ಬೆಂಗಳೂರು (ಫೆ. 26): ಬೆಂಗಳೂರಿನಲ್ಲಿ ನಿನ್ನೆ ಸಂಜೆ ಒರಿಸ್ಸಾ ಮೂಲದ ಯುವತಿ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಶುಭಶ್ರೀ ಮೇಲೆ ನಾಡಪಿಸ್ತೂಲ್ನಿಂದ ಗುಂಡು ಹಾರಿಸಿ, ಪರಾರಿಯಾಗಿದ್ದ ಅಮರೇಂದ್ರ ಪಟ್ನಾಯಕ್ ಶುಭಶ್ರೀಯ ಮಾಜಿ ಪ್ರಿಯಕರ ಎಂಬ ಸಂಗತಿ ಇದೀಗ ಬಯಲಾಗಿದೆ. ಇಂದು ಮದುವೆಯಾಗಬೇಕಾಗಿದ್ದ ಆತ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾನೆ.
ಮಾರತ್ತಹಳ್ಳಿಯ ಮುನೇಕೊಳಲು ಬಳಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಶುಭಶ್ರೀ ಮೇಲೆ ಕೊಲೆ ಪ್ರಯತ್ನ ನಡೆದಿತ್ತು. ಮಂಗಳವಾರ ಸಂಜೆ ಆಕೆ ಕೆಲಸ ಮುಗಿಸಿ, ವಾಪಾಸ್ ಬಂದಾಗ ಆಕೆಯ ಪಿಜಿ ಎದುರೇ ನಾಡಪಿಸ್ತೂಲ್ನಲ್ಲಿ ಗುಂಡು ಹಾರಿಸಲಾಗಿತ್ತು. ಒಂದು ಬಾರಿ ಆಕೆಯ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಪಿಸ್ತೂಲ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಶುಭಶ್ರೀಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಬೆಂಗಳೂರಿನಲ್ಲಿ ವಾಸವಾಗಿರುವ ಒರಿಸ್ಸಾ ಮೂಲದ ಶುಭಶ್ರೀ ಪ್ರಿಯದರ್ಶಿನಿ 2 ವರ್ಷಗಳಿಂದ ನಿಮ್ಹಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಕೂಡ ಒರಿಸ್ಸಾದವನು, ಆತನ ಹೆಸರು ಅಮರೇಂದ್ರ ಪಟ್ನಾಯಕ್ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಆದರೆ, ಇಂದು ಬೆಳಗ್ಗೆ ಆ ಆರೋಪಿ ಅಮರೇಂದ್ರ ಪಟ್ನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊಳಗಿತು ಗುಂಡಿನ ಸದ್ದು; ಯುವತಿಗೆ ಶೂಟ್ ಮಾಡಿ ಆರೋಪಿ ಪರಾರಿ
ಆತ್ಮಹತ್ಯೆಗೂ ಮೊದಲು 17 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ ಅಮರೇಂದ್ರ ಶುಭಶ್ರೀಗೆ ಶುಭ ಹಾರೈಸಿದ್ದ. ಅವರಿಬ್ಬರಿಗೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಮರೇಂದ್ರ ಮತ್ತು ಶುಭಶ್ರೀಗೆ ಏನು ಸಂಬಂಧ? ಎಂದು ತನಿಖೆ ನಡೆಸಿರುವ ಪೊಲೀಸರಿಗೆ ಅಚ್ಚರಿಯ ಮಾಹಿತಿಗಳು ಸಿಕ್ಕಿವೆ.
ಶುಭಶ್ರೀ ಮತ್ತು ಅಮರೇಂದ್ರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಅವರ ನಡುವೆ ಬ್ರೇಕಪ್ ಆಗಿತ್ತು. ಅಮರೇಂದ್ರನಿಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಇಂದು ಆತನ ಮದುವೆ ನಡೆಯಬೇಕಾಗಿತ್ತು. ಆದರೆ, ಅಲ್ಲಿ ನಡೆದಿದ್ದೇ ಬೇರೆ! ಮದುವೆ ಸಂಭ್ರಮದಲ್ಲಿದ್ದ ಅಮರೇಂದ್ರನ ಮನೆಯವರಿಗೆ ಆಘಾತ ಕಾದಿತ್ತು.
ಇದನ್ನೂ ಓದಿ: ಬೆಂಗಳೂರು ಯುವತಿಯ ಶೂಟೌಟ್ ಪ್ರಕರಣ; ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ಇಬ್ಬರ ನಡುವೆ ಬ್ರೇಕಪ್ ಆದ ನಂತರ ಅಮರೇಂದ್ರ ಬೇರೆ ಯುವತಿಯೊಂದಿಗೆ ಮದುವೆಯಾಗುತ್ತಿದ್ದಾನೆ ಎಂದು ತಿಳಿದು ಶುಭಶ್ರೀ ಅಸಮಾಧಾನಗೊಂಡಿದ್ದಳು. ಈ ಮದುವೆಯನ್ನು ಮುರಿಯಬೇಕೆಂದು ತಾವಿಬ್ಬರೂ ಜೊತೆಯಾಗಿರುವ ಫೋಟೋವೊಂದನ್ನು ಅಮರೇಂದ್ರ ಮದುವೆಯಾಗಬೇಕಾಗಿದ್ದ ಯುವತಿಗೆ ಕಳುಹಿಸಿದ್ದಳು. ಇದರಿಂದಾಗಿ ಆಕೆ ಮದುವೆಯಾಗಲು ನಿರಾಕರಿಸಿದ್ದಳು. ಮದುವೆ ಮುರಿದುಬಿದ್ದಿದ್ದರಿಂದ ಕೋಪಗೊಂಡಿದ್ದ ಅಮರೇಂದ್ರ ಶುಭಶ್ರೀಯನ್ನು ಕೊಲ್ಲಲು ನಿರ್ಧರಿಸಿದ್ದ.
ಇದನ್ನೂ ಓದಿ: ಅಮೂಲ್ಯ-ಆರ್ದ್ರಾ ದೇಶದ್ರೋಹ ಪ್ರಕರಣ; ಪೊಲೀಸ್ ತನಿಖೆಯಲ್ಲಿ ಅಚ್ಚರಿಯ ಸಂಗತಿ ಬಯಲು
ಬ್ರೇಕಪ್ ಆಗಿದ್ದರೂ ತನ್ನ ಜೀವನದ ಜೊತೆ ಆಟವಾಡುತ್ತಿರುವ ಶುಭಶ್ರೀ ಮೇಲೆ ಕೋಪಗೊಂಡಿದ್ದ ಅಮರೇಂದ್ರ ಆಕೆಯನ್ನು ಕೊಲ್ಲುವ ಸಲುವಾಗಿ ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ಶುಭಶ್ರೀಯ ಪಿಜಿ ಬಳಿ ಆಕೆಗಾಗಿ ಕಾದು ಕುಳಿತಿದ್ದ ಅಮರೇಂದ್ರ ಮಂಗಳವಾರ ಸಂಜೆ ಆಕೆ ಬಂದಕೂಡಲೆ ಹೊಟ್ಟೆಗೆ ಗುಂಡು ಹಾರಿಸಿದ್ದ. ನಂತರ ಭಯದಿಂದ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ಶುಭಶ್ರೀಯನ್ನು ಶೂಟ್ ಮಾಡಿದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ.
ಶುಭಶ್ರೀ 2 ವರ್ಷಗಳಿಂದ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಮರೇಂದ್ರ ಪಟ್ನಾಯಕ್ ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಇಬ್ಬರಿಗೂ ತೀವ್ರವಾದ ಗಾಯಗಳಾಗಿದ್ದು, ಅವರ ಆರೋಗ್ಯ ಸುಧಾರಿಸಿದ ನಂತರ ಪೊಲೀಸರು ಹೇಳಿಕೆ ಪಡೆಯಲಿದ್ದಾರೆ. ಅಮರೇಂದ್ರನ ಪರಿಸ್ಥಿತಿ ಗಂಭೀರವಾಗಿದ್ದು, ಶುಭಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈಟ್ಫೀಲ್ಡ್ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ