Bangalore Crime: ಬೆಂಗಳೂರಿನಲ್ಲಿ ಬಿಎಸ್​ಪಿ ಮುಖಂಡನ ಬರ್ಬರ ಹತ್ಯೆ

Bengaluru Murder: ಎನ್ ಕೌಂಟರ್ ಆದ ಸ್ಲಂ ಭರತನ ಕೃತ್ಯಗಳನ್ನ ವಿರೋಧಿಸಿ ಎರಡ್ಮೂರು ಬಾರಿ ದೂರು ಸಹ ಕೊಟ್ಟಿದ್ದ ಬಿಎಸ್​ಪಿ ನಾಯಕ ಶ್ರೀನಿವಾಸ್​ ಅವರನ್ನು ಬೆಂಗಳೂರಿನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಶ್ರೀನಿವಾಸ್

ಶ್ರೀನಿವಾಸ್

  • Share this:
ಬೆಂಗಳೂರು : ಆ ಏರಿಯಾದಲ್ಲಿ ಆತ ಸಣ್ಣ ಪುಟ್ಟ ಬ್ಯುಸಿನಸ್ ಮಾಡಿಕೊಂಡು ಓಡಾಡುತ್ತಿದ್ದ. ಜೊತೆಗೆ ಬಿಎಸ್ ಪಿ ಪಕ್ಷದ ಮುಖಂಡನಾಗಿದ್ದು, ರಾಜಕೀಯದಲ್ಲಿ ಸಕ್ರಿಯನಾಗಿದ್ದ. ಇದಲ್ಲದೆ ಎನ್​ಕೌಂಟರ್ ಆದ ರೌಡಿ ಸ್ಲಂ ಭರತನ ಅಪರಾಧ ಚಟುವಟಿಕೆಗಳ ಮಾಹಿತಿಯನ್ನು ಪೊಲೀಸರಿಗೆ ಆಗಾಗ ತಿಳಿಸುತ್ತಿದ್ದ. ಆದರೆ ಇವತ್ತು ಅಕ್ಕನ ಮನೆ ಕಟ್ಟೋ ಜಾಗಕ್ಕೆ ಬಂದು ನಟ್ಟ ನಡು ರಸ್ತೆಯಲ್ಲಿ ಬೀದಿ ಹೆಣವಾಗಿದ್ದಾನೆ.

ಆತನ ಹೆಸರು ಶ್ರೀನಿವಾಸ್. 43 ವರ್ಷದ ಆತ ಲಗ್ಗೆರೆ, ರಾಜಗೋಪಾಲನಗರ ಪ್ರದೇಶಗಳಲ್ಲಿ ಚಿರಪರಿಚಿತ‌ನಾಗಿದ್ದ. ಅಷ್ಟೇ ಅಲ್ಲದೆ, ಎನ್ ಕೌಂಟರ್ ಆದ ಸ್ಲಂ ಭರತನ ಕೃತ್ಯಗಳನ್ನ ವಿರೋಧಿಸಿ ಎರಡ್ಮೂರು ಬಾರಿ ದೂರು ಸಹ ಕೊಟ್ಟಿದ್ದ. ಅದಲ್ಲದೆ ಕ್ರೈಂ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿದಾರನೂ ಆಗಿದ್ದ. ಇದೇ ಕಾರಣಕ್ಕೆ ಸ್ಲಂ ಭರತನ ಶಿಷ್ಯಂದಿರ ಜೊತೆ ಆತನಿಗೆ ಶತ್ರುತ್ವವಿತ್ತು. ಅಲ್ಲದೆ, ಎರಡ್ಮೂರು ಬಾರಿ ಶ್ರೀನಿವಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದು, ಮಿಸ್  ಆಗಿದ್ದ. ಅದಲ್ಲದೆ ಸ್ಲಂ ಭರತ ಎನ್ ಕೌಂಟರ್ ಆಗಲು ಶ್ರೀನಿವಾಸ್ ಕಾರಣ ಎಂದು ಸಹಚರರ ಗ್ಯಾಂಗ್ ಕತ್ತಿ ಮಸೆದಿತ್ತು.

ಸ್ಲಂ ಭರತನ ಎನ್ ಕೌಂಟರ್ ಬಳಿಕ ರಾಜಕೀಯದಲ್ಲಿ ಸಕ್ರಿಯನಾಗಿದ್ದ ಶ್ರೀನಿವಾಸ್ ಹೆಚ್ಚಾಗಿ ಏರಿಯಾದಲ್ಲಿ ಓಡಾಡ್ತಿದ್ದ. ಇದು ಸ್ಲಂ ಭರತನ ಶಿಷ್ಯಂದಿರಿಗೆ ಕೋಪ ಹೆಚ್ಚಿಸಿತ್ತು. ಆ ಬಳಿಕವೂ ಪೊಲೀಸರಿಗೆ ಸ್ಲಂ ಭರತನ ಶಿಷ್ಯಂದಿರ ಬಗ್ಗೆ ಶ್ರೀನಿವಾಸ್ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕೊಲೆಗೆ ಸ್ಕೆಚ್ ಹಾಕಿ ಕಾದು ಕುಳಿತಿದ್ದರು. ಆದರೆ, ನಿನ್ನೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕಸ್ತೂರಿ ನಗರದಲ್ಲಿ ಅಕ್ಕನಿಗೆ ಮನೆ ಕಟ್ಟಿಸುತ್ತಿರುವ ಜಾಗಕ್ಕೆ ಬಂದು ಚೇರ್ ಮೇಲೆ ಕುಳಿತಿದ್ದ. ಹೀಗಿರುವಾಗ್ಲೇ ಐದಾರು ಮಂದಿ ಸುತ್ತುವರೆದು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ.‌ ಜೊತೆಗೆ ಚೇರ್ ನಿಂದ ಹೊಡೆದು, ಕಲ್ಲು ತೆಗೆದುಕೊಂಡು ತಲೆ ಮೇಲೆ ಹಾಕಿ ಎಸ್ಕೇಪ್ ಆಗಿದ್ದಾರೆ. ಇಷ್ಟೆಲ್ಲಾ ಆದರೂ ಉಸಿರಾಡುತ್ತಿದ್ದ ಶ್ರೀನಿವಾಸ್​​​ನನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Raksha Ramaiah: ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವಿರೋಧ ಆಯ್ಕೆ ಸಾಧ್ಯತೆ

ರಾಜಗೋಪಾಲನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದು, ಪ್ರಮುಖ ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ.  ಈಗಾಗಲೇ ಕೆಲವು ಆರೋಪಿಗಳು ಬೆಂಗಳೂರು ಬಿಟ್ಟು ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಾರೆ. ಶ್ರೀನಿವಾಸ್ ಕೊಲೆ ಹಿಂದೆ ಸ್ಲಂ ಭರತ ತಮ್ಮನ ಕೈವಾಡದ ಶಂಕೆಯಿದ್ದು ತನಿಖೆ ನಡೆಸಲಾಗುತ್ತಿದೆ.

ಶ್ರೀನಿವಾಸ್ ಕುಟುಂಬಸ್ಥರು ಸಹ ಸ್ಲಂ ಭರತನ ಶಿಷ್ಯಂದಿರ ಕೈವಾಡವಿದೆ ಎಂದು ದೂರು ನೀಡಿದ್ದಾರೆ. ಈ ನಡುವೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಸಹ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಏರಿಯಾದಲ್ಲಿ ನಿಗಾ ವಹಿಸಲು ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಅದೇನೇ ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕಾರಣಕ್ಕೇ ಹತ್ಯೆಯಾಗಿದ್ದು ವಿಪರ್ಯಾದ ಸಂಗತಿ.
Published by:Sushma Chakre
First published: