news18-kannada Updated:January 18, 2021, 7:56 AM IST
ಪ್ರಾತಿನಿಧಿಕ ಚಿತ್ರ
ನೆಲಮಂಗಲ (ಜ. 18): ದೇಶಾದ್ಯಂತ ಪ್ರತಿದಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಯಾರೂ ಸಹಾಯಕ್ಕೆ ಬಾರದೆ ಮಹಿಳೆಯರು ಮಾನ, ಪ್ರಾಣವೆರಡನ್ನೂ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಆದರೆ, ಬೆಂಗಳೂರಿನಲ್ಲಿ ಬಲವಂತವಾಗಿ ಮಹಿಳೆಯ ಮೇಲೆ ಲೈಂಗಿಕ ಕ್ರಿಯೆಗೆ ಪ್ರಯತ್ನಿಸಿದವನ ಮೇಲೆ ಆ ಮಹಿಳೆಯೇ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲವಂತವಾಗಿ ತನ್ನ ಮೇಲೆ ಲೈಂಗಿಕ ಕ್ರಿಯೆಗೆ ಯತ್ನಿಸಿದವನ ಮೇಲೆ ಮಹಿಳೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. 27 ವರ್ಷದ ಸುಶೀಲಾ ಎಂಬ ಮಹಿಳೆ ತನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ 35 ವರ್ಷದ ಅಂಜನಾಮೂರ್ತಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಹೆಂಡತಿ ಜೊತೆ ಗೆಳೆಯನ ಅಕ್ರಮ ಸಂಬಂಧದ ಅನುಮಾನದಲ್ಲಿ ಸ್ನೇಹಿತನ ಬರ್ಬರ ಹತ್ಯೆ
ಅಂಜನಾಮೂರ್ತಿಯ ಮೇಲೆ ಹಲ್ಲೆ ಮಾಡಿದ ಸುಶೀಲಾ ಅವರ ಮೇಲೆ ಅಂಜನಾಮೂರ್ತಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಸುಶೀಲಾ ಅವರ ಕಾಲಿಗೆ ಮಚ್ಚಿನಿಂದ ಹೊಡೆದು, ಗಂಭೀರವಾಗಿ ಗಾಯಗೊಳಿಸಿದ್ದಾರೆ. ಇದರಿಂದ ಸುಶೀಲಾ ಅವರ ಎರಡೂ ಕಾಲುಗಳಲ್ಲಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಆಕೆಯನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು.
ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಸುಶೀಲಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published by:
Sushma Chakre
First published:
January 18, 2021, 7:56 AM IST