• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಶಿವರಾಮ ಕಾರಂತ ಬಡಾವಣೆ ಯೋಜನೆ; BDA ನಮ್ಮ ಸಮಾಧಿ ಮೇಲೆ ಮನೆ ಕಟ್ಟುತ್ತಿದೆ ಎಂದು ರೈತರ ಆಕ್ರೋಶ

Bengaluru: ಶಿವರಾಮ ಕಾರಂತ ಬಡಾವಣೆ ಯೋಜನೆ; BDA ನಮ್ಮ ಸಮಾಧಿ ಮೇಲೆ ಮನೆ ಕಟ್ಟುತ್ತಿದೆ ಎಂದು ರೈತರ ಆಕ್ರೋಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೋಮಶೆಟ್ಟಿಹಳ್ಳಿಯ ಗ್ರಾಮಸ್ಥರಿಗೆ 2007ರ ಪ್ರಚಲಿತ ಬೆಲೆಯಂತೆ 35 ಲಕ್ಷ ರೂ.ಗೆ ಮೌಲ್ಯಮಾಪನ ಮಾಡಿ, ಶೇ.12 ಬಡ್ಡಿ ಮತ್ತು ಸೊಲಾಟಿಯಂ ಸೇರಿ ಎಕರೆಗೆ ರೂ.84.7 ಲಕ್ಷ ನಿವ್ವಳ ಮೌಲ್ಯ ಅಂದಾಜಿಸಲಾಗಿದೆ.

  • Trending Desk
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) (Bangalore Development Authority) ನಿರ್ಮಿಸಲು ಉದ್ದೇಶಿಸಿರುವ ಎರಡನೇ ಅತಿ ದೊಡ್ಡ ಡಾ. ಕೆ. ಶಿವರಾಮ ಕಾರಂತ ಬಡಾವಣೆ (DKSKL) ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಬಿಟ್ಟು ಕೊಡಲು ರೈತರು ಹಿಂದೇಟು ಹಾಕುತ್ತಿದ್ದು, ಭೂಮಿ ಕಳೆದುಕೊಂಡರೆ ಮುಂದೆ ನಮ್ಮ ಕಥೆ ಏನು ಅಂತಾ ಯೋಚನೆ ಮಾಡುತ್ತಿದ್ದಾರೆ. ಬೆಂಗಳೂರು ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದಾರೆ ಬೆಂಗಳೂರಿನ ರೈತರು. ಇಲ್ಲಿನ ಸುತ್ತಮುತ್ತ ಹಳ್ಳಿಗಳಲ್ಲಿ ಸಾಕಷ್ಟು ಕೃಷಿ, ಹೈನುಗಾರಿಕೆ ನಡೆಯುತ್ತದೆ.


ಬೆಂಗಳೂರಿನ ರೈತರಿಗೆ ಬಿಸಿತುಪ್ಪವಾದ ಡಿಕೆಎಸ್‌ಕೆಎಲ್‌ ಯೋಜನೆ


ಇದು ಹಳ್ಳಿಗಳ ಜೀವನೋಪಾಯ ಆಗುವುದರ ಜೊತೆಗೆ ಸಿಲಿಕಾನ್‌ ಸಿಟಿಯ ಆದಾಯಕ್ಕೆ ಕೊಡುಗೆ ಸಹ ನೀಡುತ್ತಿದೆ. ಹೀಗಿರುವಾಗ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಬಿಡಿಎ ಕೈಗೊಳ್ಳುತ್ತಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ರೈತರಿಗೆ ನುಂಗಲಾರದ ತುತ್ತಾಗಿದೆ. ಬೆಂಗಳೂರಿನ ರಾಮಗೊಂಡನಹಳ್ಳಿ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ಅವಲಹಳ್ಳಿ, ಹಾರೋಹಳ್ಳಿ ಹಲವು ಹಳ್ಳಿಗಳ ಮೇಲೆ ಯೋಜನೆ ಪರಿಣಾಮ ಬೀರಲಿದೆ.


ಸುತ್ತಮುತ್ತಲಿನ ಹಳ್ಳಿಗರಿಗೆ ಕೃಷಿಯೇ ಮೂಲಾಧಾರ


ರಾಮಗೊಂಡನಹಳ್ಳಿಯ ರೈತರು ಹೈಡ್ರೋಪೋನಿಕ್ಸ್ ಮತ್ತು ಪಾಲಿಹೌಸ್ ಬಳಸಿ ಬದನೆ, ವಿವಿಧ ರೀತಿಯ ಬೀನ್ಸ್, ಟೊಮೆಟೊ ಮತ್ತು ಇತರ ತರಕಾರಿಗಳು ಮತ್ತು ವಿದೇಶಿ ತರಕಾರಿಗಳನ್ನು ಬೆಳೆಯುತ್ತಾರೆ.




ಅದರಲ್ಲಿ ಕೆಲವನ್ನು ರಫ್ತು ಮಾಡಿದರೆ, ಉಳಿದವನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲಾಗುತ್ತದೆ. ಅನೇಕರು ಹೂವು, ದ್ರಾಕ್ಷಿ, ರಾಗಿ ಮುಂತಾದವುಗಳನ್ನು ಬೆಳೆಯುತ್ತಾರೆ. ಹಾಗೆಯೇ ಡೈರಿಯಿಂದ ವಾರ್ಷಿಕ 1.84 ಕೋಟಿ ರೂಪಾಯಿ ಆದಾಯ ಬರುತ್ತದೆ.


ಸೋಮಶೆಟ್ಟಿಹಳ್ಳಿಯಲ್ಲೂ ಇದೇ ರೀತಿ ಕೃಷಿ ನಡೆಯುತ್ತದೆ. ಸುಮಾರು 30 ಗ್ರಾಮಸ್ಥರು ಪ್ರತಿದಿನ 200-250 ಲೀಟರ್ ಹಾಲನ್ನು ಸ್ಥಳೀಯ ಡೈರಿಗೆ ನೀಡುತ್ತಾರೆ. ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್‌ಗೆ (ಬಮುಲ್) ಸೇರಿದ ನಾಲ್ಕು ಹಾಲು ಕೂಲರ್‌ಗಳು ದಿನಕ್ಕೆ ಸುಮಾರು 20,000 ಲೀಟರ್ ಹಾಲನ್ನು 14 ಹಳ್ಳಿಗಳಿಂದ ಸಂಗ್ರಹಿಸುತ್ತವೆ.


ಇದರಿಂದ ಗ್ರಾಮಸ್ಥರಿಗೆ ವಾರ್ಷಿಕ ಅಂದಾಜು 21.6 ಕೋಟಿ ರೂಪಾಯಿ ಬರುತ್ತದೆ. ಆದರೆ ಬಿಡಿಎ DKSKL ಯೋಜನೆ ಸಾಕಾರಗೊಂಡರೆ ಅಂತಹ 3,000 ಕ್ಕೂ ಹೆಚ್ಚು ರೈತರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ ಎಂದು ಸ್ಥಳೀಯ ಡೈರಿಯಲ್ಲಿ ಕೆಲಸ ಮಾಡುವ ಮಂಜುನಾಥ್ ಹೇಳುತ್ತಾರೆ.


ಸುಪ್ರೀಂ ಕೋರ್ಟ್‌ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್‌ ನೇತೃತ್ವದ ಸಮಿತಿಯು ಡಾ. ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿ ಮೇಲುಸ್ತುವಾರಿಯನ್ನು ವಹಿಸಿದ್ದು, ಈ ಸಮಿತಿಯು ಲೇಔಟ್ ರೂಪಿಸುವ ಕುರಿತು ಮೇಲ್ವಿಚಾರಣೆ ಮಾಡುತ್ತದೆ.


ಸಾಂದರ್ಭಿಕ ಚಿತ್ರ


ಭೂಸ್ವಾಧೀನಕ್ಕೆ ರೈತರ ಅಸಮ್ಮತಿ


ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 2007ರಲ್ಲಿ 3,546 ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಆದರೆ 2014 ರವರೆಗೆ ಯಾವುದೇ ರೀತಿಯ ಭೂ ಸ್ವಾಧೀನ ನಡೆಯಲಿಲ್ಲ.


ಅಂದಿನಿಂದ ಈವರೆಗೆ 2,500 ಎಕರೆಯನ್ನಷ್ಟೇ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಾಗಿದೆ. ಹೀಗೆ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಬಿಟ್ಟು ಕೊಡಲು ಹಲವರು ಮನಸ್ಸು ಮಾಡುತ್ತಿಲ್ಲ. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದ ಯಶವಂತಪುರ, ಹೆಸರಘಟ್ಟ ಮತ್ತು ಯಲಹಂಕ ಹೋಬಳಿಗಳಲ್ಲಿ ಈ ಯೋಜನೆ ಇದೆ.


ರೈತರಿಗೆ ಪರಿಹಾರ ಏನು?


ಭೂಸ್ವಾಧೀನ ಕಾಯಿದೆ 1894 ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಸ್ವಯಂಪ್ರೇರಿತ ಭೂಮಿಯನ್ನು ಒಪ್ಪಿಸುವ ಪ್ರೋತ್ಸಾಹ ಯೋಜನೆ) ನಿಯಮಗಳು, 1989 ರ ಪ್ರಕಾರ ಪರಿಹಾರವನ್ನು ಭೂಮಿ ಕಳೆದುಕೊಳ್ಳುವವರಿಗೆ ನೀಡಲಾಗುತ್ತದೆ.


ಹಳೆಯ ಕಾಯಿದೆಗಳು ಭೂಮಾಲೀಕರಿಗೆ ಭೂಮಿಯ ಮೌಲ್ಯಕ್ಕೆ ಸಮಾನವಾದ ಪರಿಹಾರವನ್ನು ಅಥವಾ ಅಭಿವೃದ್ಧಿಪಡಿಸಿದ ಭೂಮಿಯ ಒಂದು ಭಾಗಕ್ಕೆ ಅರ್ಹತೆ ನೀಡುತ್ತದೆ.


ಇದನ್ನೂ ಓದಿ: Bengaluru: ಗರ್ಭಿಣಿ ಪತ್ನಿಯನ್ನ ಕೊಲೆಗೈದು ಫ್ಲೈಟ್​​ನಲ್ಲಿ ಎಸ್ಕೇಪ್​; ಬೆಂಗಳೂರು ಪೊಲೀಸರಿಂದ ಬಂಗಾಳದಲ್ಲಿ ನಕಲಿ ಟೆಕ್ಕಿ ಅರೆಸ್ಟ್


1894 ರ ಕಾಯಿದೆಯನ್ನು ಬದಲಿಸುವ 2013 ರ ಕಾಯಿದೆಯು ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ನಾಲ್ಕು ಪಟ್ಟು ಮತ್ತು ನಗರ ಪ್ರದೇಶಗಳಲ್ಲಿ ಎರಡು ಬಾರಿ ಪರಿಹಾರ ಮತ್ತು ಪುನರ್ವಸತಿ ಭರವಸೆ ನೀಡುತ್ತದೆ.


2014ರ ನಂತರವೇ ಭೂ ಸ್ವಾಧೀನ ಆರಂಭವಾಗಿದ್ದರೂ ಹೊಸ ಕಾಯಿದೆಯಿಂದ ಸ್ವಾಧೀನ ವೆಚ್ಚ ಹೆಚ್ಚಾಗಲಿದ್ದು, ಬಿಡಿಎ ನಿವೇಶನಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂಬ ಕಾರಣಕ್ಕೆ ಬಿಡಿಎ ಹಳೆಯ ಕಾಯ್ದೆಯನ್ನೇ ಆಯ್ಕೆ ಮಾಡಿಕೊಂಡಿದೆ.


ಸೋಮಶೆಟ್ಟಿಹಳ್ಳಿಯ ಗ್ರಾಮಸ್ಥರಿಗೆ 2007ರ ಪ್ರಚಲಿತ ಬೆಲೆಯಂತೆ 35 ಲಕ್ಷ ರೂ.ಗೆ ಮೌಲ್ಯಮಾಪನ ಮಾಡಿ, ಶೇ.12 ಬಡ್ಡಿ ಮತ್ತು ಸೊಲಾಟಿಯಂ ಸೇರಿ ಎಕರೆಗೆ ರೂ.84.7 ಲಕ್ಷ ನಿವ್ವಳ ಮೌಲ್ಯ ಅಂದಾಜಿಸಲಾಗಿದೆ.


ಈ ಬೆಲೆ ಮಾರುಕಟ್ಟೆಯ ಬೆಲೆಗಿಂತ ತೀರಾ ಕಡಿಮೆ ಇರುವ ಕಾರಣ, ಬಡಾವಣೆ ಅಭಿವೃದ್ಧಿ ಪಡಿಸಿದ ನಂತರ ಪರಿಸ್ಥಿತಿಯನ್ನು ಹಾಳು ಮಾಡಲು ದಲ್ಲಾಳಿಗಳು ಸರ್ಕಾರದ ಬೆಲೆಗಿಂತ ಹೆಚ್ಚು ಆದರೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಹಣಕ್ಕೆ ಅಗತ್ಯವಿರುವ ಭೂಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


ಸಾಂದರ್ಭಿಕ ಚಿತ್ರ


ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬದಲಾಗಿ ಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನ ಇಲ್ಲವೇ ನಗದು ಪರಿಹಾರ ನೀಡಲಾಗುತ್ತಿದೆ.


ಭೂ ಮಾಲೀಕರು ಈ ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಒಂದು ಎಕರೆಗೆ 43,560 ಚದರ ಅಡಿ ಭೂಮಿ ಬರುತ್ತದೆ. ಬಿಡಿಎ ಒಂದು ಎಕರೆ ಭೂಮಿ ಬಿಟ್ಟು ಕೊಟ್ಟ ರೈತರಿಗೆ 9,600 ಚ.ಅಡಿ ವಿಸ್ತೀರ್ಣದ ನಿವೇಶನಗಳನ್ನು ಪರಿಹಾರವಾಗಿ ನೀಡುತ್ತಿದೆ.


ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪಡೆಯಲು ಇಚ್ಛಿಸದವರಿಗೆ ಎಕರೆಗೆ ಒಂದು ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದೆ. ಆದರೂ ರೈತರಲ್ಲಿ ಬಡಾವಣೆ ನಿರ್ಮಾಣದ ಬಗ್ಗೆ ಇನ್ನೂ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಹಲವರು ಭೂಮಿ ಬಿಟ್ಟು ಕೊಡಲು ಒಪ್ಪುತ್ತಿಲ್ಲ.


2022ರ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ ವರದಿ ಏನೇಳುತ್ತದೆ?


ಫೆಬ್ರವರಿ 2022ರಲ್ಲಿ BDA ಸಲ್ಲಿಸಿದ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (EIA) ವರದಿಯು, ಯೋಜನಾ ಪ್ರದೇಶದಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಜೀವನೋಪಾಯದ ಮೂಲವಾಗಿದೆ.


bda has promised weekly review of kempegowda layout progress
ಸಾಂದರ್ಭಿಕ ಚಿತ್ರ


ಇಲ್ಲಿ 70% ಜನ ಕೃಷಿಯ ಮೇಲೆ ಅವಲಂಬಿತವಾಗಿದ್ದಾರೆ ಎಂದು ತಿಳಿಸಿದೆ. ಈ ಸಮೀಕ್ಷೆಯು ಜೀವನೋಪಾಯದ ನಷ್ಟವನ್ನು ಉಲ್ಲೇಖಿಸುತ್ತದೆ, ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭಯ ರೈತರಲ್ಲಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ವರದಿಯು ಕೇವಲ 1.01% ಭೂಮಿಯನ್ನು ಬೆಳೆ ಭೂಮಿ ಎಂದು ತೋರಿಸಿದೆ.


"ಸರ್ಕಾರ ನಮ್ಮ ಸಮಾಧಿಯ ಮೇಲೆ ಮನೆ ಕಟ್ಟುತ್ತಿದೆ"


ಈ ವರದಿಗೆ ಪ್ರತಿಕ್ರಿಯಿಸಿದ ರಾಮಗೊಂಡನಹಳ್ಳಿ ನಿವಾಸಿ ಎಂ ರಮೇಶ್ "ನಾವೆಲ್ಲರೂ ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದರೂ, ಇಐಎ ವರದಿಯು ಯೋಜನೆಯ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಲ್ಲೇಖಿಸಿಲ್ಲ.


ನಾವು ಸರ್ಕಾರಿ ಉದ್ಯೋಗಗಳ ಮೇಲೆ ಅವಲಂಬಿತವಾಗಿಲ್ಲ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ನಾವು ನಮ್ಮ ಜೀವನೋಪಾಯವನ್ನು ಗಳಿಸುತ್ತಿದ್ದೇವೆ. ಸರ್ಕಾರ ನಮ್ಮ ಸಮಾಧಿಯ ಮೇಲೆ ಮನೆಗಳನ್ನು ನಿರ್ಮಿಸಲು ಏಕೆ ಬಯಸುತ್ತಿದೆ ಎಂದು ನಮಗೆ ತಿಳಿಯುತ್ತಿಲ್ಲ" ಎಂದು ಅಳಲು ತೋಡಿಕೊಂಡರು.


ಸಣ್ಣ ಭೂಮಿಯಲ್ಲಿ ಮನೆ ಕಟ್ಟುವುದು ಹೇಗೆ ಎಂದು ರೈತನ ಪ್ರಶ್ನೆ


ಮಾವಳ್ಳಿಪುರದ ನಿವಾಸಿ ಬಿ ಶ್ರೀನಿವಾಸ್, ಡಿಕೆಎಸ್‌ಕೆಎಲ್‌ನ ಎರಡನೇ ಹಂತಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಿರುವ 2092 ಎಕರೆ ಭೂಮಿಯಲ್ಲಿ ತಮ್ಮ ಭೂಮಿಯೂ ಇದೆ, ನನಗೆ ಭೂಮಿ ಕೊಡಲು ಸೂತಾರಾಂ ಇಷ್ಟವಿಲ್ಲ ಎಂದಿದ್ದಾರೆ.


ಇದರ ಜೊತೆಗೆ ಮತ್ತೊಂದು ಸಮಸ್ಯೆ ಬಗ್ಗೆ ಬಿಚ್ಚಿಟ್ಟ ಶ್ರೀನಿವಾಸ್‌ "ಹಲವು ಹಳ್ಳಿಗರು 10 ಗುಂಟಾಗಳಿಗಿಂತ ಕಡಿಮೆ ಭೂಮಿಯನ್ನು (11,000 ಚದರ ಅಡಿ) ಹೊಂದಿದ್ದಾರೆ, ಅಲ್ಲಿ ಅವರು ಹೂವುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ ಮತ್ತು ಅದರಲ್ಲಿಯೇ ಜೀವನ ನಡೆಸುತ್ತಾರೆ.


ಅಂತಹವರು ಪರಿಹಾರವಾಗಿ ಸುಮಾರು 3,000 ಚದರ ಅಡಿ ಭೂಮಿಯನ್ನು ಪಡೆಯುತ್ತಾರೆ. ಈ ಜಮೀನುಗಳಲ್ಲಿ ಮನೆ ಕಟ್ಟುವುದು ಹೇಗೆ? ಕಟ್ಟಿದರೂ ಅವರ ಜೀವನೋಪಾಯಕ್ಕೆ ದಾರಿ ಏನು? ಎಂದು ಬಿಡಿಎನ ಪರಿಹಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಭೂಮಿಯನ್ನು ಡಿನೋಟಿಫೈ ಮಾಡಿದ ಅಧಿಕಾರಿಗಳು


ಈ ಯೋಜನೆಯು 3,546 ಎಕರೆಯದ್ದಾಗಿದ್ದರೂ, ಡಿಕೆಎಸ್‌ಕೆಎಲ್ ಯೋಜನೆಯಲ್ಲಿ ಕೆಲವು ಭೂ ಪಾರ್ಸೆಲ್‌ಗಳನ್ನು ಡಿನೋಟಿಫೈ ಮಾಡಲಾಗಿದೆ. ಬಿಡಿಎ ಭೂಸ್ವಾಧೀನಾಧಿಕಾರಿಗಳು 51 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿ ಲೇಔಟ್ ಯೋಜನೆಗಳಿಂದ ಹೊರಗಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಸೋಮಶೆಟ್ಟಿಹಳ್ಳಿ ನಿವಾಸಿ 60 ವರ್ಷದ ನಂಜುಂಡಪ್ಪ ಅವರು 1.5 ಎಕರೆ ಜಮೀನು ಹೊಂದಿದ್ದು, 1,200 ಅಡಿಕೆ ಮರಗಳು, 150 ತೆಂಗಿನ ಮರಗಳು ಮತ್ತು ವಿವಿಧ ಹಣ್ಣು ಮತ್ತು ಮರದ ಮರಗಳನ್ನು ಬೆಳೆದಿದ್ದಾರೆ.


ಅವರ ಜಮೀನು ಗ್ರಾಮ ಠಾಣಾ ವ್ಯಾಪ್ತಿಯ 200 ಮೀಟರ್‌ಗಳ ಒಳಗೆ ಇರುವುದರಿಂದ ಮೂಲತಃ ನೋಟಿಫೈ ಮಾಡಿರಲಿಲ್ಲ. ನಂತರ ಆಗಸ್ಟ್ 2022 ರಲ್ಲಿ ಹಲವರಿಗೆ ಡಿನೋಟಿಫೈ ಸೂಚನೆ ಬಂದಿದೆ ಎಂದು ತಿಳಿಸಿದರು.


ನಮ್ಮ ಭೂಮಿಯನ್ನು ಸರ್ಕಾರ ತೆಗೆದುಕೊಂಡು ಬೇರೆಯವರಿಗೆ ಏಕೆ ನೀಡಬೇಕು? ಈ ಭೂಮಿ ನಮ್ಮ ಏಕೈಕ ಜೀವನೋಪಾಯದ ಆಯ್ಕೆಯಾಗಿರುವುದರಿಂದ ನಾವು ಬೀದಿಗೆ ಬರಬೇಕಾಗುತ್ತದೆ. ಈ ವಯಸ್ಸಿನಲ್ಲಿ ನಾನು ಬೇರೆಡೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮ ಬಾಳಲ್ಲಿ ಸರ್ಕಾರ ಆಟ ಆಡುತ್ತಿದೆ ಎಂದು ನಂಜುಂಡಪ್ಪ ದುಃಖ ವ್ಯಕ್ತಪಡಿಸಿದರು.


ಇದನ್ನೂ ಓದಿ: Bengaluru Layouts: ಕೆಂಪೇಗೌಡ ಬಡಾವಣೆ ಪ್ರಗತಿ ಪ್ರತಿವಾರ ಪರಿಶೀಲನೆ ಭರವಸೆ ನೀಡಿದ ಬಿಡಿಎ


ಟೆಂಡರ್‌ ಆಗದೇ ಕಾಮಗಾರಿ


ಟೆಂಡರ್‌ ಆಗದೇ ಹಲವೆಡೆ ಕಾಮಗಾರಿ ಆರಂಭವಾಗಿದೆ ಎನ್ನುತ್ತಾರೆ ಇನ್ನೋರ್ವ ರೈತ ಬಸವರಾಜ. ಅರ್ಕಾವತಿ, ಕೆಂಪೇಗೌಡ ಬಡಾವಣೆಗಳಿಗೆ ಭೂಮಿ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ನೀಡಿಲ್ಲ. ನಮ್ಮ ಸಂಕಷ್ಟವನ್ನು ಕೇಳುವವರಿಲ್ಲ ಎಂದಿದ್ದಾರೆ.


ನಮಗೆ ಜಮೀನಿನ 1:3 ಬೆಲೆಯನ್ನು ನೀಡಬೇಕು ಮತ್ತು ಕೃಷಿ ಮತ್ತು ಡೈರಿ ಚಟುವಟಿಕೆಗಳನ್ನು ಮುಂದುವರಿಸಲು ನಮಗೆ ಸಹಾಯ ಮಾಡಲು ಬೇರೆಡೆ ಪುನರ್ವಸತಿ ಮಾಡಬೇಕು. ಅದರ ನಂತರ ಅವರು ಲೇಔಟ್‌ ಕೆಲಸ ಮುಂದುವರಿಸಬಹುದು ಎಂದು ಹಲವು ರೈತರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ ಬಿಡಿಎ ಮತ್ತು ರೈತರ ಜಟಾಪಟಿ ಎಲ್ಲಿಗೆ ಹೋಗಿ ತಲುಪುತ್ತದೆ ಎಂದು ಕಾದು ನೋಡಲೇಬೇಕು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು