Bandipur: ಬಂಡೀಪುರದ ಸಾಕಾನೆಗಳಿಗೆ ಮಾವುತರಿಂದ ಅರಣ್ಯ ಸಂರಕ್ಷಣೆಯ ತರಬೇತಿ

Bandipur: ಅರಣ್ಯ ಸಂರಕ್ಷಣೆಯ ತುರ್ತು ಸಂದರ್ಭಗಳಲ್ಲಿ ಹೊರಗಿನಿಂದ ಸಾಕಾನೆಗಳನ್ನು ಬಂಡೀಪುರಕ್ಕೆ ಕರೆಸಿಕೊಳ್ಳುವುದು ಸಾಮಾನ್ಯ. ಆದರೆ, ಇದರ ಬದಲು ಇಲ್ಲಿನ ರಾಂಪುರ ಆನೆ ಶಿಬಿರದಲ್ಲಿರುವ ಆನೆಗಳನ್ನೇ ಬಳಸಿಕೊಳ್ಳಲು ಅವುಗಳಿಗೆ  ಸೂಕ್ತ ತರಬೇತಿ ನೀಡಲಾಗುತ್ತಿದೆ.

ಬಂಡೀಪುರದ ಆನೆಗಳಿಗೆ ತರಬೇತಿ

ಬಂಡೀಪುರದ ಆನೆಗಳಿಗೆ ತರಬೇತಿ

  • Share this:
ಚಾಮರಾಜನಗರ ( ಅ. 10)  ಅರಣ್ಯ ಸಂರಕ್ಷಣೆಗೆ ಬಳಸಿಕೊಳ್ಳಲು ಚಾಮರಾಜನಗರ ಜಿಲ್ಲೆ ಬ‌ಂಡೀಪುರದಲ್ಲಿ ಸಾಕಾನೆಗಳಿಗೆ ದೈಹಿಕ ಕಸರತ್ತಿನ  ಮೂಲಕ ತರಬೇತಿ ನೀಡಲಾಗುತ್ತಿದೆ. ಮಾವುತರು ಹಾಗು ಕಾವಾಡಿಗಳ ನಿರ್ದೇಶನವನ್ನು ಚಾಚುತಪ್ಪದೆ ಪಾಲಿಸುವಂತೆ ಪಳಗಿಸಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ  ಐನೂರು ಮಾರಿಗುಡಿ ವಲಯದಲ್ಲಿರುವ ರಾಂಪುರ ಆನೆ ಶಿಬಿರವಿದ್ದು, ಇಲ್ಲಿ ದಸರಾ ಆನೆ ಜಯಪ್ರಕಾಶ್  ಸೇರಿದಂತ ಹದಿಮೂರು ಆನೆಗಳಿವೆ. ವಿವಿಧೆಡೆ ಸೆರೆ ಹಿಡಿಯಲ್ಪಟ್ಟ ಈ ಆನೆಗಳನ್ನು ಇಲ್ಲಿ ಸಾಕಿ ಸಲಹಲಾಗುತ್ತಿದೆ. ಅರಣ್ಯ ಸಂರಕ್ಷಣೆಯ ತುರ್ತು ಸಂದರ್ಭಗಳಲ್ಲಿ ಹೊರಗಿನಿಂದ ಸಾಕಾನೆಗಳನ್ನು ಬಂಡೀಪುರಕ್ಕೆ ಕರೆಸಿಕೊಳ್ಳುವುದು ಸಾಮಾನ್ಯ. ಆದರೆ, ಇದರ ಬದಲು ಇಲ್ಲಿನ ರಾಂಪುರ ಆನೆ ಶಿಬಿರದಲ್ಲಿರುವ ಆನೆಗಳನ್ನೇ ಬಳಸಿಕೊಳ್ಳಲು ಅವುಗಳಿಗೆ  ಸೂಕ್ತ ತರಬೇತಿ ನೀಡಲಾಗುತ್ತಿದೆ.

ಇಲ್ಲಿರುವ ಸಾಕಾನೆಗಳಿಗೆ ಹಲವು ಮನರಂಜನಾತ್ಮಕ ಆಟ-ಪಾಠಗಳ ಮೂಲಕ ನಿತ್ಯ ದೈಹಿಕ ಕಸರತ್ತು ಮಾಡಿಸಲಾಗುತ್ತಿದೆ. ಮುಖ್ಯವಾಗಿ ಮಾವುತ ಹಾಗು ಕಾವಾಡಿಗಳು ನೀಡುವ ಸೂಚನೆಯನ್ನು ಪಾಲಿಸುವಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಅಂತಾರಾಜ್ಯ ಗಡಿಯಲ್ಲಿ ಕಳ್ಳರು ನುಸುಳದಂತೆ ಗಸ್ತು ಮಾಡಲು, ನಾಡಿಗೆ ಬಂದು ಉಪಟಳ ನೀಡುವ ಹುಲಿ ಹಾಗು ಪುಂಡಾನೆಗಳನ್ನು ಸೆರೆ ಹಿಡಿಯುವುದು, ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ,  ಹುಲಿ ಘರ್ಜನೆಗೂ ಹೆದರಿ ಓಡಿಹೋಗದಂತೆ, ಕ್ಲಿಷ್ಟಕರ ಸಂದರ್ಭಗಳಲ್ಲಿ ಮುನ್ನುಗುವುದು ಸೇರಿದಂತೆ ಅರಣ್ಯಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳುವ ಅಗತ್ಯ ರೀತಿಯ ತರಬೇತಿಗಳನ್ನು ನೀಡಿ ಪಳಗಿಸಲಾಗುತ್ತಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ತಿಳಿಸಿದ್ದಾರೆ.

Bandipur National Park Elephants Trained for Forest Conservation.
ಬಂಡೀಪುರದ ಆನೆಗಳಿಗೆ ತರಬೇತಿ


ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಹೆಂಡತಿಯ ಹೊಟ್ಟೆ, ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಗಂಡ!

ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ನಾನಾ ರೀತಿಯ ಆಟ-ಪಾಠಗಳ ಮೂಲಕ  ಆನೆಗಳನ್ನು ಪಳಗಿಸಲಾಗುತ್ತಿದೆ. ಸಾಕಾನೆಗಳ ದೈಹಿಕ ಸಾಮರ್ಥ್ಯ ಕಾಪಾಡಲು ವಿವಿಧ ರೀತಿಯ ದೈಹಿಕ ಕಸರತ್ತು ಮಾಡಿಸಲಾಗುತ್ತಿದೆ. ಆ ಮೂಲಕ ಅರಣ್ಯ ಸಂರಕ್ಷಣೆಯ ಕಾರ್ಯಾಚರಣೆಗೆ  ಸರ್ವಸನ್ನದ್ಧವಾಗೊಳಿಸಲಾಗುತ್ತಿದೆ ಎನ್ನುತ್ತಾರೆ ಐನೂರು ಮಾರಿಗುಡಿ ವಲಯಾರಣ್ಯಾಧಿಕಾರಿ ಷಣ್ಮುಖ.

ಶಿಬಿರದ ಸನಿಹದಲ್ಲೇ ಇರುವ ನುಗು ಹೊಳೆಯಲ್ಲಿ ಗಜಪಡೆಗೆ  ನಿತ್ಯವೂ ಸ್ನಾನ ಮಾಡಿಸಿ ಬಳಿಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಒಂದೊಂದು ಆನೆಗೂ ತಲಾ ಒಬ್ಬ ಮಾವುತ ಹಾಗೂ ಒಬ್ಬ ಕಾವಾಡಿಯನ್ನು ನಿಯೋಜಿಸಲಾಗಿದ್ದು, ದಟ್ಟಾರಣ್ಯದ  ನಡುವೆ   ಶಿಬಿರದಲ್ಲಿ ಇವುಗಳ ಲಾಲನೆ, ಪಾಲನೆ, ಪೋಷಣೆ ಮಾಡುತ್ತಾ ಅರಣ್ಯ ಸಂರಕ್ಷಣೆಗೆ ಸಜ್ಜುಗೊಳಿಸಲಾಗುತ್ತಿದೆ.
Published by:Sushma Chakre
First published: