news18-kannada Updated:January 18, 2021, 1:37 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಜ. 18): ಇಷ್ಟು ದಿನ ಎಟಿಎಂ ಸ್ಕೀಮಿಂಗ್ ಮಾಡೋದು, ಪಿನ್ ಕದಿಯೋದು, ಎಟಿಎಂ ಯಂತ್ರ ಒಡೆದು ಹಣ ದೋಚುವ ಗ್ಯಾಂಗ್ಗಳನ್ನು ನೋಡಿದ್ದೆವು. ಇದೀಗ ಸದ್ದೇ ಇಲ್ಲದೆ ಸೈಲೆಂಟಾಗಿ ಹಣ ಲೂಟಿ ಮಾಡುವ ಗ್ಯಾಂಗ್ವೊಂದು ಪತ್ತೆಯಾಗಿದೆ. ಅಂದಹಾಗೆ, ಬೆಂಗಳೂರಿನಲ್ಲಿ ಓದುತ್ತಿರುವ ಯುವತಿಯೇ ಈ ಗ್ಯಾಂಗ್ನ ಲೀಡರ್. ಎಟಿಎಂ ಒಡೆದಿಲ್ಲ, ಪಾಸ್ ವರ್ಡ್ ಕಾಪಿ ಮಾಡಿಲ್ಲ, ಸ್ಕೀಮಿಂಗ್ ಅಂತೂ ಮಾಡೇ ಇಲ್ಲ. ಆದರೂ ವಿದೇಶೀ ಯುವತಿಯೊಬ್ಬಳು ಕಂತೆ ಕಂತೆ ಹಣವನ್ನು ಎಟಿಎಂನಿಂದ ಡ್ರಾ ಮಾಡಿದ್ದಾಳೆ. ಕೊಲಂಬಿಯಾ ಮೂಲದ ಯುವತಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೇ ನೆಲೆಸಿದ್ದಳು. ವಿದ್ಯಾಭ್ಯಾಸದ ನಡುವೆ ಶಾರ್ಟ್ಕಟ್ನಲ್ಲಿ ಹಣ ಮಾಡಲು ಮುಂದಾದ ಆಕೆ ಎಟಿಎಂನಲ್ಲಿ ಹಣ ದೋಚಲು ಹೊಸ ಆವಿಷ್ಕಾರವನ್ನೇ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.
ಜನವರಿ 10ರ ಮಧ್ಯಾಹ್ನ ನಗರದ ಶಿವರಾಮ ಕಾರಂತ ನಗರದ ಎಸ್ ಬಿ ಐ ಬ್ಯಾಂಕ್ ಎಟಿಎಂಗೆ ತೆರಳಿದ ಕೊಲಂಬಿಯಾ ಮೂಲದ ಯುವತಿ ಎಟಿಎಂ ಯಂತ್ರವನ್ನೆ ಲಾಕ್ ಮಾಡಿಕೊಂಡು ತನಗೆ ಬೇಕಾದಷ್ಟು ಹಣ ಡ್ರಾ ಮಾಡಿದ್ದಾಳೆ. ಹಣ ಎಗರಿಸುವ ಸಲುವಾಗಿ ತಾವೇ ಡೆವಲಪ್ ಮಾಡಿದ್ದ ಡಿವೈಸ್ ಒಂದನ್ನು ಎಟಿಎಂ ಯಂತ್ರಕ್ಕೆ ಅಳವಡಿಸಿದ್ದ ಈಕೆ ಬ್ಯಾಂಕ್ನವರು ಅಳವಡಿಸಿದ್ದ ಡಿವೈಸ್ ಅನ್ನು ಡಿಸ್ಕನೆಕ್ಟ್ ಮಾಡಿದ್ದಳು. ಆಗ ಇಡೀ ಎಟಿಎಂ ಯಂತ್ರ ಯುವತಿಯ ಕಂಟ್ರೋಲ್ ಗೆ ಸಿಕ್ಕಿತ್ತು. ಈ ವೇಳೆ ಆಕೆಯ ಗ್ಯಾಂಗ್ ನ ಇತರ ಆಪರೇಟರ್ಗಳು ಡಿವೈಸ್ ಆಪರೇಟ್ ಮಾಡಿ ಆ ಯುವತಿ ಮೊಬೈಲ್ಗೆ ಪಾಸ್ವರ್ಡ್ ಕಳುಹಿಸಿದ್ದರು. ತನ್ನ ಮೊಬೈಲ್ ಪೋನ್ ಗೆ ಬರ್ತಿದ್ದ ಪಾಸ್ವರ್ಡ್ಗಳನ್ನು ಬಳಸಿಕೊಂಡು ಆಕೆ ಸುಮಾರು 17 ಲಕ್ಷ ರೂ. ಹಣ ಡ್ರಾ ಮಾಡಿದ್ದಾಳೆ.
ಇದನ್ನೂ ಓದಿ: ಬೆಳಗಾವಿ ನಮ್ಮದು ಎಂದ ಉದ್ಧವ್ ಠಾಕ್ರೆ; ಉದ್ಧಟತನ ಬೇಡ ಎಂದು ಎಚ್ಚರಿಸಿದ ಸಿಎಂ ಯಡಿಯೂರಪ್ಪ
ಆರೋಪಿಗಳು ಅಳವಡಿಸಿದ ಪ್ರತ್ಯೇಕ ಡಿವೈಸ್ ನಲ್ಲಿ ಸಾಫ್ಟ್ವೇರ್ ಮೂಲಕ 1,000 ಹಣ ಡ್ರಾ ಮಾಡಲು ಮುಂದಾದರೆ ಒಂದೂವರೆ ಲಕ್ಷ ಹಣ ಎಟಿಎಂನಿಂದ ಡ್ರಾ ಆಗುತ್ತಿತ್ತಂತೆ. ಅದೇ ರೀತಿ ಯುವತಿ ಸಹ 1,500 ರೂ. ಎಂಟ್ರಿ ಮಾಡಿ ಒಂದು ಲಕ್ಷ ಹಣ ಹೊರ ತೆಗೆದಿದ್ದಳಂತೆ. ಹೀಗೆ ಬರೋಬ್ಬರಿ 17 ಲಕ್ಷ ಡ್ರಾ ಮಾಡಿದ ಆಕೆ ಎಟಿಎಂನಿಂದ ಕಾಲ್ಕಿತ್ತಿದ್ದಳು.
ಜನವರಿ 10ರ ರಾತ್ರಿ 10 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದಾರೆ. ಈ ವೇಳೆ ಆತ 1,500 ರೂ. ಡ್ರಾ ಮಾಡಿದಾಗ 1 ಲಕ್ಷ ರೂ. ಹಣ ಎಟಿಎಂನಿಂದ ಹೊರ ಬಂದಿದೆ. ಈ ವೇಳೆ ಆಶ್ಚರ್ಯಗೊಂಡ ಆತ ಕೂಡಲೇ ಎಟಿಎಂನಲ್ಲಿದ್ದ ಬ್ಯಾಂಕ್ ಮ್ಯಾನೇಜರ್ ನಂಬರ್ ಪೋನ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮ್ಯಾನೇಜರ್ ಮತ್ತು ತಂತ್ರಜ್ಞರೊಬ್ಬರು ಎಟಿಎಂಗೆ ಬಂದು ತಮ್ಮ ಕಾರ್ಡ್ ಮೂಲಕ ಹಣ ಡ್ರಾ ಮಾಡಿದ್ದು, ಈ ವೇಳೆ ಸರಿಯಾಗಿ ಹಣ ಡ್ರಾ ಆಗಿದೆ.
ಈ ಬಗ್ಗೆ ಬೆಳಗ್ಗೆ ಪರಿಶೀಲನೆ ನಡೆಸೋಣ ಎಂದು ಎಟಿಎಂಗೆ ಬೀಗ ಹಾಕಿ ವಾಪಾಸ್ ತೆರಳಿದ್ದರಂತೆ. ಪುನಃ ಬೆಳಗ್ಗೆ ಟೆಕ್ನಿಕಲ್ ತಂಡದ ಜೊತೆ ಬಂದು ಪರಿಶೀಲನೆ ನಡೆಸಿದಾಗ ಡಿವೈಸ್ ಅಳವಡಿಕೆಯ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆ ವಿದೇಶಿ ಮಹಿಳೆಯ ಕೈವಾಡ ಬೆಳಕಿಗೆ ಬಂದಿದೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಸಂಪಿಗಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಸಿಸಿಟಿವಿಗಳನ್ನ ಚೆಕ್ ಮಾಡಿ ಮಹಿಳೆಯನ್ನ ಪತ್ತೆ ಹಚ್ಚಿದ್ದಾರೆ. ಮಹಿಳೆ ಬಳಿಯಿದ್ದ 17 ಲಕ್ಷ ಹಣ ಜಪ್ತಿ ಮಾಡಿ ಆಕೆಯ ಇನ್ನುಳಿದ ಸಹಚರರಿಗೆ ಬಲೆ ಬೀಸಿದ್ದಾರೆ.
Published by:
Sushma Chakre
First published:
January 18, 2021, 1:37 PM IST