ಬೆಂಗಳೂರು (ಫೆ. 10): ಕುಟುಂಬದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳೇ ಕೆಲವೊಮ್ಮೆ ದೊಡ್ಡದಾಗುತ್ತವೆ. ಕೆಲವು ಮಹಿಳೆಯರು ತಮ್ಮ ಗಂಡ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದು ಗೊತ್ತಿದ್ದರೂ ಸುಮ್ಮನಿರುತ್ತಾರೆ. ಇನ್ನು ಕೆಲವರು ಗಂಡನ ಜೊತೆ ಜಗಳವಾಡಿಕೊಂಡು ಮನೆಬಿಟ್ಟು ಹೋಗುತ್ತಾರೆ. ಆದರೆ, ಬೆಂಗಳೂರಿನ ಮಹಿಳೆಯೊಬ್ಬರು ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗಂಡನ ಮೈಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ.
9 ವರ್ಷಗಳ ಹಿಂದೆ ಮದುವೆಯಾಗಿದ್ದ ಬೆಂಗಳೂರಿನ ಪದ್ಮಾ ಮತ್ತು ಮಂಜುನಾಥ್ ನಡುವೆ ಕೆಲವು ವರ್ಷಗಳಿಂದ ವೈಮನಸ್ಸು ಉಂಟಾಗಿತ್ತು. ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಂಜುನಾಥ್ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಪದ್ಮಾ ಗಂಡನಿಗೆ ಬುದ್ಧಿ ಹೇಳಲು ಪ್ರಯತ್ನಪಟ್ಟು ಸೋತಿದ್ದಳು. ಗಂಡನಿಗೆ ತಕ್ಕಪಾಠ ಕಲಿಸಲು ನಿರ್ಧರಿಸಿದ ಆಕೆ ಭಾನುವಾರ ತನ್ನ ಮನೆಯಲ್ಲಿ ಗಂಡನ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ.
ಇದನ್ನೂ ಓದಿ: ಬೀದಿಗೆ ಬಂತು ಐಪಿಎಸ್ ಅಧಿಕಾರಿಗಳ ಕೌಟುಂಬಿಕ ಕಲಹ; ಹೆಂಡತಿ ಮನೆ ಮುಂದೆ ಧರಣಿ ಕುಳಿತ ಗಂಡನ ಮನವೊಲಿಕೆ ಯಶಸ್ವಿ
ಯಶವಂತಪುರದ ಮೋಹನ್ ಕುಮಾರ್ ನಗರದಲ್ಲಿ ಈ ಘಟನೆ ನಡೆದಿದೆ. ಪದ್ಮಾ ತನ್ನ ಮನೆಯಲ್ಲಿ ಗಂಡ ಮಂಜುನಾಥ್ ಮೇಲೆ ಕುದಿಯುವ ಎಣ್ಣೆ ಸುರಿದ ಕಾರಣ ಮಂಜುನಾಥ್ ದೇಹದ ಅರ್ಧಭಾಗಕ್ಕೆ ತೀವ್ರ ಗಾಯವಾಗಿದೆ. ಮುಖ ಕೂಡ ಅರ್ಧ ಸುಟ್ಟುಹೋಗಿದೆ. ಗಾಯಾಳು ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಪದ್ಮಾಳನ್ನು ಯಶವಂತಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ