ಬೆಂಗಳೂರು (ಜ. 24): ಸಿಲಿಕಾನ್ ಸಿಟಿಯಲ್ಲಿ ವೇಶ್ಯಾವಾಟಿಕೆಯ ಜಾಲ ದೊಡ್ಡದಾಗೇ ಬೆಳೆದಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವೇಶ್ಯೆಯೊಬ್ಬಳು ತನ್ನ ಮನೆಯಲ್ಲಿ ಕೊಲೆಯಾಗಿದ್ದಳು. ಆ ಕೊಲೆಯ ಬೆನ್ನತ್ತಿ ಹೋದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸಬೇಕೆಂದು ಕಂಡೀಷನ್ ಹಾಕಿದ ಕಾರಣಕ್ಕೆ ವೇಶ್ಯೆಯ ಗ್ರಾಹಕನೊಬ್ಬ ಆಕೆಯನ್ನು ಕೊಂದಿರುವ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಈ ಘಟನೆ ನಡೆದಿದೆ. 42 ವರ್ಷದ ಮಂಜುಳಾ ಎಂಬ ವೇಶ್ಯೆಯ ಮನೆಗೆ ಬಂದಿದ್ದ 48 ವರ್ಷದ ಮುಕುಂದ ಎಂಬ ಸೆಕ್ಯುರಿಟಿ ಗಾರ್ಡ್ ಕಾಂಡೋಮ್ ಬಳಸಲು ನಿರಾಕರಿಸಿದ್ದ. ಹಾಗಿದ್ದರೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ಮಂಜುಳಾ ಗಲಾಟೆ ಮಾಡಿದ್ದಳು. ಈ ರೀತಿ ಕಂಡೀಷನ್ ಹಾಕುವುದಾದರೆ ನಾನು ಕೊಟ್ಟ ಹಣವನ್ನು ವಾಪಾಸ್ ಕೊಡು ಎಂದು ಮುಕುಂದ ಗಲಾಟೆ ಮಾಡಿದ್ದ.
ಇದನ್ನೂ ಓದಿ: ಹೋಂವರ್ಕ್ ಮಾಡದ್ದಕ್ಕೆ 450 ಬಸ್ಕಿ ಹೊಡೆಸಿದ ಶಿಕ್ಷಕಿ; 8 ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲು
ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದ ಮಂಜುಳಾ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಆಕೆಗೆ ತನ್ನದೇ ಆದ ಖಾಯಂ ಗ್ರಾಹಕರಿದ್ದರು. ತನ್ನ ಮಗನ ಜೊತೆ ರಾಜಾಜಿನಗರದ ಬಳಿ ವಾಸಿಸುತ್ತಿದ್ದ ಮಂಜುಳಾ ಜನವರಿ 11ರಂದು ಮೆಜೆಸ್ಟಿಕ್ ಬಳಿ ಮಕುಂದನನ್ನು ಭೇಟಿಯಾಗಿದ್ದಳು. ಕೆ.ಆರ್.ಪುರ ತಾಲೂಕಿನ ತನ್ನ ಊರಿಗೆ ಹೋಗಲು ತೆರಳುತ್ತಿದ್ದ ಮುಕುಂದ ಕೊನೆಗೆ ಮನಸು ಬದಲಾಯಿಸಿ ಮಂಜುಳಾ ಜೊತೆಗೆ ಆಕೆಯ ಮನೆಗೆ ತೆರಳಿದ್ದ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮುಕುಂದನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಲು ಮಂಜುಳಾ 2,500 ರೂ.ಗೆ ಬೇಡಿಕೆಯಿಟ್ಟಿದ್ದಳು. ಕೊನೆಗೆ 1,500 ರೂ.ಗೆ. ವ್ಯವಹಾರ ಕುದುರಿತ್ತು. ಆದರೆ, ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಲು ಮುಕುಂದ ಒಪ್ಪದ ಕಾರಣ ಜಗಳ ನಡೆದಿತ್ತು ಎಂದು ಮುಕುಂದ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಇದನ್ನೂ ಓದಿ: ಪ್ರಾಣಕ್ಕೆ ಕುತ್ತು ತಂದ ಫೇಸ್ಬುಕ್ ಕ್ರೇಜ್; ಪ್ರೀತಿಸಿ ಮದುವೆಯಾದವಳ ತಲೆಯನ್ನೇ ಛಿದ್ರಗೊಳಿಸಿದ ಗಂಡ
ಇಬ್ಬರ ನಡುವೆ ಜಗಳವಾದಾಗ ಮುಕುಂದ ತನ್ನ ಹಣವನ್ನು ವಾಪಾಸ್ ಕೊಡು ಎಂದು ಮಂಜುಳಾ ಬಳಿ ಹಠ ಹಿಡಿದಿದ್ದ. ಜಾಸ್ತಿ ಮಾತನಾಡಿದರೆ ಜೋರಾಗಿ ಕಿರುಚಿಕೊಂಡು, ಅಕ್ಕಪಕ್ಕದವರನ್ನು ಕರೆಸುವುದಾಗಿ ಆಕೆ ಬೆದರಿಕೆಯೊಡ್ಡಿದ್ದಳು. ಅಕ್ಕಪಕ್ಕದವರು ಬಂದರೆ ತನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿದ ಮುಕುಂದ ಆಕೆಯ ಬಾಯಿ ಮುಚ್ಚಲು ಹೋಗಿದ್ದ. ಆಗ ಆಕೆ ಆತನ ಮರ್ಮಾಂಗಕ್ಕೆ ಕಾಲಿನಿಂದ ಒದ್ದಿದ್ದಳು. ಇದರಿಂದ ಕೋಪಗೊಂಡ ಮುಕುಂದ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಆಕೆಯನ್ನು ಹೆದರಿಸಲು ಹೊಟ್ಟೆಗೆ ತಿವಿದಿದ್ದ. ಆಗ ಆಕೆ ಜೋರಾಗಿ ಕಿರುಚಿಕೊಂಡಾಗ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಆಕೆಯ
ಕುತ್ತಿಗೆ ಸೀಳಿ ಕೊಲೆ ಮಾಡಿದ್ದ. ನಂತರ ಆಕೆಯ ಸರ ಮತ್ತು 2 ಮೊಬೈಲ್ಗಳನ್ನು ತೆಗೆದುಕೊಂಡು ಓಡಿಹೋಗಿದ್ದ.
ಮಂಜುಳಾಳ ಮಗ ಶಾಲೆಯಿಂದ ಮನೆಗೆ ವಾಪಾಸ್ ಬಂದಾಗ ತನ್ನ ತಾಯಿ ರಕ್ತದ ಹೊಳೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಸುಬ್ರಹ್ಮಣ್ಯನಗರ ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸಲು ತನಿಖಾ ತಂಡವೊಂದನ್ನು ರಚಿಸಿದ್ದರು. ಸುಮಾರು 150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿ ಮುಕುಂದನನ್ನು
ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ