• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bangalore Airport: ಮೆಜೆಸ್ಟಿಕ್​ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್​ಪೋರ್ಟ್​ಗೆ ರೈಲು ಸಂಚಾರ ಆರಂಭ

Bangalore Airport: ಮೆಜೆಸ್ಟಿಕ್​ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್​ಪೋರ್ಟ್​ಗೆ ರೈಲು ಸಂಚಾರ ಆರಂಭ

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಟ ರೈಲು

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಟ ರೈಲು

Kempegowda International Airport | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಇಂದಿನಿಂದ ಡೆಮು ವಿಶೇಷ ರೈಲು ಸೇವೆ ಆರಂಭವಾಗಿದೆ. ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಚಿತ ಬಸ್​ ವ್ಯವಸ್ಥೆ ಇರಲಿದೆ.

  • Share this:

ಬೆಂಗಳೂರು (ಜ. 4): ಬೆಂಗಳೂರಿನಿಂದ ಇನ್ನುಮುಂದೆ ಕೇವಲ 10 ರೂ.ಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬಹುದು! ಅಚ್ಚರಿಯಾದರೂ ಇದು ಸತ್ಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಇಂದಿನಿಂದ ಡೆಮು ವಿಶೇಷ ರೈಲು ಸೇವೆ ಆರಂಭವಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ಮೊದಲ ರೈಲು ದೇವನಹಳ್ಳಿಯನ್ನು ತಲುಪಿತು. ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಚಿತ ಬಸ್​ ವ್ಯವಸ್ಥೆ ಇರಲಿದೆ.


ಇಂದಿನಿಂದ ಆರಂಭವಾದ ವಿಶೇಷ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿದರು. ಈ ಸೌಲಭ್ಯದಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ 10ರಿಂದ 15 ರೂ. ದರದಲ್ಲಿ ಏರ್​ಪೋರ್ಟ್​ ತಲುಪಲು ಸಾಧ್ಯವಿದೆ. ಇದರಿಂದ ದುಬಾರಿ ಹಣ ತೆತ್ತು ವೋಲ್ವೋ ಬಸ್​, ಕ್ಯಾಬ್​ಗಳಲ್ಲಿ ಹೋಗುವುದು ತಪ್ಪಿದಂತಾಗಿದೆ.



ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರೈಲಿನಲ್ಲಿ ಸೀಟುಗಳ ಮಧ್ಯೆ ಅಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ರೈಲಿನಲ್ಲೇ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಈ ವಿಶೇಷ ರೈಲು ಕೆಂಪೇಗೌಡ ಏರ್​ಪೋರ್ಟ್​ ಬಳಿಯ ಹಾಲ್ಟ್​ ಸ್ಟೇಷನ್​ಗೆ ತೆರಳಲಿದೆ. ಈ ರೈಲಿಗೆ ಯಲಹಂಕದಲ್ಲಿ ಸ್ಟಾಪ್​ ಇರಲಿದೆ. ಹಾಲ್ಟ್​ ಸ್ಟೇಷನ್​ನಿಂದ ಉಚಿತ ಬಸ್​ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.


ಇದನ್ನೂ ಓದಿ: ಸಂಪುಟ ಪುನಾರಚನೆ ಇಲ್ಲ, ನಾಯಕತ್ವ ಬದಲಾವಣೆ ಇಲ್ಲ: ಬಿಜೆಪಿ ಕಾರ್ಯಕಾರಿಣಿಯಲ್ಲಿ ಅರುಣ್ ಸಿಂಗ್ ಸ್ಪಷ್ಟನೆ


ಅಂದಹಾಗೆ ದೇವನಹಳ್ಳಿಯಿಂದ ಹಾಲ್ಟ್​ ಸ್ಟೇಷನ್​ಗೆ 3, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 2, ಬಂಗಾರಪೇಟೆಯಿಂದ 2, ಯಲಹಂಕದಿಂದ 1, ಯಶವಂತಪುರದಿಂದ 1, ಬೆಂಗಳೂರು ಕಂಟೋನ್ಮೆಂಟ್​ನಿಂದ 1 ರೈಲು ಹಾಲ್ಟ್​ ಸ್ಟೇಷನ್​ಗೆ ಸಂಚರಿಸಲಿವೆ. ಆರಂಭಿಕವಾಗಿ 10 ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿಕೊಂಡು ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹೊಂದಿದೆ.


ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್​ನಿಂದ ಏರ್​ಪೋರ್ಟ್​ಗೆ ದಿನಕ್ಕೆ ಮೂರು ಜೋಡಿ ರೈಲುಗಳು ಸಂಚರಿಸಲಿವೆ.




ಮೆಜೆಸ್ಟಿಕ್​ನಲ್ಲಿರುವ ರೈಲ್ವೆ ನಿಲ್ದಾಣದಿಂದ ಹಾಲ್ಟ್​ ಸ್ಟೇಷನ್​ಗೆ 50 ನಿಮಿಷಗಳು ಬೇಕಾಗುತ್ತವೆ. ಮುಂದೆ ಈ ಅವಧಿಯನ್ನು ಕಡಿಮೆಗೊಳಿಸಲು ಸ್ಟಾಪ್​ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Published by:Sushma Chakre
First published: