ಸಿನಿಮೀಯ ರೀತಿಯಲ್ಲಿ ನಡೆದಿತ್ತು ಬೆಂಗಳೂರಿನ ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ!

Manish Shetty: ನಿನ್ನೆ ರಾತ್ರಿ 9.05ಕ್ಕೆ ಕಾರು ನಿಲ್ಲಿಸಿ ಡ್ಯುಯೆಟ್ ಬಾರ್​ನ ಒಳಗೆ ಹೋಗಿದ್ದ ಮನೀಶ್​ ಶೆಟ್ಟಿ ಬಾರ್​ನ ಮೆಟ್ಟಿಲು ಹತ್ತುತ್ತಿದ್ದಂತೆ ದುಷ್ಕರ್ಮಿಗಳು ಹಿಂಬದಿಯಿಂದ ಬೆನ್ನಿಗೆ ಶೂಟ್ ಮಾಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಅ. 16): ಅಂಡರ್​ವರ್ಲ್ಡ್​ ಡಾನ್​ಗಳೊಂದಿಗೆ ನಂಟು ಹೊಂದಿದ್ದ ಬೆಂಗಳೂರಿನ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಗುರುವಾರ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದ ತನಿಖೆಗಾಗಿ 9 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ನಿನ್ನೆ ರಾತ್ರಿ ನಡೆದ ಕೊಲೆ ಹೇಗೆ ನಡೆಯಿತು? ಅಷ್ಟಕ್ಕೂ ಮನೀಶ್ ಶೆಟ್ಟಿ ಬ್ರಿಗೇಡ್ ರಸ್ತೆಗೆ ಬಂದಿದ್ದು ಏಕೆ? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...

ಸಿನಿಮೀಯ ಶೈಲಿಯಲ್ಲಿ ನಿನ್ನೆ ರಾತ್ರಿ ಮನೀಶ್ ಶೆಟ್ಟಿಯ ಹತ್ಯೆ ಮಾಡಲಾಗಿತ್ತು. ಗುರುವಾರ ರಾತ್ರಿ ಭೂಪಸಂಧ್ರದ ಮನೆಯಿಂದ ಫಾರ್ಚುನರ್ ಕಾರಿನಲ್ಲಿ ಒಬ್ಬನೇ ಹೊರಟಿದ್ದ ಮನೀಶ್ ಶೆಟ್ಟಿಯನ್ನು ಆತನ ಮನೆಯಿಂದಲೇ ಹಂತಕರು ಫಾಲೋ ಮಾಡಿಕೊಂಡು ಬಂದಿದ್ದರು. ಸಿಂಗಲ್ ಬ್ಯಾರಲ್ ಗನ್, ಚಾಕು ಮತ್ತು ಕಂಟ್ರಿಮೇಡ್ ಪಿಸ್ತೂಲು ಇಟ್ಟುಕೊಂಡಿದ್ದ ಹಂತಕರು ಹತ್ಯೆಗೆ ಸಂಚು ರೂಪಿಸಿದ್ದರು. ನಿನ್ನೆ ರಾತ್ರಿ 9.05ಕ್ಕೆ ಕಾರು ನಿಲ್ಲಿಸಿ ಡ್ಯುಯೆಟ್ ಬಾರ್​ನ ಒಳಗೆ ಹೋಗಿದ್ದ ಮನೀಶ್​ ಶೆಟ್ಟಿ ಬಾರ್​ನ ಮೆಟ್ಟಿಲು ಹತ್ತುತ್ತಿದ್ದಂತೆ ದುಷ್ಕರ್ಮಿಗಳು ಹಿಂಬದಿಯಿಂದ ಬೆನ್ನಿಗೆ ಶೂಟ್ ಮಾಡಿದ್ದರು.

ಗುಂಡೇಟಿನಿಂದ ಮನೀಶ್ ಕೂಗಾಡಿಕೊಂಡು ಹಿಂದೆ ತಿರುಗುತ್ತಿದ್ದಂತೆ ಹಂತಕರು ಮನೀಶ್​ನ ಎಡ ಕಿವಿಯ ಹತ್ತಿರ ಚಾಕುವಿನಿಂದ ಇರಿದಿದ್ದರು. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಬಿದ್ದಿದ್ದ ಮನೀಶ್​ನ ಬಳಿ ಜನರು ಓಡಿಬರುತ್ತಿದ್ದಂತೆ ಸುಜುಕಿ ಬೈಕ್ ಮತ್ತು ಆಯುಧಗಳನ್ನು ಎತ್ತಿಕೊಂಡು ಹಂತಕರು ಪರಾರಿಯಾಗಿದ್ದರು. ಮುಂದಿನ ದಾರಿ ಕಿರಿದಾದ ಹಿನ್ನೆಲೆಯಲ್ಲಿ ಬೈಕ್ ಮತ್ತು ಆಯುಧಗಳನ್ನು ಅಲ್ಲೇ ಬಿಸಾಡಿ ಪರಾರಿಯಾಗಿದ್ದರು. ಮೂವರು ಯುವಕರಿಂದ ಈ ಶೂಟೌಟ್ ನಡೆದಿರೋ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಬನ್ನಂಜೆ ರಾಜನ ಆಪ್ತ ಮನೀಶ್​ ಶೆಟ್ಟಿ ಶೂಟೌಟ್; ಹಂತಕರ ಪತ್ತೆಗೆ 9 ವಿಶೇಷ ತಂಡ ರಚನೆ

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು ಮನೀಶ್ ಶೆಟ್ಟಿಯ ಫಾರ್ಚುನರ್ ಕಾರಿನಲ್ಲೇ ಆತನನ್ನು ಮಲ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಮನೀಶ್ ಶೆಟ್ಟಿ ಸಾವನ್ನಪ್ಪಿದ್ದ. ಸದ್ಯ ಸ್ಥಳದಲ್ಲಿನ 6 ಸಿಸಿಟಿವಿ ಡಿವಿಆರ್ ಪರಿಶೀಲನೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ನಂಟಿತ್ತು. ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ. ಅಂಡರ್​ವರ್ಲ್ಡ್ ಡಾನ್​ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಅವರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.

2010ರ ಜೂನ್ 25ರಂದು ಕಾಸರಗೋಡಿನ ಬೇವಿಂಜೆಯ ಕಂಟ್ರಾಕ್ಟರ್ ಮಹಮ್ಮದ್ ಕುಂಜ್ಞಿ ಎಂಬುವವರ ಮನೆಗೆ ಮನೀಶ್ ಶೆಟ್ಟಿ ಗುಂಡು ಹಾರಿಸಿದ್ದ. ದಾವೂದ್ ಇಬ್ರಾಹಿಂ ಈ ಮಹಮ್ಮದ್ ಕುಂಜ್ಞಿಗೆ 50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳುಹಿಸಿದ್ದ. ಅದನ್ನು ಕುಂಜ್ಞಿ ಮನೆಯಲ್ಲಿ ಇಟ್ಟಿದ್ದಾನೆ ಎಂಬ ಶಂಕೆಯಿಂದ ಮನೀಶ್ ಶೆಟ್ಟಿ ಗುಂಡು ಹಾರಿಸಿದ್ದ. ಈ ಆರೋಪದ ಮೇಲೆ ಕಾಸರಗೋಡು ಪೊಲೀಸರು ಮನೀಶ್ ಶೆಟ್ಟಿಯನ್ನು ಬಂಧಿಸಿದ್ದರು. ಮನೀಶ್ ಶೆಟ್ಟಿಯ ಮೊದಲ ಗಾಡ್ ಫಾದರ್ ಮುತ್ತಪ್ಪ ರೈ. ಆ ಬಳಿಕ ಬನ್ನಂಜೆ ರಾಜನ ಗುಂಪು ಸೇರಿದ್ದ ಮನೀಶ್ ಶೆಟ್ಟಿ ನಂತರ ತಾನೇ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದ.
Published by:Sushma Chakre
First published: