂಪನಗಳಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಮಧ್ಯಾಹ್ನ 3 ಗಂಟೆಯ ಆಸುಪಾಸಿನ ಸಮಯದಲ್ಲಿ ಭೀಕರ ಶಬ್ದ ಬಂದು, ಕಟ್ಟಡ ತುಸು ಅಲುಗಾಡಿತು ಎಂದು ಜನರು ಹೇಳಿಕೊಂಡಿದ್ದಾರೆ. ಭೂಕಂಪವಾಗಿರಬಹುದೆಂಬ ಭಯದಲ್ಲಿ ಹಲವರು ಮನೆಯಿಂದ ಹೊರಗೆ ಓಡಿ ಬಂದಿದ್ದುಂಟು. ಆರ್.ಆರ್. ನಗರದಲ್ಲಿ ಕಂಪನದ ಅನುಭವವಾಯಿತೆಂದು ಕೆಲ ನಿವಾಸಿಗಳು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ಧಾರೆ.

ಮನೆ ಒಳಗಿದ್ದ ನಮಗೆ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡ ರೀತಿಯ ಶಬ್ದ ಕೇಳಿಸಿತು. ಕಿಟಕಿಗಳ ಬಡಿದ ಶಬ್ದವಾಯಿತು. ಹೊರಗೆ ಬಂದು ನೋಡಿದರೆ ಏನೂ ಇರಲಿಲ್ಲ ಎಂದು ಬಿಸಿಸಿ ಲೇಔಟ್ ನಿವಾಸಿಗಳಾದ ರವಿಶಂಕರ್ ಮತ್ತು ಬಸವರಾಜ್ ಹೇಳಿದ್ದಾರೆ.

ಆದರೆ, ನಗರದಲ್ಲಿರುವ ಭೂಕಂಪನ ಮಾಪನ ಕೇಂದ್ರದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.. ತಿಪ್ಪಗೊಂಡನಹಳ್ಳಿ ಜಲಾಶಯದ ಮಾಪನ ಕೇಂದ್ರದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಭೂಕಂಪನಶಾಸ್ತ್ರಜ್ಞ ಜಗದೀಶ್ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ. ನಗರದ ವಿವಿಧೆಡೆ ಕೇಳಿಸಿತೆನ್ನಲಾದ ನಿಗೂಢ ಶಬ್ದವು ಯಾವುದರಿಂದ ಬಂದದ್ದು ಎಂಬುದನ್ನು ಪತ್ತೆಹಚ್ಚಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...