news18-kannada Updated:March 3, 2021, 10:48 AM IST
ವಂಚನೆ ಮಾಡಿದ ವ್ಯಕ್ತಿಯೊಂದಿಗೆ ಮಹಿಳೆ
ನೆಲಮಂಗಲ ( ಮಾ. 3): ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿ ಮಗು ಪಡೆದ ಮಹಿಳೆ ಕೈಗೆ ಮಗು ಸೇರುತ್ತಿದ್ದಂತೆ ಕಟ್ಟಿಕೊಂಡ ಗಂಡ ಕೈಕೊಟ್ಟು ಹೊರಟು ಹೋದ. ಬದುಕು ಕಟ್ಟಿಕೊಳ್ಳೋಕೆ ಅಂತ ಬೆಂಗಳೂರಿಗೆ ಬಸ್ ಹತ್ತಿದವಳ ಜೊತೆಯಾದ ಟೆಕ್ಕಿ ಈಕೆಯ ಮಗನನ್ನು ಹೊತ್ತುಕೊಂಡು, ಈಕೆಗೆ ನಂಬಿಸಿ ಕೈಕೊಟ್ಟು ಪರಾರಿಯಾಗಿದ್ದಾನೆ. ಎರಡು ಮನೆ ನಂಬಿ ದಾಸಯ್ಯ ಕೆಟ್ಟ ಎಂಬ ಹಾಗಾಯಿತು ಈಕೆಯ ಬದುಕು. ಚಿಕ್ಕ ವಯಸ್ಸಿನಲ್ಲೇ ಕಟ್ಟಿಕೊಂಡ ಗಂಡನಿಂದ ದೂರ ಉಳಿದ ಗಂಗಮ್ಮ (23) ಬದುಕು ಕಟ್ಟಿಕೊಳ್ಳಲು ಕಳೆದ 3 ವರ್ಷದ ಹಿಂದೆ KSRTC ಬಸ್ ಹತ್ತಿ ಬೆಳಗಾವಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರಕ್ಕೆ ಬಂದು ವಂಚನೆಗೊಳಗಾಗಿದ್ದಾಳೆ.
ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಬರಲು ಈಕೆ ಬರುತ್ತಿದ್ದ ಬಸ್ ಹತ್ತಿ ಈಕೆಯ ಬೆಂಗಳೂರು ಪ್ರಯಾಣಕ್ಕೆ ಜೊತೆಯಾಗಿ ಸಿಕ್ಕ ಟೆಕ್ಕಿ ಬೀರಪ್ಪ, ನಂತರ ಸಲುಗೆಯಿಂದ ಆಕೆಯ ದೌರ್ಬಲ್ಯಗಳನ್ನು ತಿಳಿದುಕೊಂಡಿದ್ದ.ಆಕೆ ಗಂಡ ಬಿಟ್ಟ ವಿಷಯ ತಿಳಿದು ನಿನಗೆ ಜೀವನ ಕೊಡುತ್ತೇನೆ ಎಂದು ನಂಬಿಸಿದ್ದ. ಒಂಟಿತನದಿಂದ ನೊಂದು ಬೆಂದಿದ್ದ ಮಹಿಳೆಗೆ ಆಶ್ರಯ ಆಗುತ್ತಾನೆ ಎಂದು ಪರಿಚಯ ಮಾಡಿಕೊಂಡ ಮಹಿಳೆ ಇಂದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ.
ಟೆಕ್ಕಿ ಬೀರಪ್ಪ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಈತನ ಸಲುಗೆಯ ಮಾತಿಗೆ ಮರುಳಾದ ಗಂಗಮ್ಮಳ ಮನೆಗೆ ಬರಲು ಶುರು ಮಾಡಿದ. ಗಂಗಮ್ಮಳಿಗೆ ನಂಬಿಸಿ ಆಕೆಯೊಂದಿಗಿನ ಸ್ನೇಹ ಸಲುಗೆಯಿಂದ ಕಾಮಕ್ಕೆ ತಿರುಗಿ ಗಂಗಮ್ಮಳೊಂದಿಗೆ ಸಂಸಾರ ನಡೆಸಲು ಶುರು ಮಾಡಿದ್ದ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಗಂಗಮ್ಮ ಮನೆಗೆ ಬರುತ್ತಿದ್ದ ಟೆಕ್ಕಿ ಲಾಕ್ಡೌನ್ನಿಂದ ಉಂಟಾದ ವರ್ಕ್ ಫ್ರಂ ಹೋಂ ವಿಧಾನ ಜಾರಿಯಾದ್ದರಿಂದ ಟೆಕ್ಕಿ ತನ್ನ ಲಗೇಜ್ನೆಲ್ಲ ಹೊತ್ತುಕೊಂಡು ಬಂದು ಗಂಗಮ್ಮ ಮನೆಯಲ್ಲಿ ಜಾಂಡ ಹೂಡಿದ್ದ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು
ಇವರಿಬ್ಬರ ಸಂಬಂಧದಿಂದ ಗಂಗಮ್ಮ ಎರಡು ಭಾರಿ ಗರ್ಭಿಣಿಯಾದರೂ ಅದನ್ನು ತೆಗೆಸಿ ಸಂಸಾರ ಮುಂದುವರೆಸಿದ್ದ. ಈ ನಡುವೆ ಗಂಗಮ್ಮಳ 6 ವರ್ಷದ ಮಗುವಿಗೆ ಆಗಾಗ ಬೀರಪ್ಪ ಹೊಡೆಯುತ್ತಿದ್ದ. ಈ ವಿಷಯವಾಗಿ ಮನೆಯಲ್ಲಿ ಜಗಳ ಸಹ ಆಗಿತ್ತು. ಕಳೆದ 3 ತಿಂಗಳ ಹಿಂದೆ ಮಗುವಿನೊಂದಿಗೆ ಮನೆ ತೊರೆದು ಹೋದ ಬೀರಪ್ಪ ಈವರೆಗೂ ಪತ್ತೆಯಾಗಿಲ್ಲ. ಇನ್ನೂ ಈ ಕುರಿತು ನೆಲಮಂಗಲ ನಗರ ಠಾಣೆಗೆ ದೂರು ನೀಡಲು ಹೋದರೆ, ಅವರದ್ದು ಬೆಳಗಾವಿಯ ಬೈಲಹೊಂಗಲ ಅಲ್ವ ಅಲ್ಲೇ ಹೋಗಿ ಕಂಪ್ಲೆಂಟ್ ಕೊಡಿ ಎಂದಿದ್ದರು. ಆದರೆ ಗಂಗಮ್ಮ ಬೈಲಹೊಂಗಲಕ್ಕೆ ಹೋಗಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಿಲ್ಲ.
ಒಟ್ಟಾರೆ, ಬದುಕಿಗೆ ಆಸರೆಯಾಗುತ್ತಾನೆ ಎಂದು ಮನೆ ಮನದಲ್ಲಿ ಜಾಗ ಕೊಟ್ಟವಳ ಬದುಕಿಗೆ ಕೊಳ್ಳಿ ಇಟ್ಟು ಟೆಕ್ಕಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದ್ದು, ತನ್ನ ಮಗು ಹಾಗೂ ಗಂಡನನ್ನು ಹುಡುಕಿಕೊಡಿ ಎಂದು ಗಂಗಮ್ಮ ಅಂಗಲಾಚುತ್ತಿದ್ದಾಳೆ.
Published by:
Sushma Chakre
First published:
March 3, 2021, 10:46 AM IST