ಬೆಂಗಳೂರು (ಡಿ. 30): ಇಂಗ್ಲೆಂಡ್ನಿಂದ ಬಂದ ಪ್ರಯಾಣಿಕರಿಂದ ಕರ್ನಾಟಕದಲ್ಲಿ ರೂಪಾಂತರಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಈಗಾಗಲೇ ಮೂರು ಹೊಸ ರೂಪದ (Mutant Coronavirus) ಕೊರೋನಾ ಕೇಸ್ಗಳು ಪತ್ತೆಯಾಗಿವೆ. ಹೀಗಾಗಿ, ಮತ್ತೊಮ್ಮೆ ಕೊರೋನಾ ಹರಡದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಬೊಮ್ಮನಹಳ್ಳಿ ವಲಯದಲ್ಲಿ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಅನ್ನೇ ಸೀಲ್ಡೌನ್ ಮಾಡಿದೆ. ಇಂಗ್ಲೆಂಡ್ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರು ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಅವರಿಗೆ ಮತ್ತು ಅವರ ಪಕ್ಕದ ಫ್ಲಾಟ್ನವರಿಗೂ (New Strain of Coronavirus) ರೂಪಾಂತರಿ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಆ ಅಪಾರ್ಟ್ಮೆಂಟನ್ನೇ ಸೀಲ್ಡೌನ್ ಮಾಡಿದೆ.
ಕೊರೋನಾ ಸೋಂಕಿಗೆ ತುತ್ತಾದ ಇಂಗ್ಲೆಂಡ್ನಿಂದ ಮರಳಿದ ಪ್ರಯಾಣಿಕರು ತಮ್ಮ ಫ್ಲಾಟ್ನಲ್ಲೇ ಕ್ವಾರಂಟೈನ್ ಆಗುತ್ತೇವೆ, ಸಾಂಸ್ಥಿಕ ಕ್ವಾರಂಟೈನ್ಗೆ ತೆರಳುವುದಿಲ್ಲ ಎಂದು ಹಠ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅಪಾರ್ಟ್ಮೆಂಟ್ನಲ್ಲೇ ಕ್ವಾರಂಟೈನ್ ಆಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮತ್ತೊಮ್ಮೆ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿದಾಗ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ನೆರೆಯವರಿಗೂ ಈ ಸೋಂಕು ತಗುಲಿದೆ.
ಇದನ್ನೂ ಓದಿ: ಶಿವಮೊಗ್ಗಕ್ಕೂ ಕಾಲಿಟ್ಟ ರೂಪಾಂತರಿ ಕೊರೋನಾ ವೈರಸ್; ಒಂದೇ ಕುಟುಂಬದ ನಾಲ್ವರಿಗೆ ಭಯಾನಕ ಸೋಂಕು ಪತ್ತೆ
ಆ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮತ್ತು ನಿಗಾದಲ್ಲಿರಿಸಲು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆ ಸೋಂಕಿತರಿಂದ ಅಪಾರ್ಟ್ಮೆಂಟ್ನ ಇತರೆ ಜನರಿಗೂ ಈ ಹೈಸ್ಪೀಡ್ ಕೊರೋನಾ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇಂಗ್ಲೆಂಡ್ನಿಂದ ಮರಳಿದ್ದ ತಾಯಿ ಮತ್ತು ಮಗು ರೂಪಾಂತರಿ ಕೊರೋನಾಗೆ ತುತ್ತಾಗಿದ್ದಾರೆ. ಅವರ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲಾಗುತ್ತಿದ್ದು, ಅವರಿಗೂ ಪರೀಕ್ಷೆ ನಡೆಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ