news18-kannada Updated:February 23, 2021, 9:04 AM IST
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ದೆಹಲಿ ಗ್ಯಾಂಗ್
ಬೆಂಗಳೂರು (ಫೆ. 23): ದೆಹಲಿಯಿಂದ ನಗರಕ್ಕೆ ಬಂದು ಸರಗಳ್ಳತನ ಮಾಡುತ್ತಿದ್ದ 6 ಜನ ಖತರ್ನಾಕ್ ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಬಂಧನ ಮಾಡಿದ್ದಾರೆ. ದೆಹಲಿ ಗ್ಯಾಂಗ್ ನ ಸುರೇಶ್ ಕುಮಾರ್, ಹಸೀನ್ ಖಾನ್, ಇರ್ಷಾದ್, ಸಲೀಂ, ಅಪ್ರೋಸ್ ಹಾಗೂ ಹ್ಯಾರೀಸ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ. ದೆಹಲಿಯಲ್ಲಿಯೂ ಸುಮಾರು 26 ಕಡೆ ಸರಗಳ್ಳತನ ಮಾಡಿರುವುದು ಸಹ ತನಿಖೆಯಿಂದ ಪತ್ತೆಯಾಗಿದೆ.
ಫೆ. 16ರಂದು ಆರೋಪಿಗಳು ಯಲಹಂಕ, ಸಂಪಿಗೆಹಳ್ಳಿ, ಚಿಕ್ಕ ಜಾಲ, ಬಾಗಲೂರು, ಅಮೃತಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಫೆ. 16ರಂದು ಒಟ್ಟು 8 ಕಡೆ ಸರಗಳ್ಳತನ ಮಾಡಿದ್ದರು. ಒಂದೇ ದಿನಗಳಲ್ಲಿ ಇಷ್ಟು ಕಡೆ ಸರಗಳ್ಳತನ ಆಗಿದ್ದರಿಂದ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದಯಕೊಂಡ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕೂಡಲೇ ವಿಶೇಷ ತಂಡವನ್ನು ರಚನೆ ಮಾಡಿದರು. ಎಸಿಪಿ ಸಂಪಿಗೆಹಳ್ಳಿ ನೇತೃತ್ವದಲ್ಲಿ ತಂಡ ರಚಿಸಿ, ಎಂಟು ಕಡೆಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಮೊದಲು ಕಲೆಕ್ಟ್ ಮಾಡಿದ್ದಾರೆ. ಈ ವೇಳೆ ಒಂದೇ ಗ್ಯಾಂಗ್ ಎಂಟು ಕಡೆಗಳಲ್ಲಿ ಕಳ್ಳತನ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ.
ಕೂಡಲೇ ಸಿಸಿ ಕ್ಯಾಮರಾ ವಿಶುಯಲ್ ನೋಡುತ್ತಾ, ಫಾಲೋ ಮಾಡಿಕೊಂಡು ಹೋದ ಪೊಲೀಸರಿಗೆ ಆರೋಪಿಗಳು ದೇವನಹಳ್ಳಿ ಸಮೀಪ ಇರುವ ವಿಲ್ಲಾದಲ್ಲಿ ಇರುವುದರ ಬಗ್ಗೆ ಮಾಹಿತಿ ಗೊತ್ತಾದ ತಕ್ಷಣವೇ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ನಂತರ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆ ಮಾಡಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು 6 ಆರೋಪಿಗಳನ್ನು ಪೊಲೀಸರು ಕರೆತಂದು ವಿಚಾರಣೆ ಮಾಡಿದಾಗ ಸರಗಳ್ಳತನ ಬಗ್ಗೆ ಬಾಯಿ ಬಿಟ್ಟಿದ್ದು ಲಕ್ಷಾಂತರ ರೂ. ಮೌಲ್ಯದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Gelatin Blast - ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟ: 6 ಮಂದಿ ಸಾವು
ಅಷ್ಟೇ ಅಲ್ಲದೆ ತೀವ್ರ ವಿಚಾರಣೆ ಮಾಡಿದಾಗ ಫ್ಲೈಟ್ ನಲ್ಲಿ ಬಂದು ಸರಗಳ್ಳತನ ಮಾಡಿ ನಂತರ ವಿಮಾನದಲ್ಲಿಯೇ ದೆಹಲಿಗೆ ಹೋಗುತ್ತಿದ್ದುದಾಗಿ ಬಾಯಿ ಬಿಟ್ಟಿದ್ದಾರೆ. ಆದರೆ, ದೆಹಲಿಯಲ್ಲಿ ಸುಮಾರು 26 ಪ್ರಕರಣಗಳು ಆರೋಪಿಗಳ ಮೇಲೆ ಇದ್ದ ಕಾರಣಕ್ಕೆ ಈ ಬಾರಿ ಸರಗಳ್ಳತನ ಮಾಡಿ ದೆಹಲಿಗೆ ಹೋಗಲು ಆಗಿಲ್ಲ. ಹಾಗಾಗಿ ದೇವನಹಳ್ಳಿ ಸಮೀಪ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಸದ್ಯ ದೆಹಲಿ ಪೊಲೀಸರು ಸಹ ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಪಡೆದು ವಿಚಾರಣೆ ಮಾಡಲು ರೆಡಿ ಇದ್ದು, ಮತ್ತಷ್ಟು ಕಡೆಗಳಲ್ಲಿ ಅದೇ ತರ ಸರಗಳ್ಳತನ ಮಾಡಿರಬಹುದು ಎಂದು ಈಶಾನ್ಯ ವಿಭಾಗದ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.
ಇನ್ನು, ಆರೋಪಿಗಳ ಕೈಯಿಂದ ಕೆಲ ಚಿನ್ನಾಭರಣ ರಿಕವರಿ ಆಗಬೇಕಿದೆ ಅಂತ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ ಸಹ ಹೇಳಿದ್ದು, ಆದಷ್ಟು ಬೇಗ ದೋಚಿದ ಮಾಲು ಎಲ್ಲಿದೆ ಅಂತ ಬಾಯಿ ಬಿಡಿಸಲು ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದೆಹಲಿ ಪೊಲೀಸರು ಬಿಟ್ಟರೆ ಕಸ್ಟಡಿಗೆ ಪಡೆಯಲು ರೆಡಿಯಾಗಿದ್ದಾರೆ.
Published by:
Sushma Chakre
First published:
February 23, 2021, 9:03 AM IST