ಪತ್ನಿಗೆ ಹೊಡೆದ ಏಟು ಮಗುವಿಗೆ ಬಿತ್ತು!; ಗಂಡ- ಹೆಂಡತಿ ಜಗಳಕ್ಕೆ 3 ತಿಂಗಳ ಕಂದಮ್ಮ ಬಲಿ

Crime News: ಕೋಪದಿಂದ ಹೆಂಡತಿಗೆ ಹೊಡೆಯುವ ಭರದಲ್ಲಿ ಆಯತಪ್ಪಿ ಪತ್ನಿಗೆ ಬೀಳಬೇಕಾದ ಏಟು ತೊಟ್ಟಿಲಿನಲ್ಲಿ‌ ನಿದ್ರಿಸುತ್ತಿದ್ದ ಮಗುವಿನ ತಲೆಗೆ ಬಿದ್ದಿದೆ. ಮಗು ಕೆಲ ಹೊತ್ತು ಕಿರುಚಾಡಿ ಪ್ರಜ್ಞಾಹೀನವಾಗಿದೆ.

news18-kannada
Updated:July 6, 2020, 8:12 AM IST
ಪತ್ನಿಗೆ ಹೊಡೆದ ಏಟು ಮಗುವಿಗೆ ಬಿತ್ತು!; ಗಂಡ- ಹೆಂಡತಿ ಜಗಳಕ್ಕೆ 3 ತಿಂಗಳ ಕಂದಮ್ಮ ಬಲಿ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್ (ಜು. 6):  ಅವರಿಬ್ಬರೂ  ಪರಸ್ಪರ ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇವರ ಸಂಸಾರಕ್ಕೆ ಸಾಕ್ಷಿಯಾಗಿ ಮುದ್ದಾದ ಮಗು ಸಹ ಜನಿಸಿತ್ತು. ಗಂಡ-ಹೆಂಡತಿ ಜೊತೆಗೆ ಮುದ್ದಾದ ಹೆಣ್ಣು ಮಗುವಿನ ಸುಖಿ ಸಂಸಾರ ಅವರದಾಗಿತ್ತು. ಈ ನಡುವೆ ಮೊಬೈಲ್​ನಲ್ಲಿ ಹೆಚ್ಚು ಮಾತು ಮತ್ತು ಚಾಟಿಂಗ್ ಮಾಡ್ತಾಳೆ ಎನ್ನುವ ವಿಚಾರಕ್ಕೆ  ಪತಿ ಮತ್ತು ಪತ್ನಿ ನಡುವೆ ವಿರಸ ಮೂಡಿತ್ತು. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತಿನಂತೆ ಜಗಳ ಕೊನೆಯಾಗಿದ್ದರೆ ಪತಿ ಪತ್ನಿ ಜಗಳದಲ್ಲಿ ಕೂಸು ಬಲಿಯಾಗುತ್ತಿರಲಿಲ್ಲ.

ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಅಂತಾರೆ. ಆದರೆ, ಇಲ್ಲಿ ಗಂಡ ಉಣ್ಣದೆ  ಮಲಗಿದ್ದೇ ಹಾಲುಗಲ್ಲದ ಹಸುಗೂಸಿನ ಸಾವಿಗೆ ಕಾರಣವಾಗಿದೆ. ಇಂತಹದೊಂದು ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಶನಿವಾರ  ರಾತ್ರಿ ಜರುಗಿದೆ. ಮೂಲತಃ ತಮಿಳುನಾಡಿನವರಾದ ಶ್ರೀನಿವಾಸ್ ಮತ್ತು ಜನನಿ ದಂಪತಿ ಪ್ರೀತಿಸಿ ಮದುವೆಯಾದ ಬಳಿಕ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ಪಾಪಮ್ಮ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇವರಿಗೆ ಮೂರು ತಿಂಗಳ ಹಿಂದೆ ಹೆಣ್ಣು ಮಗು ಸಹ ಜನಿಸಿತ್ತು.

ವೃತ್ತಿಯಲ್ಲಿ ಟ್ರಾಕ್ಟರ್ ಡ್ರೈವರ್ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಮಡದಿ ಮತ್ತು ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಇತ್ತೀಚೆಗೆ ಪತ್ನಿಗೆ ಮೊಬೈಲ್​ನ ಗೀಳು ಅಂಟಿಕೊಂಡಿತ್ತು. ಮಗುವನ್ನು ಸಲಹುವುದು ಬಿಟ್ಟು ಯಾರೊಂದಿಗೋ  ಹೆಚ್ಚು ಮಾತನಾಡುವುದು, ಚಾಟಿಂಗ್ ಮಾಡುವುದರಲ್ಲಿ ಬಿಜಿಯಾಗಿದ್ದಳು. ಕೇಳಿದರೆ ತನ್ನ ತಂಗಿಯೊಂದಿಗೆ ಎನ್ನುತ್ತಿದ್ದಳು. ಆದರೆ, ಪತ್ನಿಯ ಉತ್ತರಕ್ಕೆ ಸುಮ್ಮನಾಗದ ಶ್ರೀನಿವಾಸ್   ಗಲಾಟೆ ಮಾಡಿ ವಾರ್ನಿಂಗ್ ಸಹ ನೀಡಿದ್ದಾನೆ. ಜೊತೆಗೆ ಜಗಳ ತಾರಕ್ಕೇರಿ ಕಳೆದ ಮೂರು ದಿನಗಳಿಂದ ಊಟ ಮಾಡಿರಲಿಲ್ಲ.

ಇದನ್ನೂ ಓದಿ: ಕೊರೋನಾ ರೋಗಿಯ ಶವವನ್ನು ಬಸ್​ಸ್ಟಾಂಡ್​ನಲ್ಲಿಟ್ಟ ಆಸ್ಪತ್ರೆ ಸಿಬ್ಬಂದಿ; ರಾಣೆಬೆನ್ನೂರಿನಲ್ಲೊಂದು ಅಮಾನವೀಯ ಘಟನೆ

ಶನಿವಾರ ರಾತ್ರಿ ಸಹ ಕೆಲಸ ಮುಗಿಸಿ ಮನೆಗೆ ಬಂದ ಶ್ರೀನಿವಾಸ್ ಊಟ ಮಾಡದೇ ನೇರವಾಗಿ ಕೊಠಡಿಗೆ ಹೋಗಿ ಮಲಗಿಕೊಂಡಿದ್ದಾನೆ.  ರಾತ್ರಿ ಸುಮಾರು 11 ಗಂಟೆಯಾದರೂ ಊಟ ಮಾಡದಿದ್ದಾಗ ಪತ್ನಿ ಜನನಿ ಪತಿ ಶ್ರೀನಿವಾಸ್​ಗೆ ಊಟ ಮಾಡಿ ಮಲಗುವಂತೆ ಒತ್ತಾಯಿಸುತ್ತಾಳೆ. ಇದರಿಂದ ಕೋಪಗೊಂಡ ಶ್ರೀನಿವಾಸ್ ಇಷ್ಟು ದಿನ ಇಲ್ಲದ ಪ್ರೀತಿ ಈಗ ಉಕ್ಕಿ ಬಂತಾ? ಎಂದು ಪತ್ನಿಗೆ ಜಾಡಿಸಿದ್ದಾನೆ. ಪತ್ನಿಗೆ ಜಾಡಿಸುವ ಭರದಲ್ಲಿ ಆಯತಪ್ಪಿ ಪತ್ನಿಗೆ ಬೀಳಬೇಕಾದ ಏಟು ತೊಟ್ಟಿಲಿನಲ್ಲಿ‌ ನಿದ್ರಿಸುತ್ತಿದ್ದ ಮಗುವಿನ ತಲೆಗೆ ಬಿದ್ದಿದೆ. ಮಗು ಕೆಲ ಹೊತ್ತು ಕಿರುಚಾಡಿ ಪ್ರಜ್ಞಾಹೀನವಾಗಿದೆ. ಆಗ ಭಯಗೊಂಡ ಜನನಿ ತನ್ನ ಪೋಷಕರಿಗೆ ವಿಚಾರ ತಿಳಿಸಿ, ಮಗುವನ್ನು ಕರೆದುಕೊಂಡು ತವರಿಗೆ ಹೊರಟು ಹೋಗಿದ್ದಳು. ಭಾನುವಾರ ಬೆಳಗ್ಗೆ ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ  ಮಗುವನ್ನು ತಪಾಸಣೆ ಮಾಡಿಸಿದಾಗ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೃತ ಮಗುವಿನ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ.

ಒಟ್ಟಿನಲ್ಲಿ, ಗಂಡ-ಹೆಂಡತಿ ಜಗಳದಲ್ಲಿ ಬಾಳಿ ಬದುಕಬೇಕಿದ್ದ ಹಸುಗೂಸು ತನ್ನದಲ್ಲದ ತಪ್ಪಿಗೆ ಬಲಿಯಾಗಿದೆ. ಸದ್ಯ ಪತ್ನಿಯ ದೂರಿನ ಅಧಾರದ ಮೇಲೆ ಆರೋಪಿ ಶ್ರೀನಿವಾಸನನ್ನು ಅರೆಸ್ಟ್ ಮಾಡಿರುವ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.(ವರದಿ : ಆದೂರು ಚಂದ್ರು)
Published by: Sushma Chakre
First published: July 6, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading