ಬೆಂಗಳೂರು (ಜೂ. 22): ದೇವರು ಮೈ ಮೇಲೆ ಬರೋದು, ದೆವ್ವ ಬಿಡಿಸೋದು ಹೀಗೆ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಸಾಲಿಗೆ ಈಗ ಕಾಮಾಕ್ಷಿಪಾಳ್ಯ "ಚಂದ್ರಕಲಾ" ದೇವತೆಯ ಹೈಡ್ರಾಮಾವೊಂದು ಸೇರಿದೆ. ಹೌದು, ಕಾಮಾಕ್ಷಿಪಾಳ್ಯ ಚಂದ್ರಕಲಾ ಎಂಬಾಕೆ ದೇವರ ಹೆಸರು ಹೇಳಿ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ.
ದೇವರು ಮೈಮೇಲೆ ಬರುತ್ತೆ ಎಂದು ಮನೆಯಲ್ಲಿ ಪೂಜೆ ಮಾಡಿಸಿ ಏರಿಯಾದ ಮಹಿಳೆಯರನ್ನ ಚಂದ್ರಕಲಾ ನಂಬಿಸಿದ್ದಳು. ನಂಗೆ ಮೈಮೇಲೆ ದೇವರು ಬರುತ್ತೆ, ನಾನು ಹೇಳೋದೆಲ್ಲ ಸತ್ಯ ಅಂತ ಹೇಳಿದ್ದಳು. ನನ್ನಿಂದ ಯಾರಿಗೂ ಮೋಸ ಆಗೋದಿಲ್ಲ ಎಂದು ಅದನ್ನೇ ಬಂಡವಾಳ ಮಾಡಿಕೊಂಡು, ಲಕ್ಷ-ಲಕ್ಷ ಹಣ ಚೀಟಿ ಕಟ್ಟಿಸಿಕೊಂಡು ಮಹಿಳೆಯರಿಗೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಕಡಿಮೆ ಬೆಲೆಗೆ ಸೈಟ್ ಕೊಡಿಸೋದಾಗಿ ನಂಬಿಸಿ ಹಣ ಪಡೆದು ವಂಚನೆ ಆರೋಪವೂ ಇದೆ. ಮನೆಗೆ ದೇವರ ವಿಗ್ರಹ ತಂದು ಪೂಜೆ ಮಾಡ್ತೀವಿ ಎಂದು ಕರೆಸುತ್ತಿದ್ದ ಚಂದ್ರಕಲಾ, ಮಧ್ಯಮ ವರ್ಗದ ಮಹಿಳೆಯರು ಮತ್ತು ಕೆಲ ಹಣವಿರುವ ಮಹಿಳೆಯರ ಜೊತೆ ಸ್ನೇಹ ಬೆಳೆಸುತ್ತಿದ್ದಳು.
![Bengaluru Woman Cheated ladies in the Name of God]()
ಆರೋಪಿ ಚಂದ್ರಕಲಾ
ಇದನ್ನೂ ಓದಿ: ಉತ್ತರ ಪ್ರದೇಶದ ಶೆಲ್ಟರ್ ಹೋಂನಲ್ಲಿ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ; ಅವರಲ್ಲಿ ಐವರು ಗರ್ಭಿಣಿ!
ಮಹಿಳೆಯರು ಪೂಜೆ ಅಂತ ಜಮಾಯಿಸುತ್ತಿದ್ದಂತೆ ಎಲ್ಲರೂ ನಿಬ್ಬೆರಗಾಗುವಂತೆ ತನ್ನ ನಟನಾ ಸಾಮರ್ಥ್ಯವನ್ನು ತೋರಿಸುತ್ತಿದ್ದಳು. ಮೈಮೇಲೆ ದೇವರು ಬಂದಿರುವ ರೀತಿ ಹೈಡ್ರಾಮಾ ಮಾಡಿ ಮಹಿಳೆಯರನ್ನು ನಂಬಿಸುತ್ತಿದ್ದಳು. ಬಾಡಿಗೆ ಮನೆಯಲ್ಲಿ ಮಾತಿನಲ್ಲೇ ದೇವರನ್ನು ತೋರಿಸಿ, ಮರುಳು ಮಾಡುತ್ತಿದ್ದಳು. ನನ್ನ ಬಳಿ ಚೀಟಿ ಹಣ ಹಾಕಿ, ಯಾವ ಮಹಿಳೆಯರಿಗೂ ಸಮಸ್ಯೆ ಆಗುವುದಿಲ್ಲ. ಕಷ್ಟಕಾಲದಲ್ಲಿ ಆ ಹಣ ನಿಮಗೆ ಸಹಾಯವಾಗುತ್ತದೆ ಎಂದು ಒಬ್ಬೊಬ್ಬರಿಂದ 2 ಲಕ್ಷದಿಂದ 30 ಲಕ್ಷದವರೆಗೆ ಹಣ ಪಡೆದು ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ