ಬನ್ನಂಜೆ ರಾಜನ ಆಪ್ತ ಮನೀಶ್​ ಶೆಟ್ಟಿ ಶೂಟೌಟ್; ಹಂತಕರ ಪತ್ತೆಗೆ 9 ವಿಶೇಷ ತಂಡ ರಚನೆ

Manish Shetty: ಭೂಗತ ಪಾತಕಿಗಳಾದ ಬನ್ನಂಜೆ ರಾಜ, ರವಿ ಪೂಜಾರಿಗೆ ಆಪ್ತನಾಗಿದ್ದ ಮನೀಶ್ ಶೆಟ್ಟಿಯನ್ನು ನಿನ್ನೆ ರಾತ್ರಿ 9 ಗಂಟೆಯ ವೇಳೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಶೂಟೌಟ್ ಪ್ರಕರಣದ ಹಂತಕರ ಪತ್ತೆಗಾಗಿ 9 ವಿಶೇಷ ತಂಡಗಳನ್ನು ಸಿದ್ಧಪಡಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಅ. 16): ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತ ಮನೀಶ್​ ಶೆಟ್ಟಿಯ ಮೇಲೆ ನಿನ್ನೆ ರಾತ್ರಿ ಬೆಂಗಳೂರಿನ ಬ್ರಿಗೇಡ್​ ರೋಡ್​ನಲ್ಲಿ ದುಷ್ಕರ್ಮಿಗಳು ಶೂಟೌಟ್ ನಡೆಸಿ, ಕೊಲೆ ಮಾಡಿದ್ದಾರೆ. ಮನೀಶ್ ಶೆಟ್ಟಿ ಕೇವಲ ಬನ್ನಂಜೆ ರಾಜನಿಗೆ ಮಾತ್ರವಲ್ಲದೆ ಇನ್ನೋರ್ವ ಅಂಡರ್​ವರ್ಲ್ಡ್​ ಡಾನ್ ರವಿ ಪೂಜಾರಿಗೂ ಆಪ್ತನಾಗಿದ್ದ ಎನ್ನಲಾಗಿದೆ. ಡ್ಯುಯೆಟ್ ಬಾರ್ ಮಾಲೀಕನಾಗಿದ್ದ 45 ವರ್ಷದ ಮನೀಶ್ ಶೆಟ್ಟಿಯನ್ನು ಆತನ ಬಾರ್ ಮುಂದೆಯೇ ನಿನ್ನೆ ರಾತ್ರಿ 9 ಗಂಟೆಯ ವೇಳೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಂತಕರ ಪತ್ತೆಗಾಗಿ 9 ವಿಶೇಷ ತಂಡಗಳನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ಹೊರರಾಜ್ಯಗಳಲ್ಲಿ ಆರೋಪಿಗಳಿಗಾಗಿ ವಿಶೇಷ ತಂಡಗಳು ಹುಡುಕಾಟ ನಡೆಸಲಿವೆ.

ಮನೀಶ್ ಶೆಟ್ಟಿಯ ಹಂತಕರ ಹುಡುಕಾಟಕ್ಕೆ ಒಂಬತ್ತು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಶುರುವಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯ ನಡೆದ ಸ್ಥಳದ ಸಂಪೂರ್ಣ ಸಿಸಿಟಿವಿಗಳನ್ನು ವಿಶೇಷ ತಂಡಗಳು ವಶಕ್ಕೆ ಪಡೆದಿವೆ. ಆರೋಪಿಗಳು ಪರಾರಿಯಾದ ಹೆಜ್ಜೆ ಗುರುತು ಆಧರಿಸಿ ಪೊಲೀಸರಿಂದ ತನಿಖೆ ನಡೆಯಲಿದೆ. ಕೇಂದ್ರ ವಿಭಾಗದ ಪೊಲೀಸರು ಹಾಗೂ ಅಪರಾಧ ವಿಭಾಗ(ಸಿಸಿಬಿ)ದಿಂದ ತನಿಖೆ ಆರಂಭವಾಗಿದೆ.

2010ರ ಜೂನ್ 25ರಂದು ಕಾಸರಗೋಡಿನ ಬೇವಿಂಜೆಯ ಕಂಟ್ರಾಕ್ಟರ್ ಮಹಮ್ಮದ್ ಕುಂಜ್ಞಿ ಎಂಬುವವರ ಮನೆಗೆ ಮನೀಶ್ ಶೆಟ್ಟಿ ಗುಂಡು ಹಾರಿಸಿದ್ದ. ದಾವೂದ್ ಇಬ್ರಾಹಿಂ ಈ ಮಹಮ್ಮದ್ ಕುಂಜ್ಞಿಗೆ 50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳುಹಿಸಿದ್ದ. ಅದನ್ನು ಕುಂಜ್ಞಿ ಮನೆಯಲ್ಲಿ ಇಟ್ಟಿದ್ದಾನೆ ಎಂಬ ಶಂಕೆಯಿಂದ ಮನೀಶ್ ಶೆಟ್ಟಿ ಗುಂಡು ಹಾರಿಸಿದ್ದ. ಈ ಆರೋಪದ ಮೇಲೆ ಕಾಸರಗೋಡು ಪೊಲೀಸರು ಮನೀಶ್ ಶೆಟ್ಟಿಯನ್ನು ಬಂಧಿಸಿದ್ದರು. ಮನೀಶ್ ಶೆಟ್ಟಿಯ ಮೊದಲ ಗಾಡ್ ಫಾದರ್ ಮುತ್ತಪ್ಪ ರೈ. ಆ ಬಳಿಕ ಬನ್ನಂಜೆ ರಾಜನ ಗುಂಪು ಸೇರಿದ್ದ ಮನೀಶ್ ಶೆಟ್ಟಿ ನಂತರ ತಾನೇ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶೂಟೌಟ್; ಬನ್ನಂಜೆ ರಾಜ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ

ನಿನ್ನೆ ರಾತ್ರಿಯ ಘಟನೆಯ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದು, ಗುರುವಾರ ರಾತ್ರಿ 9 ಗಂಟೆಯ ಮೇಲೆ ಬ್ರಿಗೇಡ್ ರೋಡ್ ಪಬ್ ಬಳಿ ಗುಂಡಿನ ದಾಳಿ ನಡೆದಿದೆ. ಎಸ್​ಬಿಬಿಯಿಂದ ಶೂಟ್ ಮಾಡಲಾಗಿದೆ, ಆಯುಧದಿಂದಲೂ ಹಲ್ಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಗಾಡಿಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಕೃತ್ಯ ಎಸಗಿಸಿ‌ದ ಆರೋಪಿಗಳನ್ನು ಹಿಡಿಯಲು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬಾರ್​ವೊಂದರಲ್ಲಿ ಪಾರ್ಟನರ್ ಆಗಿದ್ದ ಮನೀಶ್ ಶೆಟ್ಟಿಯನ್ನು ಅದೇ ಬಾರ್ ಬಳಿ ಶೂಟ್ ಮಾಡಲಾಗಿದೆ. ಈಗಾಗಲೇ ಸೆಂಟ್ರಲ್ ಡಿಸಿಪಿ‌ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ‌ಟೀಮ್ ರಚನೆ ಮಾಡಲಾಗಿದೆ. ಒಟ್ಟು 9 ತಂಡಗಳನ್ನು ರಚಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಹೊರ ರಾಜ್ಯ ಮತ್ತು ಅಂತರ್ ಜಿಲ್ಲೆಗಳಿಗೆ ಪೊಲೀಸ್ ತಂಡ ಹೊರಡಲಿದೆ. ಸಿಸಿಬಿಯಿಂದಲೂ ತನಿಖೆ ನಡೆಯಲಿದೆ ಎಂದಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ನಂಟಿತ್ತು. ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ. ಅಂಡರ್​ವರ್ಲ್ಡ್ ಡಾನ್​ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಅವರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.
Published by:Sushma Chakre
First published: