ಬಳ್ಳಾರಿ: ಕಾದ ಕೆಂಡದಂತಿರುವ ಸೂರ್ಯನ (Summer) ಪ್ರತಾಪಕ್ಕೆ ಗಣಿನಾಡು ಬಳ್ಳಾರಿ (Ballari) ಜನತೆ ಬಸವಳಿದು ಹೋಗಿದ್ದಾರೆ. ಮನೆ ಬಿಟ್ಟು ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯನ ಪಾಡೇ ಹೀಗಿದ್ದರೆ ಶ್ವಾನಗಳ ಪಾಡು ಹೇಗಿರುತ್ತೆ? ಅದಕ್ಕೆ ಬಳ್ಳಾರಿಯ ಪೊಲೀಸರು (Ballari Police) ತಮ್ಮ ಇಲಾಖೆಯ ಶ್ವಾನಗಳನ್ನ (Police Dogs) ಬಿಸಿಲಿನಿಂದ ತಣ್ಣಗಿಡಲು ನಿರ್ಧರಿಸಿದ್ದಾರೆ. ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಶ್ವಾನಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ಶ್ವಾನಗಳಿಗೆ (Foreign Breed Dogs) ರಾಯಲ್ ಟ್ರೀಟ್ಮೆಂಟ್ ಕೊಡಲಾಗ್ತಿದೆ. ಅದು ಅನಿವಾರ್ಯ ಕೂಡ. ಯಾಕೆಂದರೆ ಬಳ್ಳಾರಿಯ ಬಿಸಿಲಿಗೆ ಬೆದರಿರುವ ಪೊಲೀಸ್ ಶ್ವಾನಗಳು ಬದುಕಿಳಿಯುವುದು ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ಶ್ವಾನಗಳಗೆ ಕೂಲರ್ ವ್ಯವಸ್ಥೆ ಮಾಡಿದ್ದಾರೆ.
ತಂಪು ಹವಾಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ ಮನ್ ಪಿಂಚರ್, ಲ್ಯಾಬ್ರಡಾರ್ ತಳಿಯ ಶ್ವಾನಗಳಿಗೆ ಬಿಸಿಲು ತಡಿದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿರುವ ಆರು ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆ ಹೇಳಿ ಕೇಳಿ ಬಿಸಿಲಿಗೆ ಫೇಮಸ್. ಪ್ರತಿದಿನ ಸರಾಸರಿ 40-42 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ.
ಶ್ವಾನಗಳಿಗೆ ಕೂಲರ್
ನಾವಾದ್ರೂ ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ ಶ್ವಾನಗಳು ಬಾಯಿ ಮೂಲಕ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುತ್ತೆ. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಪೊಲೀಸ್ ವಿದೇಶಿ ತಳಿಯ ಶ್ವಾನಗಳಿಗೆ ಕೂಲರ್ ಅನಿವಾರ್ಯ.
ಇನ್ನು ಇಲ್ಲಿಯ ಶ್ವಾನಗಳಿಗೆ ಪ್ರತಿದಿನ ಎಳನೀರು ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ. ಬೇಸಿಗೆಯಲ್ಲಿ ಪೊಲೀಸರು ಶ್ವಾನಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಶ್ವಾನಗಳ ಬೇಸಿಗೆ ಮೆನು
ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಉಷ್ಣಾಂಶ ಇರುವ ಕಾರಣ ಪೊಲೀಸ್ ಶ್ವಾನಗಳಿಗೆ ದ್ರವ ರೂಪದ ಪದಾರ್ಥಗಳನ್ನ ಹೆಚ್ಚಾಗಿ ನೀಡಲಾಗುತ್ತಿದೆ.
ಬೆಳಗ್ಗೆ 8 ಗಂಟೆಗೆ ಹಾಲು, ಪೆಡ್ ಗ್ರೇ, ಮೊಟ್ಟೆ, ರಾಗಿ ಮಾಲ್ಟ್ ನೀಡಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಎಳೆನೀರು, ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಎಳನೀರು ಕೊಡಲಾಗುತ್ತಿದೆ. ಸಂಜೆ 5 ಗಂಟೆಗೆ ಮಟನ್, ತರಕಾರಿ ಮಿಶ್ರಿತ ರೈಸ್ ಕೊಡಲಾಗುತ್ತದೆ. ಜೊತೆಗೆ ವೈದ್ಯರು ನೀಡಿರುವ ಪ್ರೋಟೀನ್ ಹಾಗೂ ವಿಟಮಿನ್ ಟಾನಿಕ್ ಗಂಜಿಯಲ್ಲಿ ಸೇರಿಸಿ ಕೊಡಲಾಗುತ್ತಿದೆ.
ವಾರಕ್ಕೊಮ್ಮೆ ವೈದ್ಯಕೀಯ ಪರೀಕ್ಷೆ
ಎಳನೀರು ಜೊತೆಗೆ ಗ್ಲೂಕನ್ ಡಿ ಹಾಗೂ ದ್ರವ ಪದಾರ್ಥಗಳನ್ನ ನೀಡಲಾಗುತ್ತಿದೆ. ಆದರೆ ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ಎಳೆ ನೀರು ಗ್ಲೂಕನ್ ಡಿ ಹೊರತು ಪಡಿಸಿ ಎಲ್ಲವನ್ನ ಕೊಡಲಾಗುತ್ತದೆ. ಪ್ರತಿ ವಾರಕ್ಕೊಮ್ಮೆ ಶ್ವಾನಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.ಪ್ರೊಟಿನ್ ಹಾಗೂ ವಿಟಮಿನ್ ಇರುವ ಟಾನಿಕ್ ಶ್ವಾನಗಳಿಗೆ ನೀಡುವುದರಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ.
ದಿನಕ್ಕೆ 24 ಗಂಟೆ ಏರ್ ಕೂಲರ್ ವ್ಯವಸ್ಥೆ
ಬಳ್ಳಾರಿಯ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಶ್ವಾನಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗಳು ಒಂದೊಂದು ಕೂಲರ್ ಆಳವಡಿಸಲಾಗಿದೆ. ಈ ಕೂಲರ್ಗಳು ದಿನದ 24 ಗಂಟೆಯೂ ಆನ್ ಆಗಿರುತ್ತದೆ.
ಸದ್ಯ ಡಿಎಆರ್ ಮೈದಾನದಲ್ಲಿರುವ ಶ್ವಾನಗಳ ಕೊಠಡಿಗಳಲ್ಲಿ ಒಟ್ಟು 6 ಶ್ವಾನಗಳಿದ್ದು, ಪ್ರತಿ ಶ್ವಾನಕ್ಕೂ ಒಂದೊಂದು ಏರ್ ಕೂಲ್ ವ್ಯವಸ್ಥೆ ಮಾಡಲಾಗಿದೆ. ಅತಿ ಹೆಚ್ಚು ಬಿಸಿಲು ಇರುವ ಕಾರಣ ಪೊಲೀಸ್ ಶ್ವಾನಗಳು ಹೆಚ್ಚಾಗಿ ಹೊರಗಡೆ ಬರುವುದಿಲ್ಲ.
ಇದನ್ನೂ ಓದಿ: Idagundi Temple: ಇಡಗುಂಜಿಯಲ್ಲ, ಇದು ಇಡಗುಂದಿ! ಇಷ್ಟಾರ್ಥ ಕರುಣಿಸುವ ಶಿವನ ನೆಲೆ
ಶ್ವಾನಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ
ಬಿಸಿಲಿನ ತಾಪಮಾನದಿಂದ ಪಾರಾಗಲು ಮನುಷ್ಯರು ಎಸಿ, ಕೂಲರ್, ಮೊರೆ ಹೋದಂತೆ, ಪೊಲೀಸ್ ಶ್ವಾನಗಳಿಗೂ ಇದೇ ಸೌಲಭ್ಯ ಸಿಗುತ್ತಿದೆ ಎನ್ನುವುದು ವಿಶೇಷ.
ಯಾವುದೇ ಅಪರಾಧ ಘಟನೆ ನಡೆದರೂ ಅದನ್ನ ಪತ್ತೆ ಹಚ್ಚಲು ಈ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಆರೋಗ್ಯದಲ್ಲಿ ಏರುಪೇರು ಆಗದಂತೆ ರಕ್ಷಣೆ ಮಾಡುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಇತರರಿಗೆ ಮಾದರಿ.
ವರದಿ: ಬಸವರಾಜ್ ಹರನಹಳ್ಳಿ, ಬಳ್ಳಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ