ಬಳ್ಳಾರಿ: ಮಹಾನಗರ ಪಾಲಿಕೆಗೆ (Ballari City Corporation) ಕೇವಲ 23 ವರ್ಷದ ಯುವತಿ ಮೇಯರ್ (Mayor) ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ರಾಜ್ಯದ ಅತಿ ಕಿರಿಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನೂತನ ಮೇಯರ್ ಡಿ.ತ್ರಿವೇಣಿಗೆ ಇನ್ನೂ 23 ವರ್ಷ ಮಾತ್ರ. ಉಪಮೇಯರ್ (Deputy Mayor) ಆಗಿ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಳ್ಳಾರಿ ಪಾಲಿಕೆ ಮೇಯರ್- ಉಪಮೇಯರ್ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಕಾಂಗ್ರೆಸ್ (Congress) ನಿಂದ ಮೂರು ಜನ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಲ್ಕನೇ ವಾರ್ಡ್ ನ ತ್ರಿವೇಣಿ, 7ನೇ ವಾರ್ಡಿನ ಉಮಾದೇವಿ ಹಾಗೂ 38ನೇ ವಾರ್ಡಿನ ಕುಬೇರ ಅವರಿಂದ ನಾಮಪತ್ರ ಸಲ್ಲಿಕೆಯಾಗಿತ್ತು.
ಇದರಂತೆ ರಾಜ್ಯದ ಅತೀ ಚಿಕ್ಕ ವಯಸ್ಸಿನ ಮೇಯರ್ ಆಗಿ ತ್ರಿವೇಣಿ ಆಯ್ಕೆಯಾಗಿದ್ದಾರೆ. ತ್ರಿವೇಣಿ ವಾರ್ಡ್ ನಂಬರ್ ನಾಲ್ಕುರಿಂದ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಪಾಲಿಕೆ ಎರಡನೇ ಅವಧಿಯ ಮೇಯರ್ ಆಗಿ ತ್ರಿವೇಣಿ ಆಯ್ಕೆಯಾಗಿದ್ದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: Karnataka Elections: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
33 ನೇ ವಾರ್ಡಿನ ಜಾನಕಿ ಉಪಮೇಯರ್ ಸ್ಥಾನ ಅಲಂಕರಿಸಿದ್ದಾರೆ. ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ನಿಂದ ರಾಜೇಶ್ವರಿ ಸುಬ್ಬರಾಯುಡು ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರ ಅವಧಿ ಮುಗಿದ ಹಿನ್ನೆಲೆ ಈಗ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲಾಗಿತ್ತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು.
ಬಳ್ಳಾರಿ ನಗರ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಬಳಸಿಕೊಳ್ಳಲು ಬಿಜೆಪಿ ನಾಯಕರು ವಿಫಲವಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ದಿನವೇ ಬಿಜೆಪಿಯ ಭದ್ರಕೋಟೆಯಾಗಿರುವ ಬಳ್ಳಾರಿ ನಗರದ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಆಯ್ಕೆಯಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಳ್ಳಾರಿ ನಗರಕ್ಕೆ ಮೇಯರ್ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಪೊರೇಟರ್ ಗಳು ಆಯ್ಕೆಯಾಗಿರುವುದು ಬಿಜೆಪಿ ನಾಯಕರನ್ನು ಬೆಚ್ಚಿ ಬೀಳಿಸಿದೆ.
ಕಂದನನ್ನು ದೇಗುಲದಲ್ಲಿ ಬಿಟ್ಟುಹೋದರು
ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಆಗ ತಾನೇ ಹುಟ್ಟಿದ ಮಗುವನ್ನು ಯಶವಂತಪುರದ ಆಂಜನೇಯ ದೇವಸ್ಥಾನದ ಬಳಿ ಇಟ್ಟು ಹೋಗಲಾಗಿದೆ. ಯಶವಂತಪುರ ಠಾಣೆ ಪೊಲೀಸರು ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಆ್ಯಂಬುಲೆನ್ಸ್ ಬರೋದು ತಡವಾಗುತ್ತೆ ಎಂಬ ಸುದ್ದಿ ತಿಳಿದು ಹೊಯ್ಸಳ ವಾಹನದಲ್ಲೇ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ