ಮಾಳಿಗಮ್ಮಳ ಹುಲಿ ಪವಾಡ..! ದೇವಿಗೆ ಹರಕೆ ತೀರಿಸಿದ ಅರಣ್ಯಾಧಿಕಾರಿ; ಇಂದಿನಿಂದ ಪೂಜೆ ಪುನಾರಂಭ

ಕೆಬ್ಬೇಪುರ ಮತ್ತು ಚೌಡಹಳ್ಳಿ ಗ್ರಾಮದ ಮಧ್ಯೆ ಈಕೆಯ ಗುಡಿ ಇದೆ. ನಾಲ್ಕು ವರ್ಷಗಳಿಂದ ಇಲ್ಲಿ ಪೂಜೆ ನಿಂತು ಹೋಗಿತ್ತು. ಅದಾದ ಬಳಿಕ ಕೆಬ್ಬೇಪುರ ಮತ್ತು ಚೌಡಹಳ್ಳಿ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಪೂಜೆಯಾಗುತ್ತಿಲ್ಲವೆಂದು ದೇವಿ ಮುನಿಸಿಕೊಂಡಿದ್ದಾಳೆ ಎಂಬುದು ಇಲ್ಲಿನವರ ನಂಬಿಕೆ.

news18
Updated:October 15, 2019, 2:10 PM IST
ಮಾಳಿಗಮ್ಮಳ ಹುಲಿ ಪವಾಡ..! ದೇವಿಗೆ ಹರಕೆ ತೀರಿಸಿದ ಅರಣ್ಯಾಧಿಕಾರಿ; ಇಂದಿನಿಂದ ಪೂಜೆ ಪುನಾರಂಭ
ಮಾಳಿಗಮ್ಮ ದೇವಿ ಗುಡಿ
  • News18
  • Last Updated: October 15, 2019, 2:10 PM IST
  • Share this:
ಚಾಮರಾಜನಗರ(ಅ. 15): ಹಲವು ದಿನಗಳಿಂದ ಜನ ಜಾನುವಾರುಗಳಲ್ಲಿ ಭೀತಿ ಮೂಡಿಸಿದ್ದ, ಹಾಗೂ ಇಬ್ಬರು ರೈತರು ಮತ್ತು ಹಲವು ಜಾನುವಾರುಗಳನ್ನು ತಿಂದುಹಾಕಿದ್ದ ಹುಲಿ ನಿನ್ನೆ ಕೊನೆಗೂ ಸೆರೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಕೆಬ್ಬೆಪುರ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಿರಾಳರಾಗಿದ್ದಾರೆ. ಹುಲಿ ಕಾರ್ಯಾಚರಣೆ ಯಶಸ್ವಿಯಾಗುತ್ತಿರುವಂತೆಯೇ ಕೆಬ್ಬೆಪುರ ಗ್ರಾಮದ ಮಾಳಿಗಮ್ಮ ದೇವಸ್ಥಾನದಲ್ಲಿ ನಾಲ್ಕು ವರ್ಷಗಳ ಬಳಿಕ ಪೂಜೆ ಪುನಾರಂಭವಾಗಿದೆ. ಹುಲಿ ಯೋಜನೆ ಅಧಿಕಾರಿ ಬಾಲಚಂದರ್ ಅವರು ಇಂದು ಮಾಳಿಗಮ್ಮ ದೇವಿಗೆ ಹರಕೆ ಕೂಡ ತೀರಿಸಿದರು.

ಗುಂಡ್ಲುಪೇಟೆಯಲ್ಲಿ ಸಾಕಷ್ಟು ಭೀತಿ ಸೃಷ್ಟಿಸಿದ್ದ ನರಹಂತಕ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿತ್ತು. ನಾಲ್ಕೈದು ದಿನವಾದರೂ ಹುಲಿ ಕೈಗೆ ಸಿಗುತ್ತಿರಲಿಲ್ಲ. ಈ ವೇಳೆ, ಅರಣ್ಯಾಧಿಕಾರಿ ಬಾಲಚಂದರ್ ಅವರು ಸ್ಥಳೀಯರ ಸಲಹೆ ಮೇರೆಗೆ ಹುಲಿ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಮಾಳಿಗಮ್ಮ ದೇವಿಯಲ್ಲಿ ಹರಕೆ ಹೊತ್ತುಕೊಂಡರಂತೆ. ಅದಾಗಿ ಒಂದೇ ದಿನದಲ್ಲಿ ಕೆಬ್ಬೆಪುರ ಗ್ರಾಮದಲ್ಲೇ ಹುಲಿ ಸಿಕ್ಕಿಬಿದ್ದಿತ್ತು.

ಇದನ್ನೂ ಓದಿ: ಇನ್ಫೋಸಿಸ್ ಆವರಣದಲ್ಲಿ 35 ಸಾವಿರದ ಹಾವು ಸೆರೆಹಿಡಿದ ಸ್ನೇಕ್ ಶ್ಯಾಮ್ ಹೊಸ ಮೈಲಿಗಲ್ಲು

ಇದು ಮಾಳಿಗಮ್ಮ ದೇವಿಯದ್ದೇ ಪವಾಡ ಎಂಬುದು ಸ್ಥಳೀಯರ ನಂಬಿಕೆ. ನಾಲ್ಕು ವರ್ಷಗಳಿಂದ ಈ ದೇವಿಗೆ ಪೂಜೆಯೇ ನಡೆದಿಲ್ಲ. ಕೆಬ್ಬೇಪುರ ಮತ್ತು ಚೌಡಹಳ್ಳಿ ಗ್ರಾಮದ ಮಧ್ಯೆ ಈಕೆಯ ಗುಡಿ ಇದೆ. ಈ ಎರಡು ಗ್ರಾಮಸ್ಥರ ಮಧ್ಯೆ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ದೇವಸ್ಥಾನದಲ್ಲಿ ಪೂಜೆ ನಿಂತು ಹೋಗಿತ್ತು. ಅದಾದ ಬಳಿಕ ಕೆಬ್ಬೇಪುರ ಮತ್ತು ಚೌಡಹಳ್ಳಿ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಪೂಜೆಯಾಗುತ್ತಿಲ್ಲವೆಂದು ದೇವಿ ಮುನಿಸಿಕೊಂಡಿದ್ದಾಳೆ. ಗ್ರಾಮದ ಸುತ್ತಮುತ್ತಲೂ ಯಾವತ್ತೂ ಕೂಡ ಹುಲಿ ಕಾಣಿಸಿದ್ದಿಲ್ಲ. ಈಗ ಹುಲಿ ಪ್ರತ್ಯಕ್ಷವಾಗಿದ್ದು ಆಕೆಯ ಮುನಿಸೇ ಕಾರಣ. ಆಕೆಗೆ ಹರಕೆ ಹೊತ್ತುಕೊಂಡ ಮೇಲಷ್ಟೇ ಹುಲಿಯನ್ನು ಹಿಡಿಯಲು ಸಾಧ್ಯವಾಗಿದೆ. ಇದು ಮಾಳಿಗಮ್ಮ ದೇವಿಯ ಮಹಿಮೆ ಎಂದು ಇಲ್ಲಿನ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ನೀವು ಡಿಸಿಎಂ ಆಗಿದ್ದಾಗಲೇ ಚಾಮರಾಜನಗರ ಜಿಲ್ಲೆಆಗಿಲ್ಲವೇ ?; ಸಿದ್ದರಾಮಯ್ಯಗೆ ವಿಶ್ವನಾಥ್​ ತಿರುಗೇಟು

ಇವತ್ತಿನಿಂದ ಮಾಳಿಗಮ್ಮ ದೇವಿ ಗುಡಿಯಲ್ಲಿ ಪೂಜೆ ಮತ್ತೆ ಪ್ರಾರಂಭವಾಗಿದೆ. ಪ್ರತೀ ಮಂಗಳವಾರದಂದು ಇಲ್ಲಿ ಪೂಜೆ ನಡೆಯಲಿದೆ. ಜಾತ್ರೆಯನ್ನೂ ನಡೆಸಲು ತೀರ್ಮಾನಿಸಲಾಗಿದೆ. ಇವತ್ತು ನಡೆದ ಪೂಜೆಯಲ್ಲಿ ಕೆಬ್ಬೇಪುರ, ಚೌಡಹಳ್ಳಿ ಮತ್ತು ಹುಂಡಿಪುರ ಗ್ರಾಮಸ್ಥರು ಸೇರಿ ನೂರಾರು ಜನರು ಪಾಲ್ಗೊಂಡಿದ್ದರು. ಪಲಾವ್, ಸಿಹಿ ಪೊಂಗಲ್, ಕೇಸರಿಬಾತ್ ಮತ್ತು ಪಂಚಾಮೃತ ತಯಾರಿಸಿ ಭಕ್ತರಿಗೆ ಹಂಚಲಾಯಿತು.

ಒಟ್ಟಾರೆಯಾಗಿ, ದೇವಿಯ ಪವಾಡವೋ, ಅರಣ್ಯಾಧಿಕಾರಿಗಳ ಕಾರ್ಯಾಚರಣೆಯೋ ಈ ಭಾಗದಲ್ಲಿ ಭಯ ಹುಟ್ಟಿಸಿದ್ದ ಹುಲಿ ಸಿಕ್ಕಿಬಿದ್ದಿರುವುದಂತೂ ಹೌದು. ಇದೇ ನಿರಾಳತೆಯಲ್ಲಿ ಮಾಳಿಗಮ್ಮಳ ಪವಾಡದ ಧೈರ್ಯದಲ್ಲಿ ಗ್ರಾಮಸ್ಥರು ಜೀವನ ಮುಂದುವರಿಸಲು ಸಾಧ್ಯವಾಗಬಹುದು.(ವರದಿ: ಕೆ.ಎಂ. ನಂದೀಶ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ