HOME » NEWS » State » BANGALORE CRIME BENGALURU POLICE ARRESTED CAR DRIVER WHO HITS THE FOOD DELIVERY BOYS BIKE AND KILL THEM KMTV SCT

Bangalore Crime: ಬೆಂಗಳೂರಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಂದ ಕಾರು ಚಾಲಕ ಕೊನೆಗೂ ಸಿಕ್ಕಿಬಿದ್ದ!

Bengaluru Accident: ಮಂಗಳವಾರ ರಾತ್ರಿ ಎಚ್ಎಂಟಿ ಕಾರ್ಖಾನೆ ಲಿಂಕ್ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣನಾದ ಕಾರು ಚಾಲಕ ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

news18-kannada
Updated:February 26, 2021, 8:00 AM IST
Bangalore Crime: ಬೆಂಗಳೂರಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಂದ ಕಾರು ಚಾಲಕ ಕೊನೆಗೂ ಸಿಕ್ಕಿಬಿದ್ದ!
ಬೆಂಗಳೂರಿನಲ್ಲಿ ಅಪಘಾತವೆಸಗಿದ ಕಾರು
  • Share this:
ಬೆಂಗಳೂರು (ಫೆ. 26): ಸಿಲಿಕಾನ್ ಸಿಟಿಯ ಜನರ ಎದೆ ಝಲ್ ಎನ್ನುವಂತೆ ಮಾಡಿತ್ತು ಹಿಟ್ ಆಂಡ್ ರನ್ ಕೇಸ್. ಆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಹನ ಸವಾರರ ಕೈ ನಡುಗುವಂತೆ ಮಾಡಿತ್ತು. ಈ ಭೀಕರ ಅಪಘಾತ ಎಸಗಿ ಎಸ್ಕೇಪ್ ಆಗಿದ್ದ ಕಾರು ಚಾಲಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು, ಈ ಅಪಘಾತದ ಬಗ್ಗೆ ಚಾಲಕ ಬಹಳ ಸೊಗಸಾಗಿ ಕಥೆ ಕಟ್ಟಿದ್ದ. ಆದರೆ, ಪೊಲೀಸರು ಚಾಕಚಕ್ಯತೆಯಿಂದ ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ರಾತ್ರಿ ಎಚ್ಎಂಟಿ ಕಾರ್ಖಾನೆ ಲಿಂಕ್ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣನಾದ ಕಾರು ಚಾಲಕ ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾದನಾಯಕನಹಳ್ಳಿ ನಿವಾಸಿ ಭರತ್ ಎಂಬಾತ ಅಪಘಾತ ಎಸಗಿದ್ದು ಯಶವಂತಪುರ ಸಂಚಾರಿ ಪೊಲೀಸರು ಆತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಭರತ್ ಟ್ರಾವೆಲ್ ನಡೆಸುತ್ತಿದ್ದು, ಮಂಗಳವಾರ ರಾತ್ರಿ 1.20ರಲ್ಲಿ ಹೊಟೇಲ್ ನಲ್ಲಿ ಊಟ ತೆಗೆದುಕೊಂಡು ಮನೆಗೆ ಹೋಗುತ್ತಿದ್ದನಂತೆ. ಜಾಲಹಳ್ಳಿ ವಿಲೇಜ್ ಕಡೆಯಿಂದ ತುಮಕೂರು ರಸ್ತೆ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ನಿಧಾನವಾಗಿ ಮೂವ್ ಆಗುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಶ್ರೀಕಾಂತ್ ಮತ್ತು ಗೌತಮ್ ಇಬ್ಬರು ಸವಾರರೂ ಮೃತಪಟ್ಟಿದ್ದರು. ಅಪಘಾತವೆಸಗಿ ಕಾರು ನಿಲ್ಲಿಸದೆ ಹೊರಟಿದ್ದ ಚಾಲಕ ಭರತ್ ಬಳಿಕ ಮಾದಾವರ ಬಳಿ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಫೂಡ್ ಡೆಲಿವರಿ ಹುಡುಗರ ಸಾವು

ಈ ಭೀಕರ ಅಪಘಾತದ ಬಗ್ಗೆ ಯಶವಂತಪುರ ಪೊಲೀಸರು ದೂರು ದಾಖಲಿಸಿಕೊಂಡು ಕಾರು ಮತ್ತು ಚಾಲಕನ ಪತ್ತೆಗೆ ಮುಂದಾಗಿದ್ದರು. ಲಿಂಕ್ ರಸ್ತೆಯ ಅಪಾರ್ಟ್​ಮೆಂಟ್ ಸಿಸಿಟಿವಿ ಪರಿಶೀಲನೆ ನಡೆಸಿ ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಹಾಗೂ ರಸ್ತೆಯ ಇತರ ಸಿಸಿಟಿವಿಗಳನ್ನ ಪತ್ತೆ ಹಚ್ಚಿದ್ದು ಕಾರು ಎಲ್ಲಿಂದ ಬಂದಿತ್ತು, ಯಾವ ಮಾರ್ಗದಲ್ಲಿ ಸಾಗಿದೆ ಅನ್ನೋದನ್ನ ಸಂಪೂರ್ಣ ಪರಿಶೀಲನೆ ನಡೆಸಿದ್ದರು. ಅದರೆ ಅಷ್ಟಾಗಿ ಸಾಕ್ಷಿ ದೊರೆಯದೆ ಇದ್ದಾಗ ಅಪಘಾತ ಸ್ಥಳದಲ್ಲಿದ್ದ ಕಾರಿನ ನಂಬರ್ ಫ್ಲೇಟ್ ನ ಚೂರು ಹಿಡಿದು ಪೊಲೀಸರು ಕಾರು ಪತ್ತೆ ಹಚ್ಚಲು ಮುಂದಾಗಿದ್ದರು. ಕಾರಿನ ನಂಬರ್ ಫ್ಲೇಟ್ ಚೂರಿನೊಂದಿಗೆ ಪೊಲೀಸರು ಜೆಸಿ ನಗರದ ಹಲವು ಅಂಗಡಿಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ 15  ಕಾರುಗಳಿಗೆ ಈ ರೀತಿಯ ನಂಬರ್ ಫ್ಲೇಟ್ ಕೊಟ್ಟಿರುವುದು ಗೊತ್ತಾಗಿದೆ. 15 ಕಾರುಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಚೇವೆರಾ ಕಾರು ಮತ್ತು ಭರತ್ ಬಗ್ಗೆ ಮಾಹಿತಿ ಸಿಕ್ಕಿತ್ತು.

ಯಶವಂತಪುರ ಪೊಲೀಸರು ಭರತ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಗಾಬರಿಯಾದ ಭರತ್ ಮದುವೆ ಕಾರ್ಯಕ್ರಮಕ್ಕಾಗಿ ಕಾರನ್ನು ಮಂಡ್ಯದ ತನ್ನ ಸ್ನೇಹಿತನಿಗೆ ನೀಡಿದ್ದು, ಅವನೇ ಅಪಘಾತ ಎಸಗಿರಬೇಕು ಎಂದು ಬಾಯಿಬಿಟ್ಟಿದ್ದ. ಪೊಲೀಸರು ಕೂಡಲೇ ಮಂಡ್ಯಕ್ಕೆ ದೌಡಾಯಿಸಿ ಭರತ್​ನ ಸ್ನೇಹಿತನನನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದರು. ಭರತ್ ಮತ್ತು ಆತನ ಸ್ನೇಹಿತ ಮುಖಾಮುಖಿ ವಿಚಾರಣೆ ಮಾಡಿದಾಗ ತಾನೇ ಅಪಘಾತ ಎಸಗಿದ್ದಾಗಿ ಭರತ್  ಅಸಲಿ ಸತ್ಯ ಹೊರ ಹಾಕಿದ್ದಾನೆ.
ವೇಗವಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಇಬ್ಬರ ಸಾವಿಗೆ ಕಾರಣನಾದ ಭರತ್ ವಿರುದ್ಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಎಸಗಿದ ಕಾರನ್ನು ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
Published by: Sushma Chakre
First published: February 26, 2021, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories