Bagalkote: ಕೊರೊನಾ ಮಧ್ಯೆಯೇ ಮತ್ತೊಂದು ಪಾದಯಾತ್ರೆ: ಬನಶಂಕರಿ ಭಕ್ತರ ನಡಿಗೆಗೆ ಇಲ್ಲವೇ ಬ್ರೇಕ್?

ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಸ್ಥಾನದವರೆಗೆ ಭಕ್ತರು ಮಾಸ್ಕ್, ಸಾಮಾಜಿಕ ಅಂತರ, ಸಾನಿಟೈಜಿಂಗ್ ಯಾವುದೂ ಇಲ್ಲದೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ.

ಬನಶಂಕರಿ ಭಕ್ತರ ಪಾದಯಾತ್ರೆ

ಬನಶಂಕರಿ ಭಕ್ತರ ಪಾದಯಾತ್ರೆ

 • Share this:
  ಬಾಗಲಕೋಟೆ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ(Weekend Curfew) ಜಾರಿಯಲ್ಲಿದ್ದರೂ ಕೂಡ ಯಾವುದನ್ನೂ ಕೇರ್ ಮಾಡದೆ ಬನಶಂಕರಿ ದೇವಿಯ ಭಕ್ತರು ಪಾದಯಾತ್ರೆ (Banashankari devotees padayatra) ಮೂಲಕ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣ ಸೇರಿದಂತೆ ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಸ್ಥಾನದವರೆಗೆ ಭಕ್ತರು ಮಾಸ್ಕ್(Mask), ಸಾಮಾಜಿಕ ಅಂತರ(Social Distancing), ಸಾನಿಟೈಜಿಂಗ್ ಯಾವುದೂ ಇಲ್ಲದೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಮಕ್ಕಳಿಂದ ವೃದ್ದರವರೆಗೂ ಸಾವಿರಾರು ಜನರು ಭಾಗಿಯಾಗಿದ್ದಾರೆ. ಇಳಕಲ್ ನಗರದಿಂದ ಹೂಲಗೇರಿ, ಬಂಡರಗಲ್, ಕಾಟಾಪೂರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿರ, ಬನಶಂಕರಿ ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ.

  ಇಂದು ನಸುಕಿನ ಜಾವದಿಂದ ಪಾದಯಾತ್ರೆ ಹೊರಟಿದ್ದು, ಮಾರ್ಗಮಧ್ಯ ಅಲ್ಲಲ್ಲಿ ಪಾದಯಾತ್ರಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಂದಾಜು 50 ರಿಂದ 55 ಕಿ.ಮೀ.ಪಾದಯಾತ್ರೆ‌ ಮೂಲಕ ಬನಶಂಕರಿ ಜಾತ್ರೆಗೆ ತೆರಳಿದ್ದಾರೆ. ಜ. 17 ರಂದು ಬನದ ಹುಣ್ಣಿಮೆ ದಿನ ಬನಶಂಕರಿ ಜಾತ್ರೆ ನಡೆಯಲಿದ್ದು, ಒಂದು ತಿಂಗಳು ಕಾಲ  ಜನಜಂಗುಳಿ ಇರುತ್ತೆ.  ಲಕ್ಷಾಂತರ ಜನರು ಸೇರುವ ಕಾರಣಕ್ಕೆ  ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದೆ.  ಆದರೂ ಸಾವಿರಾರು ಭಕ್ತರು ಜಾತ್ರೆಗೆ ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಗೆ ಹೊರಟಿದ್ದಾರೆ.

  ಇದನ್ನೂ ಓದಿ: Weekend Curfew: ಮಾಸ್ಕ್ ಹಾಕಲ್ಲ ಏನ್ ಮಾಡ್ತೀಯಾ ಎಂದ ಯುವಕನಿಗೆ ಕಪಾಳಮೋಕ್ಷ

  ನಾಡಿನ ಶಕ್ತಿಪೀಠ ಬಾದಾಮಿ ಬನಶಂಕರಿ ದೇವಿ ರತೋತ್ಸವ ರದ್ದು..! 

  ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಪ್ರತಿ ವರ್ಷ ಜಾತ್ರೆಗೆ ರಾಜ್ಯ ಹೊರರಾಜ್ಯದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಈ ವರ್ಷ ಜನೇವರಿ 09 ರಿಂದ 19ರ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕೊರೊನಾ  ಕರಿನೆರಳು ಆವರಿಸಿದೆ. ದಿನೆ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಲ್ಲಿದೆ. ಮದುವೆ ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಕೋವಿಡ್ ನಿಯಮಗಳ ಪ್ರಕಾರ ಬನಶಂಕರಿ ದೇವಿ ಜಾತ್ರೆಯನ್ನ ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ.

  ಅದ್ದೂರಿಯಾಗಿ ನೆರವೇರುತ್ತಿದ್ದ ರತೋತ್ಸವ ರದ್ದು ಪಡಿಸಿ ಭಕ್ತರಿಗೆ ನಿರ್ಬಂಧ ಹಾಕಲಾಗಿದೆ.  ಸಧ್ಯ ಧಾರ್ಮಿಕ ವಿಧಾನ, ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇವಸ್ಥಾನದಲ್ಲಿ 50 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.

  ಲಕ್ಷಾಂತರ ಸಂಖ್ಯೆ ಭಕ್ತರು ಸೇರುತ್ತಿದ್ದ ರಾಜ್ಯದ ಅತೀ ದೊಡ್ಡ ಜಾತ್ರೆ..! 

  ಬಾದಾಮಿ ಬನಶಂಕರಿ ದೇವಿ ಜಾತ್ರೆ ಹೊಸ ವರ್ಷದ ಮೊದಲ ಜಾತ್ರೆಯಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ರಾಜ್ಯ ಮಾತ್ರವಲ್ಲದೆ ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದರು. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಹಲವು ವಿಶೇಷತೆಗಳಿದ್ದು, ನಾಟಕ ಪ್ರದರ್ಶನ, ಜಾನುವಾರು ಜಾತ್ರೆ, ರೈತರ ಕೃಷಿ ಉಪಕರಣಗಳು ಮಾರಾಟ, ಮನೆ ಬಳಕೆ ವಸ್ತುಗಳ ಮಾರಾಟ ಸೇರಿದಂತೆ ಹಲವಾರು ವ್ಯಾಪಾರ ವಹಿವಾಟುಗಳು ಇಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದವು. ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಯೂ ಜನರಿಂದ ತುಂಬಿ ತುಳುಕುತ್ತಿತ್ತು. ವಿವಿಧ ಜಿಲ್ಲೆಗಳಿಂದ ರೈತ ಕುಟುಂಬಗಳು ಎತ್ತಿನಗಾಡಿ ಟ್ರ್ಯಾಕ್ಟರ್ ಗಳಲ್ಲಿ ಕುಟುಂಬ ಸಮೇತ ಜಾತ್ರೆಗೆ ಬಂದು ಸಂಭ್ರಮ ಪಡುತ್ತಿದ್ದರು. ಆದ್ರೆ ಈ ಬಾರಿ ಜಾತ್ರೆಗೆ ಕೊರೊನಾ ಕರಿ ನೆರಳು ಆವರಿಸಿ ಜನರಿಗೆ ನಿರಾಸೆ ಮೂಡಿಸಿದೆ.

  ವರದಿ: ಮಂಜುನಾಥ್ ತಳವಾರ
  Published by:Kavya V
  First published: