ಗಣಿನಾಡು ‘ಕೈ’ ಟಿಕೆಟ್​ನಲ್ಲಿ ವಲಸಿಗರದ್ದೇ ಮೆಲುಗೈ: ಹಾಲಿ ಶಾಸಕರಿಬ್ಬರಿಗೆ ಟಿಕೆಟ್ ಕೊಕ್ಕೆ, ನಾಗೇಂದ್ರ ಜೊತೆ ಅಳಿಯನಿಗೂ ಟಿಕೆಟ್


Updated:April 16, 2018, 10:29 AM IST
ಗಣಿನಾಡು ‘ಕೈ’ ಟಿಕೆಟ್​ನಲ್ಲಿ ವಲಸಿಗರದ್ದೇ ಮೆಲುಗೈ: ಹಾಲಿ ಶಾಸಕರಿಬ್ಬರಿಗೆ ಟಿಕೆಟ್ ಕೊಕ್ಕೆ, ನಾಗೇಂದ್ರ ಜೊತೆ ಅಳಿಯನಿಗೂ ಟಿಕೆಟ್

Updated: April 16, 2018, 10:29 AM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಏ.15): ಅಂತೂ ಇಂತೂ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕಾತುರಕ್ಕೆ ತೆರೆಬಿದ್ದಿದೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಅತಿ ದೊಡ್ಡ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆಯ ಟಿಕೆಟ್ ಆಯ್ಕೆಯಲ್ಲಿ ವಲಸಿಗರಿಗೆ ಮಣೆ ಹಾಕಿದೆ. ಕೊನೆಗೂ ಅನಿಲ್ ಲಾಡ್, ಪಿ ಟಿ ಪರಮೇಶ್ವರ್ ಟಿಕೆಟ್ ಗಟ್ಟಿಸಿಕೊಂಡರೆ, ಇಬ್ಬರು ಹಾಲಿ ಶಾಸಕರು ಟಿಕೆಟ್ ವಂಚಿತರಾಗಿದ್ದಾರೆ. ನಾಗೇಂದ್ರ ತನ್ನ ಜೊತೆ ಅಳಿಯನಿಗೆ ಟಿಕೆಟ್ ಕೊಡಿಸಿದ್ದಾನೆ. ಅಚ್ಚರಿಯ ರೀತಿ ಹೊಸ ಮುಖಗಳಿಗೆ ಅವಕಾಶ ದೊರೆತಿದೆ.

ಗಣಿನಾಡು ಬಳ್ಳಾರಿಯಲ್ಲಿ ವಲಸಿಗರು ಟಿಕೆಟ್ ಪಡೆಯುವಲ್ಲಿ ಮೆಲುಗೈ ಸಾಧಿಸಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದ ವಿಜಯನಗರ ಸಾಮಾನ್ಯ ಕ್ಷೇತ್ರದಿಂದ ಆನಂದ್ ಸಿಂಗ್ ಟಿಕೆಟ್ ಪಡೆದಿದ್ದಾರೆ. ಆನಂದ್ ಸಿಂಗ್ ಜೊತೆ ಉತ್ತಮ ಒಡನಾಟವಿರುವ ಕಂಪ್ಲಿ ಮೀಸಲು ಎಸ್ ಟಿ ಕ್ಷೇತ್ರದಿಂದ ಕಳೆದ ಬಾರಿ ಕೈ ಟಿಕೆಟ್ ಸಿಗದೇ ಪಕ್ಷೇತರನಾಗಿ ಸ್ಪರ್ಧಿಸಿದ್ದ ಜೆ ಎನ್ ಗಣೇಶ್ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಈ ಬಾರಿ ಕ್ಷೇತ್ರ ಬದಲಾಯಿಸಿ ಶ್ರೀರಾಮುಲು ಪ್ರಾಬಲ್ಯವಿರುವ ಬಳ್ಳಾರಿ ಗ್ರಾಮಾಂತರದಿಂದ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಶಾಸಕ ನಾಗೇಂದ್ರ ತಾನು ಮಾತ್ರ ಸ್ಪರ್ಧಿಸದೇ ಸಿರುಗುಪ್ಪ ಮೀಸಲು ಎಸ್ ಟಿ ಕ್ಷೇತ್ರಕ್ಕೆ ತನ್ನ ಅಳಿಯ ಯುವಕ ಮುರಳಿಕೃಷ್ಣ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಜೆಡಿಎಸ್ ಶಾಸಕ ಭೀಮಾನಾಯ್ಕ ಕೊನೆಗೂ ಸಿಎಂ ಸಿದ್ರಾಮಯ್ಯ ಅವರ ಆರ್ಶಿವಾದದಿಂದ ಟಿಕೆಟ್ ಪಡೆದಿದ್ದಾರೆ. ಜಿಲ್ಲೆಯಲ್ಲಿರುವ ಎರಡು ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ದಲಿತರಿಗೆ ಟಿಕೆಟ್ ಕೊಡಬೇಕೆಂಬುದು ಮಲ್ಲಿಕಾರ್ಜುನ್ ಖರ್ಗೆ ಹಾಗೂ ದಲಿತ ಮುಖಂಡರ ಆಗ್ರಹವಾಗಿತ್ತು. ಇದೆಲ್ಲದರ ಮೀರಿ ಸಚಿವ ಸಂತೋಷ್ ಲಾಡ್ ಕೃಪೆಯಿಂದ ಭೀಮಾನಾಯಕ್ ಟಿಕೆಟ್ ಪಡೆದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಹಾಲಿ ಶಾಸಕ ಅನಿಲ್ ಲಾಡ್ ಗೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಯುವ ಕಾಂಗ್ರೆಸ್ ಮುಖಂಡ ಹನುಮ ಕಿಶೋರ್ ಪೈಪೋಟಿಯಿತ್ತು. ಆದರೆ ದೆಹಲಿಗೆ ಹೋಗಿ ಲಾಡ್ ಟಿಕೆಟ್ ಪಡೆದಿದ್ದಾರೆ. ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ಮೂಲಕ ಕಾಂಗ್ರೆಸ್ ಸರಕಾರಕ್ಕೆ ಮುಜುಗರ ತಂದು, ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ ಟಿ ಪರಮೇಶ್ವರ್ ನಾಯಕ್ ಈ ಬಾರಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಳೆದೆರಡು ಬಾರಿ ಗೆಲುವು ಸಾಧಿಸಿದ್ದ ಸಂಡೂರು ಕ್ಷೇತ್ರದ ಶಾಸಕ ಈ ತುಕಾರಾಂ ಈ ಬಾರಿ ಟಿಕೆಟ್ ಅನಾಯಾಸವಾಗಿ ಪಡೆದಿದ್ದಾರೆ. ಲಾಡ್ ಸಹೋದರರ ಸ್ವಂತೂರಿನಲ್ಲಿ ಈಗಲೂ ಸಚಿವ ಸಂತೋಷ್ ಲಾಡ್ ಪ್ರಾಬಲ್ಯವಿದೆ.

ಇದು ಹೊರತುಪಡಿಸಿದರೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಟಿಕೆಟ್ ಪಡೆಯಲು ಯಶಸ್ವಿಯಾಗಿಲ್ಲ. ನಿವೃತ್ತ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ ಕಿರಿಯ ಸಹೋದರ ಎನ್ ವೈ ಗೋಪಾಕೃಷ್ಣ ಈ ಬಾರಿ ತಮ್ಮ ಸ್ವಂತ ಕ್ಷೇತ್ರ ಮೊಳಕಾಲ್ಮೂರಿನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಈ ಬಾರಿ ಅಲ್ಲೂ ಟಿಕೆಟ್ ನೀಡಲು ಹೈಕಮಾಂಡ್ ಮನಸು ಮಾಡಲಿಲ್ಲ. ಸದ್ಯ ಇವರ ಪರಿಸ್ಥಿತಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಿದೆ. ಇನ್ನು ತನಗೆ ಟಿಕೆಟ್ ಬೇಡವೆಂದು ಪ್ರಕಟಿಸಿ ಅಚ್ಚರಿಮೂಡಿಸಿದ್ದ ಸಿರುಗುಪ್ಪ ಕ್ಷೇತ್ರದ ಹಾಲಿ ಶಾಸಕ ಬಿ ಎಂ ನಾಗರಾಜ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ಕ್ಷೇತ್ರದಲ್ಲಿ ನಾಗೇಂದ್ರ ಅಳಿಯ ಮುರಳಿಕೃಷ್ಣನಿಗೆ ಟಿಕೆಟ್ ನೀಡಲಾಗಿದೆ.

ಇನ್ನು ಅಚ್ಚರಿಯ ರೀತಿ ಕೂಡ್ಲಿಗಿ ಕ್ಷೇತ್ರದಲ್ಲಿ ಗುಜ್ಜಲ್ ರಘು ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಒಪ್ಪಿದೆ. ವಾಲ್ಮೀಕಿ ಸಮುದಾಯದ ಯುವ ನಾಯಕ ಸಚಿವ ಸತೀಶ್ ಜಾರಕಿಹೊಳಿ ಆಪ್ತ ರಘು ಟಿಕೆಟ್ ದೊರೆತಿದೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...