ಆನೇಕಲ್​ನಲ್ಲಿ ಎಟಿಎಂ ದೋಚಲು ಯತ್ನ; ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

Crime News: ಬಿಹಾರ ಮೂಲದ ಅಮಿತ್ ಮಿಶ್ರಾ ಬಂಧಿತ ಆರೋಪಿಯಾಗಿದ್ದು, ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ.

ಎಟಿಎಂ ದೋಚಲು ಹೋಗಿದ್ದ ಕಳ್ಳ

ಎಟಿಎಂ ದೋಚಲು ಹೋಗಿದ್ದ ಕಳ್ಳ

  • Share this:
ಆನೇಕಲ್ (ಜ. 13): ಎಟಿಎಂ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಮಿಶ್ರಾ ಬಂಧಿತ ಆರೋಪಿಯಾಗಿದ್ದು, ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಜಿಗಣಿ ಕೈಗಾರಿಕಾ ಪ್ರದೇಶದ ಫೈಕಸ್ ಪ್ಯಾಕ್ಸ್ ಎಂಬ ಕಂಪನಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಜಿಗಣಿ ಕುಂಟ್ಲರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದಾನೆ.

ಆದರೆ, ಅವನ ದುಡಿಮೆ ಜೀವನ‌ ನಡೆಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ, ದಿಢೀರ್ ಹಣ ಗಳಿಸಲು ಯೋಜನೆ ರೂಪಿಸಿದ್ದ ಆಸಾಮಿ ಎಟಿಎಂಗೆ ಕನ್ನ ಹಾಕಲು ನಿರ್ಧರಿಸಿದ್ದ. ಧೈರ್ಯ ಸಾಲದಿದ್ದಕ್ಕೆ ಕಂಠಪೂರ್ತಿ ಕುಡಿದು ಇಂದು ಮುಂಜಾನೆ ಜಿಗಣಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಹೆಚ್​ಡಿಎಫ್​ಸಿ ಎಟಿಎಂ ಹಾಗೂ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರಗಳಿಗೆ ನುಗ್ಗಿದ್ದ. ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಎರಡು ಎಟಿಎಂ ಯಂತ್ರಗಳನ್ನು ಒಡೆದು ಹಣ ದೋಚಲು ಇನ್ನಿಲ್ಲದ ಕಸರತ್ತು ನಡೆಸಿದ್ದಾನೆ.

ಇದನ್ನೂ ಓದಿ: ಇಂದು ಸಚಿವ ಸಂಪುಟ ವಿಸ್ತರಣೆ; ಹೆಚ್​. ನಾಗೇಶ್​ಗೆ ಕೊಕ್, ಮುನಿರತ್ನ ಕೈ ತಪ್ಪಿತಾ ಮಂತ್ರಿಗಿರಿ?

ಇನ್ನು, ಆರೋಪಿ ಎಟಿಎಂಗೆ ಕನ್ನ ಹಾಕುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದರೂ ಆರೋಪಿ ಮಾತ್ರ ಕುಡಿದ ಮತ್ತಿನಲ್ಲಿ ಎಟಿಎಂ ಯಂತ್ರವನ್ನು ಹೊಡೆದು ಹಣ ದೋಚಲು ಯತ್ನಿಸಿದ್ದ. ಸೆಕ್ಯೂರಿಟಿ ಗಾರ್ಡ್ ಸಹ ಇಲ್ಲದ ಎಟಿಎಂ ಬಳಿ ಶಬ್ದ ಕೇಳಿ ಗಸ್ತಿನಲ್ಲಿದ್ದ ಜಿಗಣಿ ಪೊಲೀಸರು ಅನುಮಾನಗೊಂಡು ಎಟಿಎಂ ಕೇಂದ್ರದತ್ತ ಧಾವಿಸಿದ್ದಾರೆ. ಅಲ್ಲಿಯೇ ಇದ್ದ ಆರೋಪಿ ಅಮಿತ್ ಮಿಶ್ರಾನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಾನು ಎಟಿಎಂ ಯಂತ್ರ ರಿಪೇರಿ ಮಾಡುತ್ತಿರುವುದಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದ.

ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ತಮ್ಮ ಸ್ಟೈಲ್​ನಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಿಗಣಿ ಕೈಗಾರಿಕಾ ಪ್ರದೇಶದ ಎಟಿಎಂಗಳಲ್ಲಿ ತಿಂಗಳ ಮೊದಲು ಮತ್ತು ಎರಡನೇ ವಾರದಲ್ಲಿ ಸಂಬಳ ಪಡೆಯುವವರಿಗಾಗಿ ಹೆಚ್ಚು ಹಣ ತುಂಬಿಸಿರುತ್ತಾರೆ ಎಂದು ಆರೋಪಿ ಹಣ ದೋಚಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದ.

ಆದರೆ, ಜಿಗಣಿ ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿಯ ಯತ್ನ ವಿಫಲವಾಗಿದೆ ಮತ್ತು ಎರಡು ಎಟಿಎಂಗಳಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಖದೀಮನ ಪಾಲಾಗುವುದು ತಪ್ಪಿದ್ದು, ಜಿಗಣಿ ಪೋಲಿಸರ ಮಿಂಚಿನ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

(ವರದಿ: ಆದೂರು ಚಂದ್ರು)
Published by:Sushma Chakre
First published: