• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bangalore: ಆನೇಕಲ್​ನಲ್ಲಿ ಒಂದು ಕರಡಿ ಸೆರೆ, ಮತ್ತೊಂದು ಕರಡಿ ಪ್ರತ್ಯಕ್ಷ; ಜನರಲ್ಲಿ ಹೆಚ್ಚಿದ ಆತಂಕ

Bangalore: ಆನೇಕಲ್​ನಲ್ಲಿ ಒಂದು ಕರಡಿ ಸೆರೆ, ಮತ್ತೊಂದು ಕರಡಿ ಪ್ರತ್ಯಕ್ಷ; ಜನರಲ್ಲಿ ಹೆಚ್ಚಿದ ಆತಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಹಲವು ದಿನಗಳಿಂದ ಜನರ ಮೇಲೆ ದಾಳಿ ನಡೆಸಿ ಭೀತಿ ಮೂಡಿಸಿದ್ದ ಕರಡಿ ಸೆರೆಯಾಗಿದೆ ಎಂಬ ವಿಚಾರ ತಿಳಿದು ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ವಾಸಿಗಳು ನಿರಾಳರಾಗಿದ್ದರು. ಆದರೆ, ಮೊನ್ನೆ ರಾತ್ರಿ ಮತ್ತೆ ಬೇಗಿಹಳ್ಳಿ ಬಳಿ ಕರಡಿ ಕಾಣಿಸಿಕೊಂಡಿದೆ.

  • Share this:

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿದೆ ಎಂಬ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಶುಕ್ರವಾರ ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿ ಕರಡಿ ಕಾಣಿಸಿಕೊಂಡು ಜನರಲ್ಲಿ ಬೀತಿ ಮೂಡಿಸಿದ್ದು, ಕರಡಿ ಸೆರೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಕಳೆದ ಹಲವು ದಿನಗಳಿಂದ ಜನರ ಮೇಲೆ ದಾಳಿ ನಡೆಸಿ ಭೀತಿ ಮೂಡಿಸಿದ್ದ ಕರಡಿ ಸೆರೆಯಾಗಿದೆ ಎಂಬ ವಿಚಾರ ತಿಳಿದು ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ವಾಸಿಗಳು ನಿರಾಳರಾಗಿದ್ದರು. ಆದರೆ, ಮೊನ್ನೆ ರಾತ್ರಿ ಮತ್ತೆ ಬೇಗಿಹಳ್ಳಿ ಬಳಿ ಕರಡಿ ಕಾಣಿಸಿಕೊಂಡಿದೆ. ಹಾಗಾಗಿ, ಬನ್ನೇರುಘಟ್ಟ ಅರಣ್ಯದಿಂದ ಬೇರೆ ಕರಡಿ ಹಳ್ಳಿಗಳತ್ತ ದಾಂಗುಡಿಯಿಡುತ್ತಿದೆ. ಶುಕ್ರವಾರ ಸಂಜೆ 8 ಗಂಟೆ ಸುಮಾರಿಗೆ ಗ್ರಾಮದ ಸಮೀಪದ ತೋಟದಲ್ಲಿ ಹಣ್ಣುಗಳನ್ನು ತಿನ್ನಲು ಬಂದಿದ್ದು, ಜನರನ್ನು ಕಂಡು ಕಾಡಿನತ್ತ ಹೊರಟು ಹೋಗಿದೆ. ಕಳೆದ ಹಲವು ದಿನಗಳಿಂದ ಆಹಾರಕ್ಕಾಗಿ  ಕರಡಿ ಗ್ರಾಮದತ್ತ ಬರುತ್ತಿದೆ. ಸದ್ಯ ಯಾರ ಮೇಲು ಕರಡಿ ದಾಳಿ ಮಾಡಿಲ್ಲ. ಆದರೆ, ಬೇರೆ ಬೇರೆ ಕಡೆ ಕರಡಿ ದಾಳಿ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಭಯ ಮೂಡಿದೆ. ಹಾಗಾಗಿ ಕರಡಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರಾದ ಮುನಿಸ್ವಾಮಿ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಮತ್ತೆ ಮಹಾರಾಷ್ಟ್ರ ವಲಸಿಗರಿಂದ ಕೊರೋನಾ ಕಂಟಕ! ಲಾಕ್​ಡೌನ್​ ಭೀತಿಯಿಂದ ಮರಳಿ ಊರಿಗೆ ಬರುತ್ತಿರುವ ಕಾರ್ಮಿಕರು...!


ಇನ್ನೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕರಡಿಗಳ ಸಂಖ್ಯೆ ಹೆಚ್ಚಿದೆ. ಕರಡಿಗಳು ಹಳ್ಳಿಗಳತ್ತ ಬರಲು, ಹಲವು ಕಾರಣಗಳಿವೆ. ಸಾಮಾನ್ಯವಾಗಿ ಕರಡಿಗಳು ಹಳ್ಳಿಗಳು, ರೆಸಾರ್ಟ್ ಮತ್ತು ನಗರದ ಗಾರ್ಬೆಜ್ ಸುರಿಯುವ ಕಡೆ ಆಹಾರ ತಿನ್ನಲು ಬರುತ್ತದೆ. ಅದರಲ್ಲು ರಾತ್ರಿ ವೇಳೆ ಕರಡಿಗಳು ಹೆಚ್ಚು ಬರುತ್ತವೆ. ಇಂತಹ ಸನ್ನಿವೇಶದಲ್ಲಿ ಕರಡಿಗಳನ್ನು ಅನಗತ್ಯವಾಗಿ ಕೆಣಕಲು ಹೋಗಬಾರದು. ತನ್ನ ಪಾಡಿಗೆ ಅವುಗಳನ್ನು ಬಿಟ್ಟರೆ ಮರಳಿ ಕಾಡಿಗೆ ಹೊರಟು ಹೋಗುತ್ತವೆ. ಜೊತೆಗೆ ರೆಸಾರ್ಟ್​ಗಳಲ್ಲಿ ತಿಂದು ಉಳಿದ ಆಹಾರವನ್ನು ಹೊರಗಡೆ ಎಸೆಯಬಾರದು. ನಗರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದನ್ನು‌ ನಿಲ್ಲಿಸಿದರೆ ಕರಡಿಗಳು ಸಹ ಹಳ್ಳಿಗಳತ್ತ ಬರುವುದಿಲ್ಲ. ಒಂದು ವೇಳೆ ಕರಡಿ ಕಂಡಲ್ಲಿ ಸಮೀಪ ಹೋಗಿ ಕೆಣಕಲು ಹೋದರೆ ಅದು ಸ್ವಯಂ ರಕ್ಷಣೆಗಾಗಿ ದಾಳಿ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಮುಂಜಾನೆ ಮತ್ತು ರಾತ್ರಿ ವೇಳೆ ಜನ ಶಬ್ದ ಮಾಡುತ್ತಾ ಸಾಗಬೇಕು. ಆಗ ಕರಡಿ ದಾಳಿ ಮಾಡುವುದಿಲ್ಲ. ಜೊತೆಗೆ ಕರಡಿ ಕಂಡ ತಕ್ಷಣ ಸೆರೆ ಹಿಡಿಯಲು ಕಾನೂನಿನ ಅಡಿಯಲ್ಲಿ ಅವಕಾಶ ಇಲ್ಲಿ. ಮನುಷ್ಯನ ಮೇಲೆ ದಾಳಿ ಮಾಡುವ ಪ್ರವೃತ್ತಿ ಇದ್ದರೆ ಮಾತ್ರ ಅಂತಹ ಕರಡಿ ಸೆರೆ ಹಿಡಿಯಲಾಗುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಾದ ವನಶ್ರೀ ತಿಳಿಸಿದ್ದಾರೆ.


ಒಟ್ಟಿನಲ್ಲಿ, ಕರಡಿ ಸೆರೆಯಾಯ್ತು ಎಂದು ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೊಂದು ಕರಡಿ ಕಾಣಿಸಿಕೊಂಡು ಮತ್ತಷ್ಟು ಆತಂಕ‌ ಮೂಡಿಸಿದೆ. ಆದರೆ ಈ ಕರಡಿ ರಾತ್ರಿ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಯಾರ ಮೇಲೂ ದಾಳಿ ನಡೆಸದೆ ಇರುವುದು ಸಮಾಧಾನಕರ ವಿಷಯವಾಗಿದೆ. ಏನೇ ಆದರೂ ಅರಣ್ಯದಂಚಿನ ಗ್ರಾಮ ವಾಸಿಗಳು ಮಾತ್ರ ಮುಂಜಾನೆ ಮತ್ತು ರಾತ್ರಿ ವೇಳೆ ಅತ್ಯಂತ ಎಚ್ಚರಿಕೆಯಿಂದ ಸಂಚಾರ ಮಾಡಬೇಕಿದೆ.


(ವರದಿ : ಆದೂರು ಚಂದ್ರು)

Published by:Sushma Chakre
First published: